Advertisement
“ಸರ್, ಅವೆಲ್ಲ ಆ ಬಳಿಕ ನೋಡೋಣ, ನೀವೀಗ ನಮ್ಮ ಗೆಸ್ಟ್, ನಮ್ಮ ಹುಡುಗಿ ನಿಮ್ಮ ಮಂಗಳೂರಿನ ಕಾಲೇಜಿನಲ್ಲಿ ಫಿಜಿಯೋಥೆರಪಿ ಓದುತ್ತಿದ್ದಾಳೆ. ಹಾಗಾಗಿ, ನಿಮ್ಮ ದೇಖ್‌ಬಾಲ್ ನಮ್ಮ ಜವಾಬ್ದಾರಿ ತಾನೇ?’ ಹೀಗೆ ಹಿಂದಿ, ಉರ್ದು ಮಿಶ್ರಿತ ಇಂಗ್ಲೀಷಿನಲ್ಲಿ ಮಾತಾಡುತ್ತಾ ವಾಹನ ಚಲಾಯಿಸಿದರು. ನನಗೇಕೋ, ತುಟಿಯಲ್ಲಿ ಕೃತಜ್ಞತೆಯ ನಗು ಬಲಾತ್ಕಾರವಾಗಿ ತಂದುಕೊಂಡರೂ, ಎದೆಬಡಿತ ಜೋರಾಗತೊಡಗಿತು. ತೀರಾ ಅಪರಿಚಿತ ಸ್ಥಳ, ಪ್ರಥಮಬಾರಿಗೆ ಭೇಟಿ ಆಗುವ ಜನ ! ನಾನೋ ಖಟ್ಟರ್ ಸಸ್ಯಾಹಾರಿ, ನನ್ನ ಆತಿಥ್ಯಕ್ಕೆ ಮುಂದಾಗುತ್ತಿರುವವರು ಕಾಶ್ಮೀರೀ ಮುಸ್ಲಿಂ ಅಬ್ಟಾ, ಇವರ ಆತ್ಮೀಯತೆಯ ಕಟ್ಟು ಸಡಿಲಿಸಿ, ಹೋಟೆಲ್ ಹುಡುಕೋಣ ಎಂಬುದೂ ಸಾಧ್ಯವಿಲ್ಲ. ಎದೆಬಡಿತ ಜೋರಾಗುತ್ತಿದ್ದಂತೆಯೇ ಗೇಟ್ ಒಳಗೆ ಕಾರು ಬಂದು ನಿಂತಿತು. ನನ್ನ ಸಿಂಗಲ್ ಸೂಟ್‌ಕೇಸ್ ನನ್ನಿಂದ ಮುಂದೆಯೇ ಅವರ ಗೃಹಪ್ರವೇಶದ ಸೌಭಾಗ್ಯ ಪಡೆದೇ ಬಿಟ್ಟಿತು.
ಮತ್ತೆ ಶುರು, ನನ್ನ ಅನುಭವದ ಕಥಾನಕ. ಶ್ರೀನಗರ ವಿಶ್ವವಿದ್ಯಾನಿಲಯದೆಡೆಗೆ ಮರುದಿನ ಪ್ರಯಾಣ ಬೆಳೆಸಿದೆ. ಕಾಶ್ಮೀರಿಗಳು- ಯುವಕರೂ ಯುವತಿಯರೂ – ಪ್ರಾಯಶಃ ಆ ತಂಪು ಹವೆಯಿಂದಲೋ ಏನೋ, ಏಪಲ್‌ನಂತೆಯೇ, ಕೆಂಪು ಮಿಶ್ರಿತ ಬಿಳಿಯಿಂದ ಸೌಂದರ್ಯ ಮೈತುಂಬಿಕೊಂಡವರು. ತಲೆಗೊಂದು ಸ್ಕಾಫìನಲ್ಲಷ್ಟೇ ಮಹಿಳೆಯರ ಧರ್ಮೀಯ ದಿರಿಸು ಕಂಗೊಳಿಸುತ್ತಿತ್ತು. ತುಂಬು ನಗೆಯ, ಆತ್ಮೀಯತೆ, ಸರಳ ಸಂಭಾಷಣೆ ಇವೆಲ್ಲಾ, ನಾನು ತಲೆತುಂಬಿಸಿಕೊಂಡಿದ್ದ ಉಗ್ರ ಕಾಶ್ಮೀರಿಗಳು ಎಂಬ definition ಅನ್ನು ಒಂದೇ ದಿನದಲ್ಲಿ ಅಳಿಸಿ ಬಿಟ್ಟಿತು! ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಒಂದೆರಡು ಕೊಠಡಿ ಪ್ರವೇಶಿಸಿ, ಸಂಭಾಷಿಸಿ, ವಿಷಯಗಳನ್ನು ಗುರುತು ಹಾಕಿಕೊಂಡು, ವಿಚಾರ ವಿನಿಮಯ ಮಾಡಿಕೊಂಡೆ. “ಕ್ಷಮಿಸಿ, ನಿಮಗೆ ಟೀ ಕೊಡುವ ಹಾಗಿಲ್ಲ, ಏಕೆಂದರೆ ರಮ್ಜಾನ್ ಉಪವಾಸದ ಮಾಸ, ಕ್ಯಾಂಟೀನ್ ಬಂದ್ ಸರ್’ ಎಂದುಬಿಟ್ಟರು, ನನ್ನನ್ನು ಸ್ವಾಗತಿಸಿದ ಪ್ರಾಧ್ಯಾಪಕರು. ನನ್ನ ಆತಿಥೇಯ ಮನೆಯೊಡತಿ ನೀಡಿದ್ದ ಹಾಲು, ಹೊಟ್ಟೆ ತಂಪು ನೀಡಲಿದ್ದೇನೆ ಎಂಬ ಭರವಸೆಯನ್ನೂ ನೀಡಿತು. ಮಧ್ಯಾಹ್ನದ ಸೈರನ್ ಮೊಳಗಿದ ತತ್‌ಕ್ಷಣ ಕುಲಪತಿಯವರಿಂದ ಹಿಡಿದು, ನಾನು ಕುಳಿತಿದ್ದ ಕೊಠಡಿಯ ಪೊ›ಫೆಸರ್ ಆದಿಯಾಗಿ ಎಲ್ಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿ ಗಡಣ ಎಲ್ಲಾ ಎದುರಿನ ವಿಶಾಲ ಹಸಿರು ಹುಲ್ಲಿನಲ್ಲಿ ನಮಾಜ ಆರಂಭಿಸಿದರು. ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದಂತೆಯೇ, ಕಾಶ್ಯಪ ಋಷಿಗಳು ಪ್ರಪ್ರಥಮವಾಗಿ ಶಿಷ್ಯರೊಂದಿಗೆ ಪದಾರ್ಪಣೆಗೈದ ಅಂದಿನ ಕಾಶ್ಯಪಮಾರ್, ಇಂದಿನ ಕಾಶ್ಮೀರ ಈ ಎಲ್ಲಾ ಕಾಲದ ಚಿತ್ರಣವೂ ಮನದಂಚಿನಲ್ಲಿ ಹಾದುಹೋಯಿತು, ಈ ಎಲ್ಲಾ ಏರುಪೇರುಗಳಿಗೆ ದಾಲ್, ಊಲಾರ್ ಸರೋವರದೊಳು ಮೌನಸಾಕ್ಷಿ ನುಡಿಯುತ್ತಿವೆ ಎಂದೆನಿಸಿತು. ಕಾಲದ ಮಹಿಮೆಗೆ ಮೌನಿಯಾದೆ.
