ಬೆಂಗಳೂರು: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ಪ್ರವರ್ಗ “ಬಿ’ಮತ್ತು “ಸಿ’ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 1,200 ಅರ್ಚಕ/ನೌಕರರನ್ನು (ವಾರ್ಷಿಕ) ಕರ್ನಾಟಕ ಭಾರತ್ ಗೌರವ್ ಕಾಶಿ-ಗಯಾ ದರ್ಶನ ಯೋಜನೆಯಡಿ ಉಚಿತವಾಗಿ ಕಳುಹಿಸಿ ಕೊಡಲಾಗುವುದು ಎಂದು ಸಾರಿಗೆ ಮತ್ತು ಹಿಂದೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಶಾಂತಿನಗರದ ಕೆಎಸ್‌ಆರ್‌ಟಿಸಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ 4ನೇ ರಾಜ್ಯಧಾರ್ಮಿಕ ಪರಿಷತ್ತಿನ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕಾಶಿ-ಗಯಾ ದರ್ಶನಕ್ಕೆ ಹೋಗಲು ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣ ನಿಧಿಯಿಂದ ಭರಿಸಲಾಗುವುದು ಎಂದರು. ಹಾಗೆಯೇ, ರಾಜ್ಯದ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ಸಮಾಜದ ಹಲವು ಕ್ಷೇತ್ರಗಳ ಮುಖಂಡನ್ನೊಳಗೊಂಡ “ವಿಷನ್ ಗ್ರೂಪ್’ ರಚಿಸಲಾಗುವುದು ಎಂದು ಹೇಳಿದರು.
ಮಲೈ ಮಹದೇಶ್ವರಸ್ವಾಮಿ ಪ್ರಾಧಿಕಾರದ ಮಾದರಿಯಲ್ಲೇ ಶೀಘ್ರದಲ್ಲೇ ಮೈಸೂರು ಚಾಮುಂಡಿ ಬೆಟ್ಟಕ್ಕೆ ಪ್ರಾಧಿಕಾರ, ಕೋಲಾರ ಜಿಲ್ಲೆಯ ಶಿವಾರಪಟ್ಟಣದಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ ದೇಗುಲಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದ್ದು ಸಂಪೂರ್ಣ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಶಿಯಾತ್ರೆ ಸಹಾಯ ಧನ ಹೆಚ್ಚಳ
ಕಾಶಿಯಾತ್ರೆ ಸಹಾಯಧನವನ್ನು 5 ಸಾವಿರ ರೂ.ದಿಂದ ಈಗ 7,500 ರೂ.ಗೆ ಹೆಚ್ಚಿಸಲಾಗಿದೆ. ಊಟ ತಿಂಡಿಗಾಗಿ ಪ್ರತ್ಯೇಕ ವ್ಯವಸ್ಥೆ, ವೈದ್ಯರ ಸೇವೆಗಾಗಿ ಪ್ರತ್ಯೇಕ ಬೋಗಿಯನ್ನು ಕಲ್ಪಿಸವಾಗಿದೆ. ಈ ಯಾತ್ರೆಗಳಿಗಾಗಿಯೇ ಪ್ರತ್ಯೇಕ ಮೊಬೈಲ್ ಆ್ಯಪ್ ಸಿದ್ಧ ಮಾಡಲಾಗಿದೆ ಎಂದರು. ಜಿಪಿಎಸ್ ಮೂಲಕ ಯಾತ್ರಾರ್ಥಿಗಳು ತಮ್ಮ ಫೋಟೋ ಅಪ್‌ಲೋಡ್ ಮಾಡಿದರೆ ಅವರ ಖಾತೆಗೆ ಕ್ರಮ ವಾಗಿ ಕಾಶಿಯಾತ್ರೆಗೆ 5 ಸಾವಿರ ರೂ. ಮತ್ತು ಚಾರ್‌ದಾಮ್ ಯಾತ್ರೆಗೆ 20 ಸಾ. ರೂ.ಹಾಗೂ ಮಾನಸ ಸರೋವರ ಯಾತ್ರೆಗೆ 30 ಸಾವಿರ ರೂ.ಗಳನ್ನು ನೇರವಾಗಿ ಡಿಬಿಟಿ ಮೂಲಕ ಸಂದಾಯ ಮಾಡಲಾಗುತ್ತದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು. ದೇವಾಲಯಗಳ ಮಾಹಿತಿಗಳನ್ನು ಭಕ್ತರಿಗೆ ಒದಗಿಸಲು ಕಾಲ್ ಸೆಂಟರ್ ತೆರೆಯಲಾಗುವುದು ಎಂದೂ ಹೇಳಿದರು.
ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನ
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ “ಬಿ’ ಮತ್ತು ‘ಸಿ’ ದೇವಾಲಯ ಅರ್ಚಕರು/ನೌಕರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು. ವಿದೇಶ ವ್ಯಾಸಂಗಕ್ಕೆ 1ಲಕ್ಷ ರೂ, ವೈದ್ಯಕೀಯ, ದಂತ ವೈದ್ಯಕೀಯ ವ್ಯಾಸಂಗ ಮಾಡುವವರಿಗೆ 50 ಸಾವಿರ ರೂ. ಸಹಾಯಧನ ನೀಡಲಾಗುವುದು. ಪದವಿ ಮತ್ತು ತಾಂತ್ರಿಕ ಶಿಕ್ಷಣ ವಿದ್ಯಾಭ್ಯಾಸಕ್ಕೆ ತಲಾ 25 ಸಾವಿರ ರೂ. ಸ್ನಾತಕೋತ್ತರ ಶಿಕ್ಷಣಕ್ಕೆ 15 ಸಾವಿರ, ಐಟಿಐ, ಡಿಪ್ಲೊಮಾ ಮತ್ತು ಪದವಿ ಪೂರ್ವ ಶಿಕ್ಷಣ ವ್ಯಾಸಂಗ ಮಾಡುವವರಿಗೆ ತಲಾ 5 ಸಾವಿರ ರೂ. ಪ್ರೋತ್ಸಾಹ ಸಹಾಯಧನ ನೀಡಲಾಗುವುದು ಎಂದರು.
ಮೃತ ಅರ್ಚಕರ ಕುಟುಂಬಕ್ಕೆ ಪರಿಹಾರ ಧನ
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯ, ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರು ಮೃತಪಟ್ಟಲ್ಲಿ 2 ಲಕ್ಷ ರೂ. ಪರಿಹಾರವನ್ನು ಅವರ ಕುಟುಂಬದವರಿಗೆ ನೀಡಲಾಗುವುದು.