ನವದೆಹಲಿ: ಒಂದು ಕಡೆಯಲ್ಲಿ ಕಾಶ್ಮೀರವನ್ನು ಶತಾಯಗತಾಯ ಭಾರತದ ಕೈಯಿಂದ ಕಿತ್ತುಕೊಂಡು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಪಾಕಿಸ್ಥಾನ ಸಾಧ್ಯವಿರುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಕಾಶ್ಮೀರವು ಯಾವತ್ತೂ ಪಾಕಿಸ್ಥಾನದ ಭಾಗವಾಗಿರಲೇ ಇಲ್ಲ ಮತ್ತು ಮುಂದೆಯೂ ಅದು ಸಾಧ್ಯವಾಗುವುದಿಲ್ಲ ಎಂದು ಆ ದೇಶಕ್ಕೆ ನೇರವಾಗಿ ಹೇಳುವ ಮೂಲಕ ಇಸ್ಲಾಂ ಚಿಂತಕರೊಬ್ಬರು ಇದೀಗ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.
ಪರಿಸ್ಥಿತಿಯನ್ನು ನೀವು ಪ್ರಾಮಾಣಿಕವಾಗಿ ಎದುರಿಸಬೇಕು ಎಂದು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ಥಾನಕ್ಕೆ ಕಿವಿಮಾತು ಹೇಳಿರುವ ವಿವಾದಾತ್ಮಕ ಇಸ್ಲಾಂ ಚಿಂತಕರೇ ಇಮಾಮ್ ಮಹಮ್ಮದ್ ತಹ್ವಿಡಿ ಆಗಿದ್ದಾರೆ. ‘ಶಾಂತಿಯ ನ್ಯಾಯವಾದಿ’, ‘ಸುಧಾರಣಾವಾದಿ ಪ್ರವಾದಿ’ ಎಂದು ಕರೆಯಿಸಿಕೊಳ್ಳುವ ಇಮಾಮ್ ಮಹಮ್ಮದ್ ಅವರು ಕಾಶ್ಮೀರ ವಿಚಾರವಾಗಿ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
‘ಕಾಶ್ಮೀರ ಎಂದೂ ಪಾಕಿಸ್ಥಾನದ ಭಾಗವಾಗಿರಲಿಲ್ಲ ಮತ್ತು ಅದು ಮುಂದೆಂದೂ ಪಾಕಿಸ್ಥಾನದ ಭಾಗವಾಗುವುದೂ ಇಲ್ಲ. ಮಾತ್ರವಲ್ಲದೇ ಪಾಕಿಸ್ಥಾನ ಮತ್ತು ಕಾಶ್ಮೀರ ಎರಡೂ ಸಹ ಭಾರತದ ಭಾಗಗಳೇ ಆಗಿವೆ’ ಎಂದು ಈ ಇಮಾಮ್ ಪ್ರತಿಪಾದಿಸಿದ್ದಾರೆ.
ಇನ್ನೂ ಮುಂದುವರೆದು ‘ಈ ಪೂರ್ತಿ ಪ್ರದೇಶವೇ ಹಿಂದೂ ಭೂಮಿಯಾಗಿದೆ ಮತ್ತು ಇವರೆಲ್ಲಾ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾದವರಾಗಿದ್ದಾರೆ ಎಂಬ ಸತ್ಯವನ್ನು ಬಚ್ಚಿಡಬೇಡಿ ಮತ್ತು ಭಾರತವು ಇಸ್ಲಾಂ ಧರ್ಮಕ್ಕಿಂತಲೂ ಪುರಾತನವಾದುದಾಗಿದೆ.’ ಎಂದೂ ಇಮಾಮ್ ಮಹಮ್ಮದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮಾತ್ರವಲ್ಲದೇ ಪಾಕಿಸ್ಥಾನವನ್ನು ಏಕಾಂಗಿಯಾಗಿಸಿ ಎಂದೂ ಸಹ ಇಮಾಮ್ ಅವರು ವಿಶ್ವನಾಯಕರಿಗೆ ಕರೆಕೊಟ್ಟಿದ್ದಾರೆ.
ಎಡ ಮತ್ತು ಬಲಪಂಥೀಯ ತೀವ್ರಗಾಮಿ ಧೋರಣೆಗಳ ವಿರೋಧಿಯಾಗಿರುವ ಇಮಾಮ್ ಮಹಮ್ಮದ್ ಅವರು ಈ ಹಿಂದೆಯೂ ಹಲವಾರು ಸಲ ಕಾಶ್ಮೀರ ವಿಚಾರದ ಕುರಿತಾಗಿ ‘ಹಿಂದೂ ಭೂಮಿ’ ಎಂಬ ತಮ್ಮ ನಿಲುವನ್ನು ಹಲವು ವೇದಿಕೆಗಳಲ್ಲಿ ಹಂಚಿಕೊಂಡಿದ್ದರು. ಮಾತ್ರವಲ್ಲದೇ ಕಳೆದ ಬಾರಿಯ ತಮ್ಮ ಭಾರತ ಭೇಟಿಯ ಸಂದರ್ಭದಲ್ಲೂ ಇಮಾಮ್ ಅವರು ತಮ್ಮ ಈ ನಿಲುವನ್ನೇ ಪುನರುಚ್ಚರಿಸಿದ್ದರು.
ಇರಾನ್ ಮೂಲದ ಇಮಾಮ್ ಮಹಮ್ಮದ್ ತಹ್ವಿದಿ ಅವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿಯೇ ತಂದೆ-ತಾಯಿಗಳೊಂದಿಗೆ ಆಸ್ಟ್ರೇಲಿಯಾಗೆ ವಲಸೆ ಹೋದರು. ಇಸ್ಲಾಂ ಧರ್ಮದ ಸುಧಾರಣಾವಾದಿ ಪ್ರವಾದಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.