Related Articles
Advertisement
“”ಸಂಜೆ, ಮನೆಗೆ 5 ಗಂಟೆಯೊಳಗೇ ಬಂದು ಬಿಡಿ” ಎಂಬ ಪ್ರೀತಿಯ ತಾಕೀತು ಆ ಅಕ್ಕನದು. ಕತ್ತಲಾದಾಗ ಮಹಡಿಯ ಮೆಟ್ಟಲು ಏರುವಾಗ ದೂರದ ಶಂಕರ ಬೆಟ್ಟದೆಡೆಗೆ ಬೊಟ್ಟುಮಾಡಿ ಮಹಮ್ಮದ್ ಗುರೂ ಒಂದು ಮಾತು ಉಸುರಿದರು, “”ನಾವು ಸಣ್ಣದಿರುವಾಗ ಯಾವುದೇ ನಿರ್ಬಂಧವಿರಲಿಲ್ಲ. ಉಗ್ರಗಾಮಿತ್ವದ ಹೆಸರೇ ಕೇಳಿರಲ್ಲಿಲ್ಲ. ಪಂಡಿತರ ಮಕ್ಕಳ ಜತೆ ಬೆಟ್ಟ ಏರಿ ಆಡಿದಣಿದು ಇಳಿದು ಬರುತ್ತಿ¨ªೆವು. ಈಗ… ಎಲ್ಲವೂ ಕೇವಲ ನೆನಪು ಅಷ್ಟೆ. ಇಲ್ಲಿನ ಭದ್ರತಾಪಡೆಯವರೇ ನಮ್ಮನ್ನು ತಡೆಯುತ್ತಾರೆ. ನೀವು ಬಂದಿದ್ದೀರಿ, ಹಾಗಾಗಿ ತೋರಿಸುವೆ” ಎಂಬುದಾಗಿ ಸ್ಪೆಶಲ್ ಪರ್ಮಿಶನ್ ತೆಗೆದುಕೊಂಡು, “”ನಿಮಗೆ ಅಲ್ಲಿ ದೊಡ್ಡ ಶಿವಲಿಂಗದ ದರ್ಶನ ನಾಳೆ ಮಾಡಿಸುತ್ತೇನೆ” ಎಂದರು. ನನ್ನ ಮನದ ಒಟ್ಟು ಗಲಿಬಿಲಿಗೊಂದು ಗತಿಕಾಣಿಸಬೇಕೆಂದು ಆಸೆಯಿಂದ ನನ್ನ ವಿಶ್ರಾಂತಿ ಕೊಠಡಿಗೆ ಹರಟೆ ಹೊಡೆಯೋಣವೇ ಎಂದು ಅವರನ್ನು ಕರೆದಾಗ, ಅವರ ಪತ್ನಿಯೂ ಸೇರಿಕೊಂಡರು. “”ನೋಡಿ ಸರ್, ನಿಜಾ ಹೇಳ್ಬೇಕಾ, ನಮಗೆ ಅಂದರೆ ಕಾಶ್ಮೀರಿಗಳಿಗೆ ಸುಮಾರು 8000 ವರ್ಷಗಳ ಇತಿಹಾಸವಿದೆ. ನಮ್ಮ ಪೂರ್ವಜರು ಪುರೋಹಿತ ವರ್ಗದವರಾಗಿದ್ದು. ಪಂಡಿತ ಸಮುದಾಯದಲ್ಲಿ ಗುರೂ ಎಂದು ಇನ್ನಷ್ಟು ಉನ್ನತ ಸ್ತರದಲ್ಲಿ ಗುರುತಿಸಿಕೊಂಡವರು. ಇನ್ನು ಕೆಲವರ ಹೆಸರ ಜತೆಗೆ ವಾಣಿ ಎಂದೂ ಇದೆ” ಹೀಗೆ ಅವರ ವಿವರಣೆ ಸುರುಳಿ ಬಿಚ್ಚಿಕೊಳ್ಳುತ್ತಲೇ, ಅವರ ಅತಿಥಿ ಸತ್ಕಾರ, ಸ್ವತ್ಛತೆ, ಸಭ್ಯತೆ ಎಲ್ಲದರ ಅಂತರಂಗ ತೆರೆಯುತ್ತ ಸಾಗಿತು.
