Advertisement

ಕಾಸರಗೋಡು: ದುರಂತದ ಹಾದಿಗೆ ಕೊನೆಯೆಂದು?

01:12 PM Nov 19, 2021 | Team Udayavani |

ಭಾಷಾವಾರು ಪ್ರಾಂತ ರಚನೆಯಾದ ಹೊಸತರಲ್ಲಿ ಎಂದರೆ 1956ರ ಕಾಲಘಟ್ಟದಲ್ಲಿ ಕಾಸರಗೋಡು ಕನ್ನಡ ನಾಡು ಎನ್ನುವ ಕೂಗು ರಾಜ್ಯ ರಾಜ್ಯಗಳಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಪ್ರತಿಧ್ವನಿಸುತ್ತಿತ್ತು. ವಾಸ್ತವವಾಗಿ ಅಧಿಕೃತವಾದ ವರದಿ ಹೊರಬರುವುದಕ್ಕೂ ಮೊದಲು ಕಾಸರಗೋಡಿನ ಬಗ್ಗೆ ಕಾಳಜಿ ಇದ್ದವರು ಆಗಬಹುದಾದ ಅನ್ಯಾಯದ ಸುಳುಹನ್ನು ಮನಗಂಡು ಕನ್ನಡ ಪರ ಹೋರಾಟವನ್ನು ಪ್ರಾರಂಭಿಸಿದ್ದರು. ಬೆನಗಲ್‌ ಶಿವರಾಯರಂತಹ ಕರ್ನಾಟಕದ ಕೆಲವು ಮಂದಿ ಹಿರಿಯರು ಈ ಹೋರಾಟಕ್ಕೆ ಒತ್ತಾಸೆಯನ್ನು ನೀಡಿದ್ದರು. ಪ್ರತಿಭಟನೆ, ನಾನಾ ಆಯಾಮಗಳಲ್ಲಿ ನಡೆದಿತ್ತು. ಮಕ್ಕಳು, ಹೆಮ್ಮಕ್ಕಳೆನ್ನದೆ ಆಬಾಲವೃದ್ಧರೂ ಈ ಹೋರಾಟದಲ್ಲಿ ಭಾಗಿಗಳಾಗಿದ್ದರು. ಚಂದ್ರಗಿರಿ ಹೊಳೆಯ ದಕ್ಷಿಣಕ್ಕಿರುವ ಒಂದೇ ಒಂದು ಪಂಚಾಯತನ್ನು ಹೊರತುಪಡಿಸಿ ಉಳಿದೆಲ್ಲ ಪಂಚಾಯತ್‌ಗಳು ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗವೆಂಬ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ್ದುವು. ಅನೇಕ ಮಂದಿ ನೇತಾರರು ತ್ಯಾಗವನ್ನು ಒಂದು ತಪಸ್ಸನ್ನಾಗಿಸಿ ಈ ದೆಸೆಯಲ್ಲಿ ನಿರಂತರ ಪರಿಶ್ರಮಿಸಿದ್ದರು. ಬೇರೆ ಬೇರೆ ರೀತಿಯ ಭಿನ್ನವತ್ತಳೆಗಳನ್ನು ಸಮರ್ಪಿಸಿ ದಿಲ್ಲಿಯ ತನಕ ತಮ್ಮ ಬೇಡಿಕೆಯ ಧ್ವನಿಯನ್ನು ಮುಟ್ಟಿಸಿದ್ದರು.

Advertisement

ಇವೆಲ್ಲದರ ಪರಿಣಾಮವಾಗಿ 1966ರಲ್ಲಿ ಜಸ್ಟೀಸ್‌ ಮಹಾಜನರ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗವೊಂದನ್ನು ನೇಮಿಸಿ ಈ ಆಯೋಗದ ವರದಿಯನ್ನು ಅಂತಿಮ ಎಂದು ಪರಿಗಣಿಸಬೇಕೆಂದು ಕೇಂದ್ರ ಸರಕಾರ ಆಜ್ಞೆಯನ್ನು ಹೊರಡಿಸಿತ್ತು. ಮಹಾಜನ ಆಯೋಗ ಪ್ರಾಮಾಣಿಕ

