Advertisement

ಎಲ್ಲೂ ಸಲ್ಲದಂತಾದ ಕಾಶ್ಮೀರದ ವಿದ್ಯಾರ್ಥಿಗಳು

01:59 AM Jun 27, 2019 | mahesh |

ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ದಿನಗಳಿಂದ ಬದಲಾವಣೆಯ ಗಾಳಿ ಬೀಸುತ್ತಿದೆ. ಭರವಸೆಯ ಕಿರಣಗಳು ಗೋಚರಿಸಲಾರಂಭಿಸಿವೆ. ಈ ಸಮಯದಲ್ಲೇ ಅಲ್ಲಿನ ಭಾಷಾ ನೀತಿಯ ಬಗ್ಗೆಯೂ ಚರ್ಚೆಯಾಗಬೇಕು ಎನ್ನುವ ಧ್ವನಿಗಳು ಕೇಳಲಾರಂಭಿಸಿವೆ.

Advertisement

ಯಾವುದೇ ಒಂದು ಸಮಾಜದ ನಿರ್ಮಾಣದಲ್ಲಿ ಭಾಷೆಯ ಪಾತ್ರ ಬಹಳ ಮುಖ್ಯವಾದದ್ದು. ಇಂದು ಜಮ್ಮು ಕಾಶ್ಮೀರದ ಸ್ಥಿತಿಗೆ ಒಂದಲ್ಲ ಒಂದು ರೀತಿಯಲ್ಲಿ ಅಲ್ಲಿನ ಭಾಷಾ ನೀತಿಯಲ್ಲಿನ ದಶಕಗಳ ದೋಷ ಕೂಡ ಕಾರಣವೆನ್ನಬಹುದು. ಮೊದಲಿನಿಂದಲೂ ಆ ರಾಜ್ಯದ ಭಾಷಾ ನೀತಿ ಸಂಪೂರ್ಣವಾಗಿ ಅಸಂಗತ ಮತ್ತು ಅವಿವೇಕದಿಂದ ತುಂಬಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದು ಅಲ್ಲಿ ಅಸ್ತಿತ್ವದಲ್ಲಿರುವ ಭಾಷಾ ನೀತಿಯ ಬೇರುಗಳು 1944ರಲ್ಲಿ ಶೇಖ್‌ ಅಬ್ದುಲ್ಲಾರ ನ್ಯಾಷನಲ್ ಕಾನ್ಫರೆನ್ಸ್‌ ಸಿದ್ಧಪಡಿಸಿದ ‘ನಯಾ ಕಾಶ್ಮೀರ’ ಎನ್ನುವ ದಸ್ತಾವೇಜುಗಳಲ್ಲಿ ಕಾಣಿಸುತ್ತವೆ.

ಅದಾಗ್ಯೂ ಅದಕ್ಕೂ ಮುನ್ನವೇ, ಅಂದರೆ, ಮಹಾರಾಜರ ಅವಧಿಯಲ್ಲೂ ಉರ್ದು ಅಧಿಕೃತ ಭಾಷೆಗಳಲ್ಲಿ ಒಂದಾಗಿತ್ತು. ಆಗ ಅಲ್ಲಿನ ಶಿಕ್ಷಣ ಮತ್ತು ಭಾಷಾ ನೀತಿ ದೇಶದ ಇತರೆ ಪ್ರಾಂತ್ಯಗಳ, ಅದರಲ್ಲೂ ಮುಖ್ಯವಾಗಿ ಸನಿಹದ ಪಂಜಾಬ್‌ನ ಸಾಲಿನಲ್ಲಿತ್ತು. ನ್ಯಾಯಯುತವಾಗಿ ನೋಡುವುದಾದರೆ, ಸ್ವಾತಂತ್ರ್ಯಾ ನಂತರ ಜಮ್ಮು ಕಾಶ್ಮೀರದ ಪ್ರಮುಖ ಆಡಳಿತ ಭಾಷೆಯಾಗುವ ಅರ್ಹತೆಯಿದ್ದದ್ದು ಕಾಶ್ಮೀರಿ ಮತ್ತು ಡೋಗರಿ ಭಾಷೆಗಳಿಗೆ. ಆದರೆ, ಶೇಖ್‌ ಅಬ್ದುಲ್ಲಾ ಅವರು ಉರ್ದುವಿಗೇ ಹೆಚ್ಚು ಮನ್ನಣೆ ನೀಡಿದರು. ನಂತರದ ಸ್ಥಾನದಲ್ಲಿ ಕಾಶ್ಮೀರಿ ಮತ್ತು ಡೋಗರಿ ಇವೆಯಾದರೂ, ಉರ್ದುವಿಗೇ ಹೆಚ್ಚು ಮನ್ನಣೆ ಸಿಕ್ಕಿತು. ಜಮ್ಮು-ಕಾಶ್ಮೀರದಲ್ಲಿ ಮುಖ್ಯವಾಗಿ ಕಾಶ್ಮೀರಿ, ಡೋಗರಿ ಮತ್ತು ಲದಾಖೀ ಅಥವಾ ಭೋಟಿ ಎನ್ನುವ ಭಾಷೆಗಳು ಬಳಕೆಯಲ್ಲಿವೆ. ಇವುಗಳ ಹೊರತಾಗಿ, ಶೀನಾ, ಜೋಗರಿ, ಪಂಜಾಬಿ, ಪಹಾಡಿ, ಭದ್ರವಾಹಿ ಮತ್ತು ಕಿಶ್ತ್ತ್ವಾಡಿ ಎನ್ನುವ ಭಾಷೆಗಳೂ ಇದ್ದು, ಈ ಭಾಷಿಕರ ಸಂಖ್ಯೆಯೂ ಉತ್ತಮವಾಗಿಯೇ ಇದೆ.

