ವಿಧಾನಸಭೆ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಭರವಸೆ ನೀಡಿದ್ದಾರೆ. ಇಲಾಖಾವಾರು ಬೇಡಿಕೆ ಮೇಲಿನ ಚರ್ಚೆ ವೇಳೆ ಬಿಜೆಪಿಯ ಕೆ.ಜಿ.ಬೋಪಯ್ಯ, ಪಶ್ಚಿಮ ಘಟ್ಟದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಿರಲು ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ರಮಾನಾಥ ರೈ, ರಾಜ್ಯ ಸರ್ಕಾರ ಈಗಾಗಲೇ ಪಶ್ಚಿಮ ಘಟ್ಟ ವ್ಯಾಪ್ತಿಯ ಜಿಲ್ಲೆಗಳ ಜನರ ಅಭಿಪ್ರಾಯ ಸಂಗ್ರಹಿಸಿ, ರಾಜ್ಯದಲ್ಲಿ ಈ ವರದಿ ಜಾರಿ ಮಾಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಹೇಳಿದ್ದೇವೆ ಎಂದರು. ಆಗ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಜೀವರಾಜ್ ಗ್ರಾಮಸಭೆಗಳ ಮೂಲಕ ಜನರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರಮಾನಾಥ ರೈ, ಜನರ ಅಭಿಪ್ರಾಯ ಕೇಳದೇ, ಪ್ರಾಣಿಗಳ ಅಭಿಪ್ರಾಯ ಕೇಳಲಾಗುತ್ತದೆಯೇ. ಗ್ರಾಮಸಭೆಗಳಲ್ಲಿ ಜನರ ಅಭಿಪ್ರಾಯ ಪಡೆದುಕೊಂಡೇ ಕೇಂದ್ರಕ್ಕೆ ವರದಿ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ನಂತರ ಕೆ.ಜಿ.ಬೋಪಯ್ಯ, ರಾಜ್ಯದ ಅರಣ್ಯ ಪ್ರದೇಶದಲ್ಲಿ ತಾವೇ ಬೆಂಕಿ ಹಚ್ಚಿ, ಅದನ್ನು ತಾವೇ ನಂದಿಸುತ್ತಿರುವ ವಿಡಿಯೋ ಮಾಡಿ ವಿದೇಶಗಳಿಗೆ ಕಳುಹಿಸಿ ಹಣ ಸಂಗ್ರಹಿಸುತ್ತಾರೆ.
ಮತ್ತೆ ತಾವೇ ಸಸಿ ನೆಡುವುದಾಗಿ ತೋರಿಸಿಕೊಂಡು ವಿದೇಶಿ ನೆರವು ಪಡೆಯುತ್ತಾರೆ. ಇಂತಹ ನಕಲಿ ಪರಿಸರವಾದಿಗಳು, ಎನ್‌ಜಿಒಗಳ ಬಗ್ಗೆ ಎಚ್ಚರ ವಹಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಹೆಚ್ಚು ಮಳೆಯಾಗಬೇಕೆಂದು ಬಯಸುವ ಮಲೆನಾಡಿಗರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ ಬೋಪಯ್ಯ, ಬೇರೆಬೇರೆ ಕಾರಣಗಳನ್ನು ಹೇಳಿ ಮಲೆನಾಡಿನ ಜನರಿಗೆ ಅರಣ್ಯಾಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ.
ಅವರಿಗೆ ಜನರ ಜೊತೆಗೆ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಸಿಕೊಡಿ ಎಂದರು. ಬೋಪಯ್ಯ ಆರೋಪಕ್ಕೆ ಸಹಮತ ವ್ಯಕ್ತಪಡಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಅರಣ್ಯದಲ್ಲಿ ವಾಸ ಮಾಡುವವರು ಮರ ಕಡಿಯುವುದು, ಮನೆ ಕಟ್ಟುವುದು ಸಾಮಾನ್ಯ. ಹಾಗಂತ ಅಗತ್ಯಕ್ಕಿಂತ ಮರ ಕಡಿಯುವುದಿಲ್ಲ. ನಾನೇ ಹುಲಿ ಬೇಟೆ ಆಡಲು ಹೋಗುತ್ತಿದ್ದೆ. ನಾವು ವಿನಾಕಾರಣ ಕಾಡು ಹಾಳು ಮಾಡುವುದಿಲ್ಲ. ಪ್ರಾಣಿ ರಕ್ಷಣೆ ಕಾಯ್ದೆ ತಂದವರು ನಾವೇ. ಆದರೆ, ಮೊದಲು ಮನುಷ್ಯರು ಬದುಕಬೇಕು ಎಂದು ಹೇಳಿದರು.