ಕಾಸರಗೋಡು: ಕಾಸರಗೋಡಿನಿಂದ ತಿರುವನಂತಪುರದವರೆಗೆ ನೂತನವಾಗಿ ಅತೀ ವೇಗ ರೈಲು ದ್ವಿಹಳಿ ಸಾಧ್ಯತೆಯ ಬಗ್ಗೆ ಕೇರಳ ಮತ್ತು ಕೇಂದ್ರ ಸರಕಾರ ಸಂಯುಕ್ತವಾಗಿ ಅಧ್ಯಯನ ನಡೆಸಲಿದೆ. ಕೇರಳ ರೈಲ್ವೇ ಡೆವಲಪ್‌ಮೆಂಟ್ ಕೋರ್ಪರೇಶನ್ (ಕೆಆರ್‌ಡಿಸಿಎಲ್) ಮತ್ತು ಕೇಂದ್ರ ರೈಲ್ವೇ ಸಚಿವಾಲಯ ಸಂಯುಕ್ತವಾಗಿ ಈ ಮಹತ್ವದ ಯೋಜನೆಯ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ಮುಂದಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರೈಲ್ವೇ ಬೋರ್ಡ್ ಚೆಯರ್‌ಮನ್ ಅಶ್ವಿನಿ ಲೆಹಾನಿಯ ಪರಸ್ಪರ ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.
ಈ ಮೊದಲು ಕೆ.ಆರ್.ಡಿ.ಸಿ.ಎಲ್. ಯೋಜ ನೆಯ ಸಾಧ್ಯತೆಯ ಕುರಿತು ಅಧ್ಯಯನ ನಡೆಸಿ ರೈಲ್ವೇ ಬೋರ್ಡ್‌ಗೆ ವರದಿಯನ್ನು ಸಲ್ಲಿಸಿತ್ತು. ಈ ಯೋಜನೆಗೆ ಬೃಹತ್ ಮೊತ್ತ ಅಗತ್ಯವಿರುವ ಹಿನ್ನೆಲೆಯಲ್ಲಿ ಈ ಯೋಜನೆ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಲು ಮುಂದಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ಈ ಯೋಜನೆಯ ಅಧ್ಯಯನವನ್ನು ಸಂಯುಕ್ತವಾಗಿ ನಿರ್ವಹಿಸಲು ರೈಲ್ವೇ ಚೆಯರ್‌ಮನ್ ಒಪ್ಪಂದ ಮಾಡಿಕೊಂಡಿದ್ದಾರೆ.
46,769 ಕೋಟಿ ರೂ. ವೆಚ್ಚ ನಿರೀಕ್ಷಿಸುವ ಈ ಯೋಜನೆಯ ಸಾಧ್ಯತೆಯ ಕುರಿತು ಮತ್ತೆ ಅಧ್ಯಯನ ಮಾಡಿ ಈ ಯೋಜನೆ ಲಾಭ ತರಲಿದೆಯೇ ಎಂಬುದನ್ನು ಪರಿಶೀಲಿಸಲಿದೆ. ಕೆಆರ್‌ಡಿಸಿಎಲ್ ಮತ್ತೆ ಅಧ್ಯಯನ ನಡೆಸಿ ವರದಿಯ ಮೇಲೆ ರೈಲ್ವೇ ಪರಿಶೀಲಿಸುವುದರಿಂದ ಯೋಜನೆ ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತವಾಗಿ ಅಧ್ಯಯನ ಮಾಡಲು ಮುಂದಾಗಿದ್ದು ಇದರ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ. ತಿರುವನಂತಪುರದಿಂದ ಕಾಸರಗೋಡಿಗೆ 510 ಕಿ.ಮೀ. ದೂರವಿದ್ದು, ಗರಿಷ್ಠ ಗಂಟೆಗೆ 180 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲಿದೆ. ಸರಾಸರಿ ವೇಗ 130 ಕಿ.ಮೀ. ಪ್ರಸ್ತುತ ಇರುವ ರೈಲು ಹಳಿಯಲ್ಲಿ ಕೆಲವೆಡೆ ಕೇವಲ ಗಂಟೆಗೆ 45 ಕಿ.ಮೀ. ವೇಗದಲ್ಲಿ ಮಾತ್ರವೇ ಸಂಚರಿಸುತ್ತಿದೆ.
ಹೊಸ ರೈಲು ಹಳಿ ನಿರ್ಮಾಣ ಸಂದರ್ಭದಲ್ಲಿ ಗರಿಷ್ಠ ಪ್ರಮಾಣದಲ್ಲಿ ತಿರುವುಗಳನ್ನು ನಿವಾರಿಸಲಾಗುವುದು. ಪ್ರಸ್ತುತ ಕಾಸರಗೋಡಿನಿಂದ ತಿರುವನಂತಪುರಕ್ಕೆ ತಲುಪಲು(ರಾಜಧಾನಿ ಎಕ್ಸ್‌ಪ್ರೆಸ್) 10 ಗಂಟೆಗೆ ಅಗತ್ಯವಿದೆ.
ಈ ಹೊಸ ರೈಲು ಹಳಿಯಿಂದಾಗಿ ಆರು ಗಂಟೆಗಳೊಳಗೆ ತಿರುವನಂತಪುರ ತಲುಪಬಹುದು.ಮುಖ್ಯಮಂತ್ರಿಯ ಜತೆ ಪ್ರಿನ್ಸಿಪಲ್ ಸೆಕ್ರೆಟರಿ ವಿ.ಎಸ್.ಸೆಂದಿಲ್, ಮಾಧ್ಯಮ ಸಲಹೆಗಾರ ಜೋನ್ ಬ್ರಿಟ್ಟಾಸ್, ಕೇರಳ ಹೌಸ್ ರೆಸಿಡೆಂಟ್ ಕಮಿಷನರ್ ಬಿಶ್ವಾಸ್ ಮೆಹ್ತಾ, ಲೋಕೋಪಯೋಗಿ ಖಾತೆಯ ಪ್ರಿನ್ಸಿಪಲ್ ಸೆಕ್ರೆಟರಿ ಕಮಲವರ್ಧನ ರಾವ್, ಕೆ.ಆರ್.ಡಿ.ಸಿ.ಎಲ್. ಮೆನೇಜಿಂಗ್ ಡೈರೆಕ್ಟರ್ ಅಜಿತ್ ಕುಮಾರ್ ಮೊದಲಾದವರಿದ್ದರು.