ಕಾಶ್ಮೀರಿ ಭಾಷೆಯನ್ನು ಮೊದಲು ಶಾರದಾ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಶಾರದಾ ಲಿಪಿಯು ದೇವನಾಗರಿಯ ಸಹೋದರ ಲಿಪಿಯಾಗಿತ್ತು. ಆದರೆ ನಿಧಾನಕ್ಕೆ ಜಮ್ಮು-ಕಾಶ್ಮೀರದ ಮುಸಲ್ಮಾನರು ಅರಬಿ ಲಿಪಿಯ ಬಳಕೆಯತ್ತ ಹೆಚ್ಚು ಹೊರಳುತ್ತಾ ಹೋದಂತೆ ಶಾರದಾ ಲಿಪಿಯು ಅಳಿವಿನತ್ತ ಸಾಗಿತು. ಅತ್ತ ಕಾಶ್ಮೀರಿ ಭಾಷೆ ಕೂಡ ಧಾರ್ಮಿಕ ಆಧಾರದಲ್ಲಿ ವಿಭಜನೆಯಾಗಿಬಿಟ್ಟಿತು. ಕೆಲ ದಶಕಗಳಿಂದ ಆ ರಾಜ್ಯದಿಂದ ಹೊರಗಿರುವ ಕಾಶ್ಮೀರಿ ಪಂಡಿತರು ದೇವನಾಗರಿ ಲಿಪಿಯಲ್ಲಿ ಕಾಶ್ಮೀರಿ ಭಾಷೆಯನ್ನು ಬರೆಯಲಾ ರಂಭಿಸಿದ್ದಾರೆ, ಇಂದು ಕಣಿವೆಯ ಮುಸಲ್ಮಾನರು ಬಹುತೇಕ ಅರಬಿ ಲಿಪಿಯಲ್ಲೇ ಬರೆಯುತ್ತಿದಾರೆ. ಅಂದರೆ, ಬಹು ಹಿಂದೆಯೇ ಆ ರಾಜ್ಯದಲ್ಲಿ ಭಾಷೆ ಮತ್ತು ಲಿಪಿಯ ಮೂಲಕ ಜನರನ್ನು ಅವರ ಬೇರುಗಳಿಂದ ಕತ್ತರಿಸಿ ದೂರ ಮಾಡುವ ಕೆಲಸ ಆರಂಭವಾಗಿ ಬಿಟ್ಟಿತು. ಶಿಕ್ಷಣದಲ್ಲಿ ಇಂಗ್ಲಿಷೇ ಪ್ರಮುಖ ಭಾಷೆಯಾಗಿದೆ. ಮೊದಲನೇ ವರ್ಗದಿಂದಲೇ ಇಂಗ್ಲಿಷ್‌ ಕಡ್ಡಾಯಗೊಳಿಸಲಾಗಿದೆ. ದ್ವಿತೀಯ ಭಾಷೆಯಾಗಿ ಹಿಂದಿ ಅಥವಾ ಉರ್ದು ಇವೆ. ಮುಸ್ಲಿಂ ಪ್ರದೇಶಗಳಲ್ಲಿರುವ ಶಾಲೆಗಳಲ್ಲಿ ಉರ್ದು ಮತ್ತು ಹಿಂದೂ ಬಾಹುಳ್ಯವಿರುವ ಪ್ರದೇಶಗಳ ಶಾಲೆಗಳಲ್ಲಿ ಹಿಂದಿ ಭಾಷೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಒಮ್ಮೆಗೇ ಎರಡನ್ನೂ ಕಲಿಸುವ ವ್ಯವಸ್ಥೆಯಂತೂ ಇಲ್ಲ.