ಆ ಮನೆಯಲ್ಲೇ 3 ದಿನಗಳ ವಾಸದ ದೆಸೆಯಿಂದ ಅವರ ಮನದಾಳದ ಮಾತುಗಳಿಗೆ ನೇರವಾಗಿ ಕಿವಿಯಾದೆ , “”ನೋಡಿ ಭಟ್, ನಿಮ್ಮನ್ನು ಹಾಗೆ ಸಂಬೋಧಿಸಿದಾಗ ಏನೋ ನೀವು ನಮ್ಮವರೇ ಎಂಬ ಭಾವನೆ. ನಮಗೆ ಉಗ್ರವಾದ ನಿಜಕ್ಕೂ ಮನಸಿಲ್ಲ, ನಮ್ಮ ಯುವಕರ ಮನಸ್ಸು ಹಾಳುಮಾಡಿ, ವಶೀಲಿಯಿಂದ ಪಾಕ್ ಸೈನಿಕರು, ಬೇಹುಗಾರರು ಈ ಗಲಭೆ, ರಕ್ತಪಾತ ಸೃಷ್ಟಿಸುತ್ತಾರೆ. ಪ್ರವಾಸಿಗಳು ಬರಲು ಶುರುಮಾಡಿದರೆನೇ ನಮ್ಮ ದೋಣಿಮನೆ, ಗೊಂಬೆ, ಇತ್ಯಾದಿ ಎಲ್ಲದಕ್ಕೂ ಡಿಮಾಂಡ್”ಮುಂದೆ ರಕ್ಷಣಾ ಪಡೆಗಳ ಬಗ್ಗೆ ಅಸಹನೆಯ ಕಟ್ಟೆಯೊಡೆಯಿತು. ಅವರೆಲ್ಲ ಅಕ್ರಮ ಆಕ್ರಮಣಕಾರರು ಎನ್ನುವಷ್ಟು ರೋಷಾವೇಶ ಹೊರಹೊಮ್ಮಿತು, ಕಾರಣ ಗಲಭೆಯನ್ನು ಹತ್ತಿಕ್ಕುವಲ್ಲಿ ಅನಿವಾರ್ಯವಾಗಿ ರಕ್ಷಣಾ ಪಡೆಗಳ ಗಸ್ತು ಅಷ್ಟೇ ಬಲವಾಗಿರುವುದನ್ನು ಗಮನಿಸಿದೆ. ಅಲ್ಲಿನ ಪೊಲೀಸ್ ವ್ಯಾನ್‌ಗಳೂ, ಯುದ್ದೋಪಕರಣ ಸಾಗಿಸುವ ಗಟ್ಟಿಮುಟ್ಟಾದ, ಮುಚ್ಚಿದ ವಾಹನಗಳಂತೆ ಇಲ್ಲವಾದರೆ ಅವರ ಕಲ್ಲಿನ ಪೆಟ್ಟಿಗೆ, ಪೊಲೀಸ್ ವ್ಯಾನ್ ಅಪ್ಪಚ್ಚಿಯಾಗಿ ಬಿಡುತ್ತಿದ್ದವು. ಅದನ್ನೆಲ್ಲಾ ಗಮನಿಸುತ್ತಿದ್ದಾಗ ಕೌಟಿಲ್ಯ, ಮೆಕಿಯವೆಲ್ಲಿ ಇಬ್ಬರ ಸಮಾನಾಂತರದ ಬಲವನ್ನು ಬಲಪ್ರಯೋಗದಿಂದಲೇ ಮರ್ದಿಸಬೇಕು ಎಂಬ ಸೂತ್ರವೂ ನೆನಪಾಯಿತು. ಅಲ್ಲಿನ ಹಜರತ್ ಬಾಲ್ ಮಸೀದಿಯೊಳಗೆ ಹೋಗಿ ನೋಡೋಣ ಎಂದು ಕುತೂಹಲದಿಂದ ಮುಖ್ಯ ದ್ವಾರಕ್ಕೆ ಬಂದು ನಿಂತಾಗ ನನ್ನನ್ನು ಅಡಿಯಿಂದ ಮುಡಿಯವರೆಗೆ ದಿಟ್ಟಿಸಿ, ಹೆಗಲೇರಿದ ಚೀಲವನ್ನು ತಡಕಿ ನಸುನಕ್ಕು ದ್ವಾರಪಾಲಕ ಒಳಬಿಟ್ಟ. ಬೃಹತ್ ಗಾತ್ರದ ಮಸೀದಿಯೊಳಗೆ ಪ್ರವೇಶಿಸುವ ಪ್ರಥಮ ಅನುಭವ. ಎಲ್ಲಾ ವೀಕ್ಷಿಸಿ, ಮುಖ್ಯಬಿಂದುವಿನೆಡೆಗೆ ಬಂದು ಕಣ್ಣು ಮುಚ್ಚಿನಿಂತಾಗ ನನಗೆ ಹೊಳೆದುದು, ಏಕಂ ಸತ್ ವಿಪ್ರಾ ಬಹುದಾಃ ವದಂತಿ ಎಂಬ ಸಾರ್ವಕಾಲಿಕ ಸತ್ಯದ ಹೊಳಹು. ಪಿ. ಅನಂತಕೃಷ್ಣ ಭಟ್