ವಾಗಿ ಕರ್ತವ್ಯವನ್ನು ನಿರ್ವಹಿಸಿ ಚಂದ್ರಗಿರಿ ನದಿಯ ಉತ್ತರಕ್ಕಿರುವ ಕಾಸರಗೋಡಿನ ಭೂಪ್ರದೇಶ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಮಾತ್ರವಲ್ಲ ಆಡಳಿತಾತ್ಮಕವಾಗಿಯೂ ಕರ್ನಾಟಕದೊಂದಿಗೆ ವಿಲೀನ ಗೊಳ್ಳಬೇಕೆಂಬ ಪ್ರತಿಪಾದನೆಯನ್ನು ಒಳಗೊಂಡ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿತು. ಆಮೇಲೆ ಏನಾಯಿತು ಎನ್ನುವ ಪ್ರಶ್ನೆಗೆ ಈ ತನಕ ಕಾಸರಗೋಡಿನ ಕನ್ನಡಿಗರಿಗಂತೂ ಸಮರ್ಪಕವಾದ ಉತ್ತರ ಸಿಗಲಿಲ್ಲ. ಅಂದಿನಿಂದ ಇಂದಿನವರೆಗೆ ಸಂಸದರು, ಶಾಸಕರಾದಿ ಯಾಗಿ ಜನಪ್ರತಿನಿಧಿಗಳಾಗಿದ್ದವರೆಲ್ಲರೂ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಮಹಾಜನ ಆಯೋಗದ ನೇಮಕಕ್ಕೂ ಮೊದಲೇ ಕಾಸರಗೋಡಿನಲ್ಲಿ ಕನ್ನಡಪರ ಹೋರಾಟ ಮತ್ತು ಕನ್ನಡಪರವಾದಂತಹ ನಿಲುವು ಎಷ್ಟು ಭದ್ರವಾಗಿತ್ತೆಂಬುದಕ್ಕೆ ಚುನಾವಣೆಗಳಲ್ಲಿ ಉಮೇಶ ರಾಯರು ಅವಿರೋಧವಾಗಿಯೂ ಕಳ್ಳಿಗೆ ಮಹಾಬಲ ಭಂಡಾರಿಯವರು ಮಂಜೇಶ್ವರ ಮತದಾನ ಕ್ಷೇತ್ರದಿಂದ ಮೂರು ಬಾರಿ ನಿರಂತರವಾಗಿಯೂ ಕಾಸರಗೋಡು ಮತದಾರ ಕ್ಷೇತ್ರದಿಂದ ಅಡ್ವೊಕೇಟ್‌ ಕುಣಿಕುಳ್ಳಾಯರು ಒಂದು ಬಾರಿ ಆರಿಸಿ ಬಂದುದು ಜ್ವಲಂತ ಸಾಕ್ಷಿಯಾಗಿತ್ತು. ಅದಾಗಲೇ ಅಸ್ತಿತ್ವಕ್ಕೆ ಬಂದಿದ್ದ ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಸಮಿತಿ ನೇತೃತ್ವವನ್ನು ವಹಿಸಿಕೊಂಡಿತ್ತು. ಇಂದಿಗೂ ಈ ಪ್ರದೇಶದಲ್ಲಿ ಕನ್ನಡಿಗ ಮತದಾರರ ಖಜಾನೆ ಚುನಾವಣೆಯ ಸೋಲು- ಗೆಲುವುಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಲ್ಲ ಶಕ್ತಿಯನ್ನು ಹೊಂದಿದೆ ಎನ್ನುವುದಕ್ಕೆ ರಾಜಕೀಯ ಪಕ್ಷಗಳು ಬಿಡುಗಡೆ ಮಾಡುತ್ತಿರುವ ಚುನಾವಣ ಪ್ರಣಾಳಿಕೆಗಳೇ ಸಾಕ್ಷಿ ನುಡಿಯುತ್ತವೆ.

ಕಾಲ ಕಳೆದಂತೆ ತಲೆಮಾರುಗಳ ಅಂತರದಲ್ಲಿ ಹೋರಾಟದ ಶಕ್ತಿ ಕ್ಷೀಣಿಸುತ್ತಾ ಬಂತು. ರಾಜಕೀಯ ಪಕ್ಷಗಳು ಅಧಿಕಾರದ ಆಸೆಯೂ ಸೇರಿದಂತೆ ಬೇರೆ ಬೇರೆ ಆಮಿಷಗಳನ್ನು ಒಡ್ಡಿ ಕನ್ನಡದ ನಾಯಕರನ್ನು ತಮ್ಮೆಡೆಗೆ ಸೆಳೆದುಕೊಂಡುದುದರಿಂದ ಕನ್ನಡ ಸಂಸ್ಕೃತಿಯ ಆರೋಗ್ಯ ಕ್ಷೀಣಿಸುತ್ತಾ ಬಂತು. ಕರ್ನಾಟಕ ಸರಕಾರ ನೀಡುತ್ತಿದ್ದ ಬೆಂಬಲವೂ ಕ್ರಮೇಣ ಕುಸಿಯುತ್ತಾ ಹೋಯಿತು. ಪ್ರಾರಂಭದಲ್ಲಿ ಕರ್ನಾಟಕದ ಕೆಲವು ಅಕಾಡೆಮಿಗಳಲ್ಲಾದರೂ ಕಾಸರಗೋಡಿಗೆ ಪ್ರಾತಿನಿಧ್ಯವಿತ್ತು. ಕರ್ನಾಟಕ ಸರಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅಧಿಕೃತವಾದ ಸಮ್ಮಾನ, ಗೌರವಗಳು ಕಾಸರಗೋಡನ್ನೂ ಪರಿಗಣಿಸಿ ಕೊಡಲ್ಪಡುತ್ತಿದ್ದುದು ಕನ್ನಡ ಹೋರಾಟಕ್ಕೆ ಪರೋಕ್ಷವಾದ ಶಕ್ತಿಯನ್ನು ತುಂಬಿಸುತ್ತಿತ್ತು. ಇವು ದಿನದಿಂದ ದಿನಕ್ಕೆ ಶೂನ್ಯದತ್ತ ಮುಖಮಾಡಿ ಇಂದು ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ.