ಕೆಲ ವರ್ಷಗಳಿಂದ ಡೋಗರಿ, ಕಾಶ್ಮೀರಿ ಮತ್ತು ಲದಾಖೀ ಭಾಷಾ ಬೋಧನೆಯ ವ್ಯವಸ್ಥೆ ಆರಂಭವಾಗಿದೆಯಾದರೂ, ಅಂಥ ಶಾಲೆಗಳ ಸಂಖ್ಯೆ ಬೆರಳೆಣಿಕೆಯಷ್ಟೇ ಇದೆ. ಈ ವಿಷಯದಲ್ಲಂತೂ ಗೋಜರಿ ಮತ್ತು ಪಹಾಡಿ ಭಾಷೆಗಳು ಬಹಳ ಹಿಂದೆ ಉಳಿದಿವೆ. ಇನ್ನು ಪ್ರಥಮ ಭಾಷೆಯಾಗಿದ್ದರೂ ಇಂಗ್ಲಿಷ್‌ನ ಪರಿಸ್ಥಿತಿಯೇನೂ ಉತ್ತಮವಾಗಿ ಇಲ್ಲ. ಜಮ್ಮು ಮತ್ತು ಲದಾಖ್‌ ಪ್ರದೇಶಗಳಲ್ಲಿ ಹಿಂದಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಜನರು.

Advertisement

ಮಾತೃಭಾಷೆ ಅಥವಾ ನೆಲದ ಭಾಷೆಯು ಅಧ್ಯಯನದ ಮುಖ್ಯ ಮಾಧ್ಯಮವಾಗದ ಕಾರಣ ಅಲ್ಲಿನ ಮಕ್ಕಳೂ ಗೊಂದಲದಲ್ಲಿ ಇರುವಂತಾಗಿದೆ. ಈ ಕಾರಣಕ್ಕಾಗಿಯೇ ಉಚ್ಚ ಶಿಕ್ಷಣಕ್ಕೆ ಪ್ರವೇಶಿಸುವ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳಿಗೆ ಅತ್ತ ಇಂಗ್ಲೀಷೂ ಸರಿಯಾಗಿ ಬರುವುದಿಲ್ಲ, ಇತ್ತ ಹಿಂದಿಯೂ ತಿಳಿಯುವುದಿಲ್ಲ, ಅಲ್ಲಿನ ನೆಲದ ಭಾಷೆಯನ್ನಂತೂ ಅವರು ಅಜಮಾಸು ತೊರೆದೇ ಬಿಟ್ಟಿದ್ದಾರೆ. ಇನ್ನು ಹಿಂದಿ ಭಾಷೆಯನ್ನೂ ಅಲ್ಲಿಂದ ವ್ಯವಸ್ಥಿತವಾಗಿ ಓಡಿಸಲಾಗಿದೆ. ಆದಾಗ್ಯೂ ಕಣಿವೆ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಹಿಂದಿ ಅರ್ಥವಾಗುತ್ತದಾದರೂ, ಅವರಿಗೆ ಬರೆಯಲು ಬರುವುದಿಲ್ಲ.

90ರ ದಶಕದಲ್ಲಿ ಕಾಶ್ಮೀರಿ ಪಂಡಿತರನ್ನು ಕಾಶ್ಮೀರದಿಂದ ಹೊರ ದಬ್ಬಿದ ನಂತರದಿಂದ, ಹಿಂದಿ ಕಲಿಸುವವರೂ ಅಲ್ಲಿ ಉಳಿದಿಲ್ಲ. ಕಟ್ಟರ್‌ಪಂಥಿಗಳ ಜತೆಗೆ ಸರ್ಕಾರಗಳೂ ಅನುಮಾನಾಸ್ಪದ ಮೈತ್ರಿ ಮಾಡಿಕೊಂಡವೋ ಏನೋ ತಿಳಿಯದು, ಒಟ್ಟಲ್ಲಿ ಭಾಷಾ ಮಾಧ್ಯಮದ ವಿಚಾರದಲ್ಲಿ ಎಲ್ಲೂ ಸಲ್ಲದಂತಾಗಿದ್ದಾರೆ ಅಲ್ಲಿನ ಮಕ್ಕಳು. ಇದೇ ಕಾರಣದಿಂದಾಗಿಯೇ ಇಂದು ಕಾಶ್ಮೀರದ ಮಕ್ಕಳು ದೇಶದ ಮುಖ್ಯವಾಹಿನಿಯಿಂದ ದೂರವೇ ಉಳಿದಿದ್ದಾರೆ.

