ಶ್ರೀನಗರ: ಎನ್‌ಐಎ ಕಾಯ್ದೆಯಡಿ ಕಾಶ್ಮೀರದಲ್ಲಿ ರೂಪಿತವಾದ ನ್ಯಾಯಾಲಯವೊಂದು ಇದೇ ಮೊದಲ ಬಾರಿಗೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಭಯೋತ್ಪಾದನೆ ಬೆಂಬಲಿಸಿ, ಭಾರತ ವಿರೋಧಿ ಅಂಕಣವನ್ನು ಪ್ರಕಟಿಸಿದ್ದಕ್ಕಾಗಿ ಕಾಶ್ಮೀರದ ಪತ್ರಕರ್ತ ಪೀರ್‌ಜಾದಾ ಫಹಾದ್ ಶಾ ಹಾಗೂ ಲೇಖನವನ್ನು ಬರೆದ ಕಾಶ್ಮೀರ ವಿವಿ ವಿದ್ವಾಂಸ ಅಬ್ದುಲ್ ಅಲಾ ಫಜಿಲಿ ಈ ಪ್ರಕರಣದಲ್ಲಿ ಆರೋಪಗಳಾಗಿದ್ದಾರೆ.
ಇಬ್ಬರೂ ದೇಶದ್ರೋಹದ ಬರೆಹದ ಹಿನ್ನೆಲೆಯಲ್ಲಿ ಜೈಲುಶಿಕ್ಷೆಗೊಳಗಾಗುವ ಸಾಧ್ಯತೆ ದಟ್ಟವಾಗಿದೆ.
ಫಜಿಲಿ ಬರೆದಿದ್ದ “ಗುಲಾಮಗಿರಿಯ ಬೇಡಿಗಳು ಮುರಿಯಲ್ಪಡುತ್ತವೆ’ ಎನ್ನುವ ಲೇಖನವನ್ನು ಪತ್ರಕರ್ತ ಫಹಾದ್ ಶಾ ಸಂಪಾದಕತ್ವದ “ದಿ ಕಾಶ್ಮೀರಿ ವಾಲಾ’ ಹೆಸರಿನ ವೆಬ್‌ಸೈಟ್‌ನಲ್ಲಿ ಕಳೆದವರ್ಷ ಪ್ರಕಟಿಸಲಾಗಿತ್ತು. ಅಂಕಣದಲ್ಲಿ ಪ್ರತ್ಯೇಕವಾದ, ಭಯೋತ್ಪಾದನೆಯನ್ನು ಬೆಂಬಲಿಸಲಾಗಿದೆ.
ಜೊತೆಗೆ ಅಂಕಣಕಾರ ಹಾಗೂ ಸಂಪಾದಕ ಸ್ಥಳೀಯ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ, ಎನ್‌ಐಎ ಪ್ರಕರಣ ದಾಖಲಿಸಿತ್ತು. ಆರೋಪ ದೃಢಪಡಿಸಲು ಪೊಲೀಸರು ಸಂಗ್ರಹಿಸಿರುವ ಮಾಹಿತಿಗಳನ್ನು ಪರಿಶೀಲಿಸಿ, ವಿಶೇಷ ನ್ಯಾಯಾಧೀಶರಾದ ಅಶ್ವನಿ ಕುಮಾರ್ ದೋಷಾರೋಪ ನಿಗದಿಪಡಿಸಿದ್ದಾರೆ.
ಆರೋಪಿ ಫಾಜಿಲ್ ವಿರುದ್ಧ ಐಪಿಸಿ ಸೆಕ್ಷನ್ 121,153ಬಿ, 201 ದಾಖಲಿಸಿದ್ದು, ಯುಎಪಿಎ ಸೆಕ್ಷನ್ 13 ಹಾಗೂ 18ರ ಅನ್ವಯ ದೋಷಾರೋಪಣೆ ರೂಪಿಸಲಾಗಿದೆ.ಪತ್ರಕರ್ತ ಶಾ ವಿರುದ್ಧ ಯುಎಪಿಎ ಸೆಕ್ಷನ್13,18 ಹಾಗೂ ಐಪಿಸಿ ಸೆಕ್ಷನ್ 121, ಎಫ್ಸಿಆರ್‌ಎ ಅನ್ವಯ 153ಬಿ ಹಾಗೂ ಸೆಕ್ಷನ್ 35 ಅನ್ವಯ ದೋಷಾರೋಪ ನಿಗದಿಪಡಿಸಿದೆ.