ಇಸ್ಲಮಾಬಾದ್: ಭಾರತ ಮತ್ತು ಪಾಕಿಸ್ಥಾನದ ನಡುವಿನ ನಮಸ್ಯೆಗೆ ಕಾಶ್ಮೀರವೇ ಪ್ರಮುಖ ವಿಚಾರವಾಗಿದ್ದು, ಸಮಸ್ಯೆ ಬಗೆ ಹರಿಯದೆ ಉಳಿದರೆ ಆ ಭಾಗದ ಜನರ ಶಾಂತಿ,ಸಮೃದ್ಧಿಯ ಕನಸು ಕನಸಾಗಿಯೇ ಉಳಿಯುತ್ತದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಭಾನುವಾರ ಹೇಳಿದ್ದಾರೆ.
ಕಾಶ್ಮೀರದ ಐಕ್ಯಮತ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಷರೀಫ್ ‘ಕಾಶ್ಮೀರದ ವಿವಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚೆಗೆ ಬಂದಿರುವ ಅತೀ ಹಳೆಯ ವಿಚಾರ ಮತ್ತು ಅಪೂರ್ಣ ಅಜೆಂಡಾ. ಭಾರತ ಸರ್ಕಾರ ಕಳೆದ 7 ದಶಕಗಳಿಂದ ಕಾಶ್ಮೀರದ ಜನರ ಸ್ವಯಮಾಧಿಕಾರ ನಿರಾಕರಿಸಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಲ್ಲಿ ನೀಡಿದ ಭರವಸೆಯನ್ನೂ ಈಡೇರಿಸಿಲ್ಲ’ಎಂದರು.
‘ತಮ್ಮ ಮೂಲಭೂತ ಹಕ್ಕಿಗಾಗಿ ಹೋರಾಡುತ್ತಿರುವ ಕಾಶ್ಮೀರದ ಸಹೋ ದರ ಸಹೋದರಿಯರ ಕಾನೂನುಬದ್ಧ ಹೋರಾಟಕ್ಕೆ ನಮ್ಮ ನೈತಿಕ, ರಾಜತಾಂತ್ರಿಕ ಮತ್ತು ರಾಜಕೀಯ ಬೆಂಬಲ ಇದೆ’ ಎಂದರು.
‘ವ್ಯವಸ್ಥಿತ ಸಂಚಿನ ಮೂಲಕ ಭಯೋತ್ಪಾದನೆ ಹೆಸರಿನಲ್ಲಿ ಕಾಶ್ಮೀರದ ಮುಗ್ಧ ಜನರನ್ನು ಭಾರತೀಯ ಸೇನಾ ಪಡೆಗಳು ಹತ್ಯೆಗೈಯುತ್ತಿವೆ ಇದನ್ನು ಬಲವಾಗಿ ಖಂಡಿಸುತ್ತೇನೆ’ ಎಂದರು.
‘ಕಾಶ್ಮೀರದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ಮತ್ತು ಸೇನಾ ಪಡೆಗಳು ಜನರಲ್ಲಿ ಹುಟ್ಟು ಹಾಕಿರುವ ಭೀತಿಯನ್ನು ತೊಲಗಿಸಬೇಕು’ ಎಂದು ಅಂತರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದರು.
‘ನಾವು ಕಾಶ್ಮೀರದಲ್ಲಿ ರಕ್ತದ ಸ್ನಾನ ನಿಲ್ಲಿಸಲು ಭಾರತಕ್ಕೆ ಬಲವಾಗಿ ಮನವಿ ಮಾಡುತ್ತೇವೆ.ವಿಶ್ವಸಂಸ್ಥೆಯ ನಿಯೋಗದ ಆಶ್ರಯದಲ್ಲಿ ಉಚಿತ ಮತ್ತು ನ್ಯಾಯಯುತ ಜನಾಭಿಪ್ರಾಯ ಹಿಡಿದಿಡಲು ಅವಕಾಶ ಕೋಡಿ’ ಎಂದರು.