Advertisement

ಕಾಸರಗೋಡು ಯುವತಿ ಅತ್ಯಾಚಾರ ಪ್ರಕರಣ ಸಿಐಡಿಗೆ

12:26 AM Jan 14, 2020 | Lakshmi GovindaRaj |

ಬೆಂಗಳೂರು: ಕೇರಳದ ಕಾಸರಗೋಡಿನ ಯುವತಿ ಮೇಲಿನ ಅತ್ಯಾಚಾರ ಮತ್ತು ಮತಾಂತರ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

Advertisement

ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಸೋಮವಾರ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ಎನ್‌.ರಾಜು ಮತ್ತು ಸಿಐಡಿ ಡಿಜಿಪಿ ಪ್ರವೀಣ್‌ ಸೂದ್‌ ಅವರನ್ನು ಭೇಟಿಯಾಗಿ ಪ್ರಕರಣ ಕುರಿತು ಚರ್ಚಿಸಿದ ಸಂಸದರು, ಪ್ರಕರಣ ಬೆಂಗಳೂರು, ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಎರಡು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದೆ. ಅಲ್ಲದೆ, ಮತಾಂತರದಂತಹ ಹೇಯ ಕೃತ್ಯದ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕಿದೆ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಮನವಿ ಮಾಡಿದ್ದಾರೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, 18 ವರ್ಷದ ಯುವತಿಗೆ ಮತ್ತು ಬರಿಸುವ ಔಷಧಿ ನೀಡಿ ಅತ್ಯಾಚಾರ ಎಸಗಿದಲ್ಲದೆ, ಇಡೀ ಕುಟುಂಬ ವನ್ನು ಮತಾಂತರಕ್ಕೆ ಯತ್ನಿಸಿದ್ದಾರೆ. ಈಗಾಗಲೇ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅನ್ಸರ್‌ ಎಂಬಾತನನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಂಡು, ಆಕೆಯ ವೈದ್ಯಕೀಯ ಪರೀಕ್ಷೆ ಕೂಡ ನಡೆಸಲಾಗಿದೆ ಎಂದರು.

ಸಂತ್ರಸ್ತೆಯ ವೈಯಕ್ತಿಕ ವಿಡಿಯೋ ಇಟ್ಟುಕೊಂಡು ಆಕೆ ಸೇರಿ ಇಡೀ ಕುಟುಂಬ ಮತಾಂತರಕ್ಕೆ ಒತ್ತಾಯಿಸಿದ ಆರೋಪಿಗಳ ತಂಡ ಯಾವುದು? ಯಾವ ಕೆಲಸ ಮಾಡು ತ್ತಿದ್ದರು? ಅವರ ಅಕ್ರಮ ಚಟುವಟಿಕೆಗಳೇನು? ಮತಾಂತರಕ್ಕೆ ಯಾರೆಲ್ಲ ಪ್ರೇರಣೆ ನೀಡಿದ್ದಾರೆ? ಯಾರ ಜತೆ ಸಂಪರ್ಕ ಹೊಂದಿದ್ದರು? ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸೂಚಿಸಿರುವುದಾಗಿ ಸಂಸದರು ಹೇಳಿದರು.

ಉಗ್ರರ ಬಂಧನ: ಬೆಂಗಳೂರು, ಚಾಮರಾಜನಗರ, ಕೋಲಾರ, ಮೈಸೂರು ಸೇರಿ ರಾಜ್ಯದ ಕೆಲವಡೆ ಭಯೋತ್ಪಾದಕರ ಬಂಧನವಾಗುತ್ತಿದೆ. ಅವರ ವಿಸ್ತಾರವನ್ನು ಪೊಲೀಸರು, ತನಿಖಾ ತಂಡಗಳು ಶೋಧಿಸಬೇಕು. ಈ ಮಧ್ಯೆ ಮತಾಂತರ ಪ್ರಕರಣ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದ್ದು, ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ.

Advertisement

ಹೀಗಾಗಿ ಸಿಐಡಿ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಅದರ ವ್ಯಾಪ್ತಿಯನ್ನು ಪತ್ತೆ ಹಚ್ಚಬೇಕು. ಜತೆಗೆ ಪ್ರಕರಣದ ಹಿಂದಿರುವ ಸಂಘಟನೆ ಅಥವಾ ಸೂತ್ರದಾರನನ್ನು ಬಂಧಿಸಬೇಕು ಎಂದು ಇಬ್ಬರು ಡಿಜಿಪಿಗಳಿಗೂ ಮನವಿ ಮಾಡಲಾಗಿದೆ ಎಂದು ಹೇಳಿದರು.

ಆಗ್ನೇಯ ಪೊಲೀಸರಿಂದಲೂ ಮನವಿ: ಕಾಸರಗೂಡಿನ ಯುವತಿ ಅತ್ಯಾಚಾರ ಮತ್ತು ಮತಾಂತರ ಪ್ರಕರಣವನ್ನು ಸಿಐಡಿಗೆ ವಹಿಸಲು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಈಗಾಗಲೇ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅನ್ಸರ್‌ ಎಂಬಾತನನ್ನು ಬಂಧಿಸಿದ್ದಾರೆ.

ಅಲ್ಲದೆ, ಒಂದೇ ಘಟನೆ ಸಂಬಂಧ ಎರಡು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳ ಬಂಧನವಾಗಿದೆ. ಹೀಗಾಗಿ ಸಿಐಡಿ ತನಿಖೆ ನಡೆಸಿದರೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿ ನಗರ ಪೊಲೀಸ್‌ ಆಯುಕ್ತರಿಗೆ ದಾಖಲೆ ಸಲ್ಲಿಸಿದ್ದಾರೆ. ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಕೂಡ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಡಿಜಿಪಿ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next