ಬಾಗಲಕೋಟೆ: ಸಿಎಂ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪವರಲ್ಲ ಎಂದು ನಂಬಿದ್ದೇವು. ನಮ್ಮ ಸಮಾಜದ ಋಣದಲ್ಲಿದ್ದರೂ ನಮಗೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ನಾವೆಲ್ಲ ಅವರ ಮೇಲಿಟ್ಟಿದ್ದ ವಿಶ್ವಾಸ-ನಂಬಿಕೆ ಹುಸಿಯಾಗಿದೆ. ಹೀಗಾಗಿ ನಮ್ಮ ಪ್ರಾಣ ಹೋದರೂ ಸರಿ ಮೀಸಲಾತಿ ಅಧಿಕೃತ ಘೋಷಣೆ ಮಾಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಮಾಜಿ ಶಾಸಕ, ಅಖೀಲ ಭಾರತ ಪಂಚಮಸಾಲಿ ಸಮಾಜ ಸಂಘದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
ಕೂಡಲಸಂಗಮದಲ್ಲಿ ಪಂಚಲಕ್ಷ ಪಾದಯಾತ್ರೆ ಚಾಲನೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ವಚನ ಭ್ರಷ್ಟರಾಗಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನಮ್ಮ ಪಾದಯಾತ್ರೆ ಕೂಡಲಸಂಗಮದಿಂದ ಆರಂಭಗೊಂಡಿದ್ದು, ಹುನಗುಂದ, ಇಳಕಲ್ಲ, ಕುಷ್ಟಗಿ, ಯಲಬುರ್ಗಾ, ಕೊಪ್ಪಳ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಿಹರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಲಿದೆ. ಯಾರು ಎಷ್ಟೇ ಷಡ್ಯಂತ್ರ ನಡೆಸಿದರೂ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಿಸಿದರು.
ಸಚಿವರಾದ ನಮ್ಮ ಸಮಾಜದ ಮುರುಗೇಶ ನಿರಾಣಿ ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡಿದರು. ನಮ್ಮವರಿಂದಲೇ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಸಮಾಜಕ್ಕಾಗಿ ಜೀವ ಹೋದರೂ ಪಾದಯಾತ್ರೆ ನಿಲ್ಲುವುದಿಲ್ಲ. ನಾವು ಬ್ರಿಟಿಷರ ಗುಂಡಿಗೇ ಹೆದರಿಲ್ಲ. ನಿಮ್ಮ ಷಡ್ಯಂತ್ರಕ್ಕೆ ಬಗ್ಗಲ್ಲ. ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಕೊಡಲು ಸ್ವತಃ ಸಚಿವ ಈಶ್ವರಪ್ಪ ಸಹಿತ ಕುರುಬ ಸಮಾಜ ಬಾಂಧವರು ಹೋರಾಟ ನಡೆಸಿದ್ದಾರೆ. ಅವರು ಕುರಿ ಕಾಯೋರು. ನಾವು ದನ ಕಾಯೋರು. ನಮಗೆ 2ಎ ಮೀಸಲಾತಿ ಕೊಡಿ, ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಕೊಡಿ ಎಂದರು.
ಇದನ್ನೂ ಓದಿ:ಬೆಳೆಯುತಲೇ ಹೊರಟಿದೆ ನೀರಿನ ಬಾಕಿ
ನಾವು ಸಮಾಜದ ಹೆಸರಿನಲ್ಲಿ ಜಾತ್ರೆ ಮಾಡೋರಲ್ಲ. ನಮಗೆ ಮೀಸಲಾತಿ ಕೊಡಿ. ಈ ಪಾದಯಾತ್ರೆ ಬೆಂಗಳೂರಿಗೆ ತಲುಪುವುದರೊಳಗೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಾವು ವಿಧಾನಸೌಧದೊಳಗೆ ನುಗ್ಗಿ ಹೋರಾಟ ಮಾಡುತ್ತೇವೆ. ಆಗ ನೀವು ವಿಧಾನಸೌಧದ ಹೊರಗೆ ಬರಬೇಕಾಗುತ್ತದೆ. ಸಮಾಜದ ಋಣದಿಂದ ಅಧಿಕಾರಕ್ಕೆ ಬಂದವರು, ಸಮಾಜದಿಂದ ಶಾಸಕರಾದವರು, ಇಂದು ಈ ಪಾದಯಾತ್ರೆ ರದ್ದುಗೊಳಿಸುವ ತಂತ್ರ ನಡೆಸಿದ್ದಾರೆ. ಇಂತಹ ತಂತ್ರ ಬಿಡಿ. ಸಮಾಜ ಮನಸ್ಸು ಮಾಡಿದರೆ ಈಗ ವಿಧಾನಸೌಧದೊಳಗೆ ಇರುವವರು ಮುಂದೆ ಹೊರ ಕೂಡಬೇಕಾಗುತ್ತದೆ ಎಂದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪೀಠದ ಹಿಂದಿನ ಜಗದ್ಗುರು ಸಿದ್ದಲಿಂಗ ಸ್ವಾಮೀಜಿ, ಡಾ| ಸಾರ್ವಭೌಮ ಬಗಲಿ, ಶ್ರೀಶೈಲಪ್ಪ ಬಿದರೂರ, ಶಿವಶಂಕರ, ಸೋಮಣ್ಣ ಬೇವಿನಮರದ, ಮಾಜಿ ಸಚಿವ ಶಶಿಕಾಂತ ಅಕ್ಕಪ್ಪ ನಾಯಕ, ಮಾಜಿ ಸಂಸದರಾದ ಮಂಜುನಾಥ ಕುನ್ನೂರ, ಶಿವರಾಮೇಗೌಡ, ಮುಖಂಡರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಅಮರೇಶ ನಾಗೂರ, ಸಂಗಮೇಶ ಬಬಲೇಶ್ವರ, ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೇರಿದಂತೆ ವಿವಿಧ ಸ್ವಾಮೀಜಿಗಳು, ಸಹಸ್ರಾರು ಜನರ ಪಾಲ್ಗೊಂಡಿದ್ದರು