ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರರಾಜ್ಯದವರೂ ಇನ್ನು ಭೂಮಿ ಖರೀದಿಸಬಹುದು ಎಂಬ ಕಾನೂನಿಗೆ ಕೇಂದ್ರ ಸರ್ಕಾರ ಮಹತ್ವದ ತಿದ್ದುಪಡಿ ತಂದಿರುವ ನಿರ್ಧಾರವನ್ನು ಕಾಶ್ಮೀರಿ ಪಂಡಿತರು ಸ್ವಾಗತಿಸಿರುವುದಾಗಿ ತಿಳಿಸಿದ್ದಾರೆ.
ಜಾಗತಿಕ ಕಾಶ್ಮೀರಿ ಪಂಡಿತ್ ವಲಸೆಗಾರರ (ಜಿಕೆಪಿಡಿ) ವೇದಿಕೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರದಲ್ಲಿನ ಆಸ್ತಿಯ ಹಕ್ಕಿನಲ್ಲಿ ಸಮಾನತೆ ಮತ್ತು ನಿಷ್ಪಕ್ಷಪಾತ ಕಾನೂನನ್ನು ಜಾರಿಗೆ ತಂದಿರುವುದು ಸಂತಸದ ವಿಚಾರ ಎಂದು ಹೇಳಿದೆ.
ಜಮ್ಮು-ಕಾಶ್ಮೀರ ಶೀಘ್ರವಾಗಿ ಮತ್ತು ನ್ಯಾಯಯುತವಾಗಿ ಅಭಿವೃದ್ಧಿ ಹೊಂದಬೇಕಾದ ಅಗತ್ಯವಿದೆ. ಕೇಂದ್ರ ಸರ್ಕಾರದ ಈ ತಿದ್ದುಪಡಿಯಿಂದಾಗಿ ಹೂಡಿಕೆದಾರರು ಜಾಗವನ್ನು ಖರೀದಿಸಲು ಅನುಕೂಲ ಮಾಡಿಕೊಟ್ಟಿದ್ದು, ಇದರಿಂದ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ತಿಳಿಸಿದೆ.
ಪ್ರತ್ಯೇಕತವಾದಿ ಸಿದ್ದಾಂತವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ವಸತಿ ಹಾಗೂ ಖಾಯಂ ನಿವಾಸಿ ಎಂಬ ರಾಜಕೀಯ ಅಸ್ತ್ರವನ್ನು ದುರುಪಯೋಗಪಡಿಸಿ ಕೊಂಡಿರುವುದೇ ಜಮ್ಮು-ಕಾಶ್ಮೀರದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿತ್ತು ಎಂದು ಹೇಳಿದೆ.
ಕಾಶ್ಮೀರ ಕಣಿವೆಯಲ್ಲಿನ ಇಸ್ಲಾಮಿಕ್ ಭಯೋತ್ಪಾದನೆಗೆ ಕಾರಣವಾದ ಮತ್ತು ಸೈದ್ದಾಂತಿಕ ಮತ್ತು ಪ್ರತ್ಯೇಕತಾವಾದಿಗಳಿಗೆ ಈ ಖಾಯಂ ನಿವಾಸಿ ಎಂಬ ಪ್ರತ್ಯೇಕ ಕಾನೂನಿಂದಾಗಿ ಕಾಶ್ಮೀರಿಗಳು, ಅಮಾಯಕರು ಸೇರಿದಂತೆ ಸಾವಿರಾರು ಜನರನ್ನು ಕೊಲ್ಲಲು ದಾರಿ ಮಾಡಿಕೊಟ್ಟಿತ್ತು ಎಂದು ಜಿಕೆಪಿಡಿ ಆರೋಪಿಸಿದೆ.
ಇದೀಗ ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ವಾಸವಿಲ್ಲದವರು ಕೂಡಾ ಜಮೀನು ಖರೀದಿಸಬಹುದು ಎಂಬ ಕಾನೂನು ಜಾರಿಗೆ ತಂದಿದ್ದರಿಂದ ಜಮ್ಮು-ಕಾಶ್ಮೀರ ಆರ್ಥಿಕವಾಗಿ ಶೀಘ್ರವಾಗಿ ಅಭಿವೃದ್ದಿ ಹೊಂದಲಿದೆ ಎಂದು ತಿಳಿಸಿದೆ.