ಹೊಸದಿಲ್ಲಿ:ಜಮ್ಮು ಮತ್ತು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುತ್ತದೆ. ಅದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ದ್ರಾಸ್ ವಲಯದಲ್ಲಿ ಕಾರ್ಗಿಲ್ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. 1999ರಲ್ಲಿ ನಡೆದ ಕಾರ್ಗಿಲ್ ಕಾರ್ಯಾಚರಣೆಗೆ ಜು.26ರಂದು ಇಪ್ಪತ್ತು ವರ್ಷಗಳು ಪೂರ್ತಿಯಾಗುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರ ಶನಿವಾರದ ಭೇಟಿ ಮಹತ್ವ ಪಡೆದಿತ್ತು. ಒಂದು ಅವಧಿಯಲ್ಲಿ ಸರ್ವ ಪಕ್ಷ ನಿಯೋಗದ ನೇತೃತ್ವ ವಹಿಸಿ ಕಾಶ್ಮೀರ ವಿವಾದ ಪರಿಹಾರ ನಿಟ್ಟಿನಲ್ಲಿ ಮಾತುಕತೆಗೆ ಆಗಮಿಸಿದ್ದಾಗ ಹುರಿಯತ್ ನಾಯಕರು ಅದಕ್ಕೆ ಆಗಮಿಸಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ. ‘ಮಾತುಕತೆ ಮೂಲಕ ವಿವಾದ ಪರಿಹಾರ ಸಾಧ್ಯವಾಗದೆ ಇದ್ದರೆ ಅದನ್ನು ಪರಿಹರಿಸಲು ಗೊತ್ತಿದೆ. ಶೀಘ್ರವೇ ಪರಿಹಾರ ಕಂಡುಬರಲಿದೆ’ ಎಂದಿದ್ದಾರೆ.
ಇದೇ ವೇಳೆ ಅಂತಾರಾಷ್ಟ್ರೀಯ ಗಡಿಯಲ್ಲಿ ಬಾರ್ಡರ್ ರೋಡ್ ಆರ್ಗನೈಸೇಷನ್ ನಿರ್ಮಿಸಿದ ಎರಡು ಸೇತುವೆಗಳನ್ನೂ ಉದ್ಘಾಟಿಸಿದ್ದಾರೆ.
ಕದನ ವಿರಾಮ ಉಲ್ಲಂಘನೆ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಗೆ ಹೊಂದಿಕೊಂಡು ಇರುವ ಎಲ್ಒಸಿ ಬಳಿ ಪಾಕಿಸ್ಥಾನ ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದೆ. ಇದರಿಂದಾಗಿ ವ್ಯಕ್ತಿ ಗಾಯಗೊಂಡಿದ್ದಾರೆ. ನೆರೆಯ ರಾಷ್ಟ್ರದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ಕೂಡ ಸೂಕ್ತ ಪ್ರತ್ಯುತ್ತರ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನಡುವೆಯೇ ಈ ಬೆಳವಣಿಗೆ ನಡೆದಿದೆ.