ದಾವಣಗೆರೆ: ತಮ್ಮಾ ಹ್ಯಾಗಿದಿಯಪ್ಪಾ, ಆರಾಮಿದಿಯಾ, ನಾವೆಲ್ಲಾರೂ ಕೂಡಿ ಕಾಶಿ ನೋಡಾಕ ಹೊಂಟೇವಿ. ನಿಮ್ಮ ಅವ್ವ-ಅಪ್ಪಗೂ ಕಳ್ಸಿ ಕೊಡು. ನಿಮಗೆಲ್ಲಾ ಜೋಪಾನ ಮಾಡಾಕ ಅವ್ರು ಎಷ್ಟೆಲ್ಲಾ ಕಷ್ಟಾ ಪಟ್ಟಾರು, ಅವ್ರಿಗೆ ನೀನು ಕಾಶಿ ದರ್ಶನಾ ಮಾಡ್ಸು. ತಂದೆ-ತಾಯಿಗೆ ಕಾಶಿ ದರ್ಶನಾ ಮಾಡ್ಸಿದ್ರ ಮಕ್ಕಳಿಗೂ ಪುಣ್ಯ ಸಿಗ್ತದ, ಒಳ್ಳೆದಾಗ್ತದ..’ಇದು ಇತ್ತೀಚೆಗೆ ಸಂಬಂಧಿಕರು, ವಿವಿಧ ಸಮುದಾಯ ಹಾಗೂ ಸಂಘಟನೆಯವರಿಂದ ಪರಿಚಯಸ್ಥ ಯುವಜನತೆಗೆ ಬರುತ್ತಿರುವ ಕರೆಗಳ ಸಂಭಾಷಣೆ. ಪೋಷಕರಿಗೆ ಕಾಶಿಗೆ ಕಳುಹಿಸಿ ಕೊಡುವಂತೆ ಯುವಜನರಿಗೆ ಕೋರುವ ಇಂಥ ದೂರವಾಣಿ ಕರೆಗಳು ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸಹಿತ ಹೀಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿಯೂ ಕೇಳಿ ಬರುತ್ತಿದೆ. ಇದರ ಪರಿಣಾಮ ಈ ವರ್ಷದ ಬೇಸಗೆಯಲ್ಲಿ ಕಾಶಿ ಯಾತ್ರೆಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.
ವಿವಿಧ ಸಂಘಟನೆಗಳ ಸದಸ್ಯರು ಪರಿಚಯಸ್ಥ ಯುವಜನತೆಯನ್ನು ಸಂಪರ್ಕಿಸಿ ಇಲ್ಲವೇ ದೂರವಾಣಿ ಕರೆ ಮಾಡಿ ಪೋಷಕರನ್ನು ಕಾಶಿಗೆ ಕಳುಹಿಸಿಕೊಡುವಂತೆ ಮನವೊಲಿಸುತ್ತಿದ್ದಾರೆ. ಇದರಲ್ಲಿ ಜಾತಿ ಸಂಘಟನೆಗಳು ಹೆಚ್ಚು ಕ್ರಿಯಾಶೀಲವಾಗಿದ್ದು ಕುಟುಂಬದವರು, ಹತ್ತಿರದ ಹಾಗೂ ದೂರದ ಸಂಬಂಧಿಕರು ಹೀಗೆ ಎಲ್ಲರೂ ಒಟ್ಟಾಗಿ ವಿಶ್ವನಾಥನ ದರ್ಶನ ಮಾಡಿ ಬರಬಹುದು ಎಂದು ಹೇಳುತ್ತಿದ್ದಾರೆ.
ಪೋಷಕರಿಗೆ ಪ್ರವಾಸ!: ಇತ್ತೀಚೆಗೆ ಜನರು ಅಧಿಕ ಸಂಖ್ಯೆಯಲ್ಲಿ ಕಾಶಿ ದರ್ಶನ ಯಾತ್ರೆಗೆ ಹೋಗುತ್ತಿರುವುದನ್ನು ಕಂಡ ಕೆಲವು ರಾಜಕಾರಣಿಗಳು, ತಮ್ಮ ಬೆಂಬಲಿಗ ಯುವ ಕಾರ್ಯಕರ್ತರ ಪೋಷಕರನ್ನು ತಮ್ಮ ವೆಚ್ಚದಲ್ಲಿಯೇ ಕಾಶಿ ಯಾತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ತಮ್ಮ ಪರವಾಗಿ ದುಡಿಯುವ ಕಾರ್ಯಕರ್ತರನ್ನು ಸೆಳೆಯುವ ಲೆಕ್ಕಾಚಾರ ರಾಜಕಾರಣಿಗಳದ್ದಾಗಿದೆ. ಅನೇಕ ಮುಖಂಡರು ಕಾರ್ಯಕರ್ತರ ಪೋಷಕರು ಮಾರ್ಚ್ ತಿಂಗಳ ಒಳಗಾಗಿಯೇ ಕಾಶಿ ದರ್ಶನ ಮಾಡಿ ಬರುವ ವ್ಯವಸ್ಥೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
-ಎಚ್.ಕೆ. ನಟರಾಜ