ಸುವರ್ಣಸೌಧ (ವಿಧಾನಪರಿಷತ್ತು): ಪಶ್ಚಿಮ ಘಟ್ಟದ ಕುರಿತಾಗಿ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಸಚಿವ ಸಂಪುಟದ ಉಪಸಮಿತಿಯಲ್ಲಿ ತಿರಸ್ಕರಿಸಲಾಗಿದ್ದು, ಸಚಿವ ಸಂಪುಟದ ಮುಂದೆಯೂ ವಿಷಯ ತಂದು ಅಲ್ಲಿಯೂ ವರದಿ ತಿರಸ್ಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್.ಶಂಕರ್ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತಾಗಿ ಕೇಂದ್ರದಿಂದ ಪದೇ ಪದೇ ಒತ್ತಡ ಬರುತ್ತಿದೆ. ಆದರೆ ಅದನ್ನು ಒಪ್ಪುವ ಪ್ರಮೇಯವೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಅರಣ್ಯ ಇಲಾಖೆ ಅಡ್ಡಿ ಇದೆ ಎಂದೇ ಹೇಳಿ ತಡೆಯಾಗಿದ್ದ ಸಿಗಂದೂರು ಬಳಿಯ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದು, ಕೇಂದ್ರ ಸಚಿವರಿಂದ ಇತ್ತೀಚೆಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಕೊಡಗು ಮತ್ತು ಕೇರಳ ನಡುವಿನ ಹಳೆಯದಾದ ಎರಡು ಸೇತುವೆಗಳ ಪುನರ್ ನಿರ್ಮಾಣ ಅಥವಾ ದುರಸ್ತಿಗೆ ಇಲಾಖೆಯಿಂದ ಅನುಮತಿ ನೀಡಿಕೆಗೂ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಕೇರಳ ಸರಕಾರ ಈಗಾಗಲೇ ತಿರಸ್ಕರಿಸಿದ್ದು, ಇಲ್ಲಿಯೂ ತಿರಸ್ಕಾರ ಮಾಡಬೇಕೆಂದರು. ಇದಕ್ಕೂ ಮೊದಲು ಮಾತನಾಡಿದ ಐವನ್ ಡಿಸೋಜಾ, ರಾಜ್ಯದ 10 ಜಿಲ್ಲೆ, 40 ತಾಲೂಕು, 1,576 ಗ್ರಾಮಗಳ ವ್ಯಾಪ್ತಿಯಲ್ಲಿನ ಪ್ರದೇಶವನ್ನು ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಶೇ.20ಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಹೊಂದಿದ ಪ್ರದೇಶವನ್ನು ಸೂಕ್ಷ್ಮ ಎಂದು ಪರಿಗಣಿಸಿ, ಅಲ್ಲಿ ಯಾವುದೇ ಕೈಗಾರಿಕೆ, ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತಿಲ್ಲ. ದಕ್ಷಿಣ ಕನ್ನಡದ 45 ಗ್ರಾಮಗಳು ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದರು.