Advertisement

ಕಾಸರಗೋಡು-ಕೊಚ್ಚುವೇಲಿ: 66,405 ಕೋಟಿ ರೂ. ಯೋಜನೆ

07:58 PM Nov 20, 2019 | mahesh |

ಕಾಸರಗೋಡು: ಕೇರಳ ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಾಸರಗೋಡು- ಕೊಚ್ಚುವೇಲಿ ಹೈಸ್ಪೀಡ್‌ ರೈಲು ಕಾರಿಡಾರ್‌ ಯೋಜನೆಯನ್ನು ಸಾಕಾರಗೊಳಿಸಲು ತಜ್ಞರ ತಂಡ ಕಾಸರಗೋಡು ಸಹಿತ ವಿವಿಧೆಡೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ. ಈಗಾಗಲೇ ಹೈಸ್ಪೀಡ್‌ ರೈಲು ಕಾರಿಡಾರ್‌ ಯೋಜನೆಯ ಸಾಧ್ಯತೆಯ ಬಗ್ಗೆ ಕೇರಳ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ರೈಲ್ವೇ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ತಜ್ಞರ ತಂಡ ಮಲಬಾರ್‌ ಪ್ರದೇಶಕ್ಕೆ ಮುಂದಿನ ತಿಂಗಳು ಭೇಟಿ ನೀಡಿ ಪರಿಶೋಧಿಸಲಿದೆ. ಆ ಬಳಿಕ ಜನವರಿ ತಿಂಗಳಲ್ಲಿ ವರದಿಯನ್ನು ಸಮರ್ಪಿಸಲಿದೆ.

Advertisement

ಪ್ಯಾರಿಸ್‌ನ ಸಿಸ್ಟ್ರ ಕಂಪೆನಿ ಈಗಾಗಲೇ ಕೇರಳದಲ್ಲಿ ಹೈಸ್ಪೀಡ್‌ ರೈಲು ಕಾರಿಡಾರ್‌ ಯೋಜನೆ ಸಾಕಾರಗೊಳಿಸುವ ಬಗ್ಗೆ ಅಧ್ಯಯನ ವರದಿ ಸಲ್ಲಿಸಿದೆ. ಹೈಸ್ಪೀಡ್‌ ರೈಲು ಯೋಜನೆಯ ಕುರಿತಾಗಿ ಪ್ರಸ್ತಾವ ಬಂದ ಐದು ವರ್ಷಗಳ ಬಳಿಕ ಸಾಧ್ಯತೆ ಅಧ್ಯಯನ ವರದಿಯನ್ನು ಸಲ್ಲಿಸಲಾಗಿದೆ. ಕಾಸರಗೋಡಿನಿಂದ ಕೊಚ್ಚುವೇಲಿ ತನಕ ನಾಲ್ಕು ಹಂತಗಳಲ್ಲಿ ಯೋಜನೆಯನ್ನು ಸಾಕಾರಗೊಳಿಸಲು ಯೋಜಿಸಲಾಗಿದೆ.

