ನವದೆಹಲಿ: 2017ರ ಭಯೋತ್ಪಾದನೆ ಪ್ರಕರಣ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ದೆಹಲಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಂತ್ ಪಡೆಗೆ ಮಹತ್ವದ ಪಂದ್ಯ; ರಾಜಸ್ಥಾನ್ ರಾಯಲ್ಸ್ ಎದುರಾಳಿ
ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ಯಾಸಿನ್ ಸೇರಿದಂತೆ ಇತರ ಪ್ರತ್ಯೇಕತಾವಾದಿ ಮುಖಂಡರ ವಿರುದ್ಧ ಆರೋಪ ಪಟ್ಟಿ ದಾಖಲಿಸುವಂತೆ ಇತ್ತೀಚೆಗೆ ಕೋರ್ಟ್ ಆದೇಶ ನೀಡಿರುವುದಾಗಿ ಎಎನ್ ಐ ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸಿನ್ ಮಲಿಕ್ ಗೆ ಶಿಕ್ಷೆಯ ಪ್ರಮಾಣ ವಿಧಿಸುವ ಬಗ್ಗೆ ಮೇ 19ರಂದು ಕೋರ್ಟ್ ನಲ್ಲಿ ವಾದ ಮಂಡನೆಯಾಗಲಿದ್ದು, ಗರಿಷ್ಠ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ತಿಳಿಸಿವೆ.
ಭಯೋತ್ಪಾದನೆ ಪ್ರಕರಣದ ಕುರಿತು ಎನ್ ಐಎ ನ್ಯಾಯಾಧೀಶರಾದ ಪ್ರವೀಣ್ ಸಿಂಗ್, ಇತ್ತೀಚೆಗೆ ನೀಡಿರುವ ಆದೇಶದಲ್ಲಿ, ಸಾಕ್ಷಿಗಳ ಹೇಳಿಕೆ ಮತ್ತು ಬಲವಾದ ಪುರಾವೆಗಳಿಂದ ಎಲ್ಲಾ ಆರೋಪಿಗಳು ಪರಸ್ಪರ ಸಹಕಾರ ನೀಡಿರುವುದು ಸಾಬೀತಾಗಿದ್ದು, ಇವರೆಲ್ಲಾ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಗೆ ನೆರವು ಮತ್ತು ಧನಸಹಾಯ ನೀಡಿರುವುದು ಋಜುವಾತಾಗಿರುವುದಾಗಿ ತಿಳಿಸಿದ್ದರು.
2022ರ ಮಾರ್ಚ್ 16ರಂದು ಎನ್ ಐಎ ಕೋರ್ಟ್ ನೀಡಿರುವ ಆದೇಶದಲ್ಲಿ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಫೀಜ್ ಸಯೀದ್, ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಸೈಯದ್ ಸಲಾಹುದ್ದೀನ್, ಕಾಶ್ಮೀರಿ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್, ಶಬ್ಬೀರ್ ಶಾ, ಮಸ್ರಾತ್ ಅಲಾಂ ಮತ್ತು ಇತರರ ವಿರುದ್ಧ ಯುಎಪಿಎ ಕಾಯ್ದೆಯಡಿ ಆರೋಪ ದಾಖಲಿಸುವಂತೆ ತಿಳಿಸಿತ್ತು.