Advertisement

30 ಸಾವಿರ ಭಕ್ತರಿಗೆ ಕಾಶಿ ಯಾತ್ರೆ: ಜೊಲ್ಲೆ

05:30 PM May 11, 2022 | Team Udayavani |

ರಾಮದುರ್ಗ: ಕಾಶಿಯಾತ್ರೆಗೆ ಹೋಗುವ ರಾಜ್ಯದ ಯಾತ್ರಾರ್ಥಿಗಳಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, ಮೊದಲ ಹಂತದಲ್ಲಿ ರಾಜ್ಯದಿಂದ 30 ಸಾವಿರ ಭಕ್ತಾದಿಗಳನ್ನು ದರ್ಶನಕ್ಕೆ ಕಳಿಸಲಾಗುವುದು ಎಂದು ಧಾರ್ಮಿಕ ದತ್ತಿ-ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಪಟ್ಟಣದ ತೇರ್‌ ಬಝಾರ್‌ದಲ್ಲಿ ದಾಸ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಾಸ ಸಾಹಿತ್ಯ ಪರಿಷತ್ತಿನ ಮಹಿಳಾ ಸದಸ್ಯರನ್ನು ಮೊದಲ ಹಂತದಲ್ಲೆ ಕಾಶಿ ಯಾತ್ರೆಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಕಾಶಿಗೆ ಹೋಗುವ ಯಾತ್ರಿಕರಿಗೆ ವಿಶೇಷವಾಗಿ ಬಿಡಲಾಗುವ ರೈಲಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ. ಅಲ್ಲದೇ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರ ಸ್ವೀಕರಿಸಿದ ನಂತರ ಹಲವು ಬದಲಾವಣೆಗಳನ್ನು ತಂದಿರುವುದಾಗಿ ತಿಳಿಸಿದ ಅವರು, 34 ಸಾವಿರ ದೇವಸ್ಥಾನಗಳ ಅರ್ಚಕರಿಗೆ ಜೀವವಿಮೆ ಆರಂಭಿಸಲಾಗಿದೆ.

ಕೊರೋನ 2 ನೇ ಅಲೆಯಲ್ಲಿ ದೇವಸ್ಥಾನದಲ್ಲಿ ಧನ್ವಂತರಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗಿದೆ. ದೇಶಿಯ ತಳಿ ಹಸುಗಳು ಉಳಿಯಬೇಕೆಂದು ಯೋಚಿಸಿ ರಾಜ್ಯದ 35 ಸಾವಿರ ದೇವಾಲಯ ಹಾಗೂ ಪಶು ಆಸ್ಪತ್ರೆಯಲ್ಲಿ ವಿಶೇಷ ಪೂಜೆ ಸಲ್ಲಿಸುವ ವಿನೂತನ ಕಾರ್ಯಕ್ರಮವನ್ನು ರೂಪಿಸಿರುವುದಾಗಿ ತಿಳಿಸಿದರು.

ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಮುಂದಿನ ವಾರ ತಮ್ಮ ಖಾತೆ ಬದಲಾಗುತ್ತಿರುವ ಬಗ್ಗೆ ಸಚಿವರಿಗೆ ನೆನಪಿಸಿದ ಶಾಸಕರು, ಅಭಿವೃದ್ಧಿ ವಿಚಾರದಲ್ಲಿ ತಮಗೆ ಸಾಕಷ್ಟು ಸಹಕಾರ ನೀಡಿದಕ್ಕೆ ಧನ್ಯವಾದ ಅರ್ಪಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೌದ್ಧಿಕ ಪ್ರಮುಖ ರಾಮಚಂದ್ರ ಎಡಕೆ ಮಾತನಾಡಿ, ನಮ್ಮ ಸಮಯ ಕಳೆಯುವುದಕ್ಕೆ ಹಾಗೂ ಅತ್ತೆಯ ಕಾಟ ತಪ್ಪಿಸಿಕೊಳ್ಳಲು ನಾವು ಭಜನೆಯ ಮೊರೆ ಹೋಗಬಾರದು. ಕಷ್ಟದಿಂದ ಹೊರ ಬರಬೇಕಾದರೆ, ಮಾನವನ ಬದುಕು ಹಸನಾಗಲು ಭಕ್ತಿಯಮಾರ್ಗ ಹಿಡಿಯಬೇಕು. ಆವಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಪ್ರಲ್ಹಾದಾಚಾರ್ಯಫಿರೋಜಾಬಾದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next