ಪ್ರಮುಖ ಆಡಳಿತ ಭಾಷೆಯಾಗಿರುವ ಉರ್ದುವಿನ ಸ್ಥಿತಿಯೂ ವಿಚಿತ್ರವಾಗಿದೆ. ಜಮ್ಮುವಿನಲ್ಲಂತೂ ಉರ್ದು ತಿಳಿದವರ ಸಂಖ್ಯೆ ಬೆರಳೆಣಿಕೆಯಷ್ಟೇ ಇದೆ. ಆದರೆ ಅಲ್ಲಿ ಪೊಲೀಸ್‌ ಕಂಪ್ಲೆಂಟ್ ಕೊಡಬೇಕೆಂದರೆ, ದೂರನ್ನು ಉರ್ದುವಿನಲ್ಲೇ ಬರೆಯಬೇಕಾಗುತ್ತದೆ. ಆದರೆ ಉನ್ನತ ಅಧಿಕಾರ ವರ್ಗದಲ್ಲಿ ಇಂಗ್ಲಿಷ್‌ನ ವರ್ಚಸ್ಸೇ ಅಧಿಕವಿದೆ. ಈ ರೀತಿಯಾಗಿ ಅಲ್ಲಿನ ತ್ರಿಭಾಷಾ ನೀತಿಯು ಉಲಾr ಹರಿಯುತ್ತಿದೆ. ಯಾವ ಮಾತೃಭಾಷೆಗೆ ಪ್ರಾಮುಖ್ಯತೆ ಸಿಗಬೇಕಿತ್ತೋ ಅದು ಕೊನೆಯ ಸ್ಥಾನದಲ್ಲಿದೆ, ಯಾವ ಪರಕೀಯ ಭಾಷೆಗೆ ಕೊನೆಯ ಸ್ಥಾನ ಸಿಗಬೇಕಿತ್ತೋ ಅದು ಮೊದಲನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿದ್ದರೂ ಸಾಮಾನ್ಯ ಜನರಿಗೆ ಅದು ಈಗಲೂ ಪರಕೀಯವಾಗಿಯೇ ಇದೆ!

ಇದೆಲ್ಲದರಿಂದಾಗಿ ಜಮ್ಮು-ಕಾಶ್ಮೀರದ ಮಕ್ಕಳ ವಿದ್ಯಾಭಾಸದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಾ, ಅವರಿಗೆ ಮುಖ್ಯವಾಹಿನಿಯಲ್ಲಿ ಸೇರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕಣಿವೆ ರಾಜ್ಯದ ಭಾಷಾ ನೀತಿಯನ್ನು ಸುಧಾರಿಸುವ ಸಮಯ ಎದುರಾಗಿದೆ. ಹಿಂದಿಯನ್ನು ಎರಡನೇ ಮತ್ತು ಮೂರನೇ ಭಾಷೆಯಾಗಿಸದೇ ಇಡೀ ಪ್ರದೇಶದಲ್ಲಿ ಓದಿಸುವ ಅಗತ್ಯವಿದೆ. ಕಾಶ್ಮೀರಿ ಮತ್ತು ಡೋಗರಿ ಭಾಷೆಗೆ ಅತ್ಯಗತ್ಯ ಗೌರವ ಸಲ್ಲಲೇಬೇಕು. ಆಗ ಮಾತ್ರ ಕಾಶ್ಮೀರದ ಮುಂದಿನ ಪೀಳಿಗೆಯು ನೆಲದೊಂದಿಗೆ ನಂಟು ಹೊಂದುತ್ತದೆ ಮತ್ತು ದೇಶದೊಂದಿಗೆ ಹೆಜ್ಜೆ ಹಾಕುತ್ತದೆ.

(ಕೃಪೆ: ಅಮರ್‌ ಉಜಾಲಾ)

ಗೋವಿಂದ್ ಸಿಂಗ್

Advertisement

Udayavani is now on Telegram. Click here to join our channel and stay updated with the latest news.

Next