Advertisement

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

11:24 PM Jun 19, 2021 | Team Udayavani |

ನವದೆಹಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ವಾಪಸ್‌ ಪಡೆದು ಪ್ರಸಕ್ತ ವರ್ಷ ಆ.5ಕ್ಕೆ ಸರಿಯಾಗಿ 2 ವರ್ಷಗಳು ಪೂರ್ತಿಯಾಗಲಿವೆ. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಜೂ.24 (ಗುರುವಾರ) ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಆಯೋಜಿಸಿದೆ. ಇದರ ಜತೆಗೆ ಕೇಂದ್ರಾಳಿತ ಪ್ರದೇಶಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುವ ಇರಾದೆಯೂ ಸರ್ಕಾರಕ್ಕೆ ಇದೆ ಎಂದು ವಿಶ್ಲೇಷಿಸಲಾಗುತ್ತದೆ.

Advertisement

2020ರ ಮಾ.15ರಂದು ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಾರ್ಟಿಯ ಮುಖಂಡರು ಮತ್ತು ಪದಾಧಿಕಾರಿಗಳು ಪ್ರಧಾನಿಯವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಶೀಘ್ರದಲ್ಲಿಯೇ ರಾಜ್ಯ ಸ್ಥಾನಮಾನ ವಾಪಸ್‌ ಮಾಡುವ ಬಗ್ಗೆ ವಾಗ್ಧಾನ ಮಾಡಿದ್ದರು. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶದ ರಾಜಕೀಯ ಪಕ್ಷಗಳ ನಾಯಕರ ಜತೆಗೆ ಮಾತುಕತೆ ನಡೆಸಲು ಮುಂದಾಗಿದೆ.

2020ರಲ್ಲಿ ನಡೆದಿದ್ದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆ ಬಳಿಕ ಇದು ಮಹತ್ವದ ನಿರ್ಧಾರವಾಗಲಿದೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವಾಲ್‌ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ನಿರ್ಧಾರವೇಕೆ?:
ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ನೀಡಿದ ಮಾಹಿತಿ ಪ್ರಕಾರ ಸದ್ಯ ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ವಿವಿಧ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿವೆ. ಭದ್ರತಾ ಸ್ಥಿತಿಯೂ ನಿಯಂತ್ರಣದಲ್ಲಿದೆ. ಅದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜಕೀಯ ಪಕ್ಷಗಳ ಜತೆಗೆ ಮಾತುಕತೆ ನಡೆಸಲು ಉದ್ದೇಶಿಸಿದ್ದಾರೆ ಎಂದರು.

ವರ್ಷಾಂತ್ಯಕ್ಕೆ ಚುನಾವಣೆ?
ವಿಧಾನಸಭೆ ಚುನಾವಣೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ಉತ್ತರಿಸಿದ ಆ ಅಧಿಕಾರಿ “ವಿಧಾನಸಭೆ ಚುನಾವಣೆ ನಡೆಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ. ವರ್ಷಾಂತ್ಯಕ್ಕೆ ಚುನಾವಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಆದರೆ, ಕ್ಷೇತ್ರಗಳ ಪುನರ್‌ ವಿಂಗಡಣಾ ಸಮಿತಿ ವರದಿ ಸಲ್ಲಿಸಿದ ಬಳಿಕ, ಅದನ್ನು ಪರಿಶೀಲಿಸಿದ ಬಳಿಕವೇ ಚುನಾವಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಆ ಅಧಿಕಾರಿ ಹೇಳಿದ್ದಾರೆ.

Advertisement

ಸಿ.ಎಸ್‌. ಕೂಡ ಬದಲು
ಕೇಂದ್ರಾಡಳಿತ ಪ್ರದೇಶಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲಾಗುತ್ತದೆ ಎಂಬ ವದಂತಿ ಪುಷ್ಟೀಕರಿಸಲು ಮತ್ತೂಂದು ಕಾರಣವೂ ಇದೆ. ಮುಖ್ಯ ಕಾರ್ಯದರ್ಶಿಯಾಗಿದ್ದ ಬಿ.ವಿ.ಆರ್‌.ಬಾಲಸುಬ್ರಹ್ಮಣ್ಯಂ ಸ್ಥಾನದಲ್ಲಿ ಅಶೋಕ್‌ ಕುಮಾರ್‌ ಮೆಹ್ತಾ ಅವರನ್ನು ಮತ್ತೆ ನೇಮಿಸಲಾಗಿದೆ. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅವರು ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು ಮತ್ತು ಮುಖ್ಯ ಕಾರ್ಯದರ್ಶಿಯೂ ಆಗಿದ್ದರು.

ಇಂದು ಸಭೆ:
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಡೆಮಾಕ್ರಾಟಿಕ್‌ ಪಕ್ಷ ಕೂಡ ಕೇಂದ್ರ ಸರ್ಕಾರದ ಉದ್ದೇಶಿತ ಮಾತುಕತೆ ಆಹ್ವಾನ ಬಂದಿರುವುದನ್ನು ಖಚಿತಪಡಿಸಿದೆ. ಇದರ ಜತೆಗೆ ಜೂ.24ರಂದು ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಪ್ರಸ್ತಾಪಿಸಬೇಕಾದ ಅಂಶಗಳ ಬಗ್ಗೆ ಪರಿಶೀಲಿಸಿ, ಚರ್ಚೆ ನಡೆಸಲು ಭಾನುವಾರ ಶ್ರೀನಗರದಲ್ಲಿ ಸಭೆ ಸೇರಲಿದೆ. ಈ ಬಗ್ಗೆ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ “ನವದೆಹಲಿಯಲ್ಲಿ ನಡೆಯಲಿರುವ ಮಾತುಕತೆಗಳ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಭಾನುವಾರ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಭಾನುವಾರ ನಡೆಯಲಿದೆ’ ಎಂದರು. ಆದರೆ, ಪೀಪಲ್ಸ್‌ ಅಲಯನ್ಸ್‌ ಫಾರ್‌ ಗುಪಾRರ್‌ ಡೆಕ್ಲರೇಷನ್‌ನ ಎಲ್ಲಾ ಸದಸ್ಯ ಪಕ್ಷಗಳು ಸಭೆಯಲ್ಲಿ ಭಾಗವಹಿಸುವ ಬಗ್ಗೆ ಖಚಿತ ನಿರ್ಧಾರ ಪ್ರಕಟಿಸಿಲ್ಲ.

ಸಮಿತಿ ಕೆಲಸ ಶುರು:
ಕೇಂದ್ರಾಡಳಿತ ಪ್ರದೇಶಕ್ಕಾಗಿ ರಚಿಸಿರುವ ಕ್ಷೇತ್ರ ಪುನರ್‌ ವಿಂಗಡಣೆ ಸಮಿತಿ ಕೆಲಸ ಶುರು ಮಾಡಿದೆ. 20 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಮಿತಿ ಆಯಾ ಜಿಲ್ಲೆಯ ಪ್ರಾಥಮಿಕ ಭೌಗೋಳಿಕ ಮಾಹಿತಿ, ಜನಸಂಖ್ಯೆ, ಜನರ ರಾಜಕೀಯ ನಿರೀಕ್ಷೆಗಳು ಮತ್ತು ಇತರ ಅಂಶಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಈ ತಿಂಗಳ ಮೊದಲ ವಾರದಲ್ಲಿಯೇ ಪತ್ರ ರವಾನೆಯಾಗಿದೆ. 2002-2008ರ ನಡುವೆ, ದೇಶದ ಇತರ ಭಾಗಗಳಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ನಡೆಸಿದ್ದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಹೊರಗಿಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next