ಪ್ರಥಮ ಅಲೈನ್‌ಮೆಂಟ್‌ನಲ್ಲಿ ಪ್ರಸ್ತುತ ಇರುವ ರೈಲು ಹಳಿಗೆ ಸಮಾನಾಂತರವಾಗಿ ಮೇಲ್ಭಾಗದಲ್ಲಿ ರೈಲು ಹಳಿ ನಿರ್ಮಿಸುವ ಯೋಜನೆ ಬಗ್ಗೆ ಚಿಂತಿಸಲಾಗಿತ್ತು. ಆದರೆ ರೈಲು ಹಳಿಯಲ್ಲಿ ಸಮಾನಾಂತರವಾಗಿ ಕಾಂಕ್ರೀಟ್‌ ಕಂಬಗಳನ್ನು ನಿರ್ಮಿಸಿ ಆಗಸದಲ್ಲಿ ಹಳಿ ಬರುವ ಸಂದರ್ಭದಲ್ಲಿ ನಗರ ಪ್ರದೇಶದ ಕಟ್ಟಡಗಳನ್ನು ಮುರಿದು ತೆಗೆಯಬೇಕಾದ ಪರಿಸ್ಥಿತಿ ಎದುರಾಗಲಿದೆ. ಇದು ಭೂಸ್ವಾಧೀನಕ್ಕಿಂತ ಅಧಿಕ ವೆಚ್ಚವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಅಲೈನ್‌ಮೆಂಟ್‌ ಬದಲಾಯಿಸ ಲಾಯಿತು. ಪ್ರಸ್ತುತ ಇರುವ ರೈಲು ಹಳಿಗೆ ಸಮಾನಾಂತರವಾಗಿ ನಗರಗಳನ್ನು ಬಿಟ್ಟು ನೂತನ ಅಲೈನ್‌ಮೆಂಟ್‌ ಅನುಸರಿಸಿ ಸಾಧ್ಯತಾ ಅಧ್ಯಯನ ವರದಿಯನ್ನು ತಯಾರಿಸಲಾಗಿದೆ. ಇದರಂತೆ ಹೆಚ್ಚಿನ ಪ್ರಮಾಣದಲ್ಲಿ ಭೂಸ್ವಾಧೀನ ಮಾಡಬೇಕಾಗಿ ಬರಲಿದೆ.

ಕಾಲಾವಧಿಯಲ್ಲಿ ಯೋಜನೆ ಸಾಕಾರ
ಹೈಸ್ಪೀಡ್‌ ರೈಲು ಕಾರಿಡಾರ್‌ ಯೋಜನೆಯ ಒಟ್ಟು ವೆಚ್ಚದ ಶೇ.26 ರಷ್ಟು ಕೇಂದ್ರ ಮತ್ತು ರಾಜ್ಯ ಸರಕಾರ ವಹಿಸಲಿದೆ. ಉಳಿದ ಮೊತ್ತವನ್ನು ಜಪಾನ್‌ ಬ್ಯಾಂಕ್‌, ಎ.ಡಿ.ಬಿ.ಐ. ಮೊದಲಾದ ಸಂಸ್ಥೆಗಳಿಂದ ಸಾಲ ಪಡೆಯಲಾಗುವುದು. ಮೂರು ವರ್ಷಗಳೊಳಗೆ ಭೂಸ್ವಾಧೀನ ಸಾಧ್ಯವಾದರೆ ನಿರೀಕ್ಷೆಯಂತೆ ನಿಗದಿತ ಕಾಲಾವಧಿಯಲ್ಲಿ ಯೋಜನೆ ಸಾಕಾರಗೊಳ್ಳಲಿದೆ.
– ವಿ.ಅಜಿತ್‌ ಕುಮಾರ್‌, ಎಂ.ಡಿ. ಕೇರಳ ರೈಲ್ವೇ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌.

-ಹೈಸ್ಪೀಡ್‌ ರೈಲುಗಳಿಗೆ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ತಿರೂರು, ತೃಶ್ಶೂರು, ಎರ್ನಾಕುಳಂ, -ಕೋಟ್ಟಯಂ, ಚೆಂಗನ್ನೂರು, ಕೊಲ್ಲಂ, ಕೊಚ್ಚುವೇಲಿಯಲ್ಲಿ ನಿಲುಗಡೆ ನೀಡಲಾಗುವುದು.
-ಮಹತ್ವಾಕಾಂಕ್ಷೆಯ ಈ ಯೋಜನೆಗೆ ಒಟ್ಟು ವೆಚ್ಚ 66,405 ಕೋಟಿ ರೂ.
-ಮಾರ್ಗ: ಕಾಸರಗೋಡು-ಕೊಚ್ಚುವೇಳಿ ಒಟ್ಟು ದೂರ 532 ಕಿ.ಮೀ.
-ಭೂಸ್ವಾಧೀನಕ್ಕೆ ಅಗತ್ಯದ ಮೊತ್ತ 7,720 ಕೋಟಿ ರೂ. 2024ರಲ್ಲಿ ಈ ಯೋಜನೆ ಸಾಕಾರ

Advertisement

ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next