Advertisement

ಕಾಸರಗೋಡನ್ನು ಗಡಿಪ್ರದೇಶ ಎಂದು ಹೇಳಲಾಗಿದೆ. ಹೌದು, ಇದು ಹೊರನಾಡು ಅಲ್ಲ. ಗಡಿನಾಡು ಎನ್ನುವುದನ್ನು ಯಾರೂ ಮರೆಯಬಾರದು. ಈ ನೆಲೆಯಲ್ಲಿ ಕಾಸರಗೋಡಿನಲ್ಲಿರುವ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಎಲ್ಲ ಸಹಕಾರವನ್ನೂ ನೀಡಬೇಕಾದ ಬಾಧ್ಯತೆ ಕೇರಳ ಸರಕಾರಕ್ಕೆ ಇದೆ. ಅದಕ್ಕೂ ಹೆಚ್ಚಾಗಿ ಕರ್ನಾಟಕ ಸರಕಾರಕ್ಕೆ ಆ ಬಾಧ್ಯತೆ ಇದೆ. ಕಾರಣ ಇಲ್ಲಿ ಕನ್ನಡ ಸಂಸ್ಕೃತಿ ಉಳಿಯಬೇಕಾದರೆ ಅದರ ಸಂರಕ್ಷಣೆಗಾಗಿ, ಸಂವರ್ಧನೆಗಾಗಿ ನಿರಂತರ ದುಡಿಯುವ ಭಾಷಿಗರ ಸಂಖ್ಯೆ ಹೆಚ್ಚಾಗುತ್ತಾ ಹೋಗಬೇಕು. ವಸ್ತುಸ್ಥಿತಿ ಎಂದರೆ ಈ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ. ಕಾರಣ ಸ್ಪಷ್ಟವಾಗಿಯೇ ಇದೆ. ಈ ಹೋರಾಟದಲ್ಲಿ ನಿರತರಾದವರಿಗೆ ಅಧಿಕಾರದ ಸಂಪತ್ತಿನ ಯಾವ ಪ್ರತಿಫ‌ಲವೂ ಸಿಗುವುದಿಲ್ಲ. ಹೀಗಾದರೆ ಮಾತೃಭಕ್ತಿಯನ್ನು, ಮಾತೃಭಾಷೆಯನ್ನು, ಮಾತೃಸಂಸ್ಕಾರವನ್ನು ಉಳಿಸಿಕೊಳ್ಳಬೇಕೆಂಬ ಕನಸನ್ನು (ಭ್ರಮೆಯನ್ನು?) ಧ್ಯೇಯವಾಗಿರಿಸಿಕೊಂಡು ನಡೆಯುವ ಯಾವ ಹೋರಾಟವೇ ಆದರೂ ತನ್ನ ಕಾವನ್ನು ಉಳಿಸಿಕೊಳ್ಳುವುದಾದರೂ ಹೇಗೆ? ಹಾಗಾಗಿ ಕರ್ನಾಟಕ ಸರಕಾರ ಸೂಕ್ತವಾದ ರೀತಿಯಲ್ಲಿ ಸ್ಪಂದಿಸದೇ ಹೋದರೆ ಕಾಸರಗೋಡು ದುರಂತದ ದಾರಿಯಲ್ಲಿ ತಾರ್ಕಿಕವಾದ ಅಂತ್ಯವನ್ನು ಕಾಣುವುದರಲ್ಲಿ ಸಂದೇಹವಿಲ್ಲ.

ಭಾಷೆ  ಮನುಷ್ಯನ ಬದುಕಿನ ಉಸಿರು. ಈ ಉಸಿರನ್ನು ಕಾಪಾಡಿಕೊಳ್ಳು ವಲ್ಲಿ ಒಬ್ಬ ವ್ಯಕ್ತಿಗೆ ಪ್ರಾಣದಾನ ನೀಡುವಂತಹ ಮಾನವೀಯತೆಯನ್ನು ಮೆರೆಯಬೇಕಾದದ್ದು ನಾಗರಿಕ ಪ್ರಜಾಪ್ರಭುತ್ವದಲ್ಲಿ ಬದುಕುವ ಪ್ರತೀ ಒಬ್ಬರ ಕರ್ತವ್ಯವಾಗಿದೆ. ಈ ಮಾತನ್ನು ನಮ್ಮ ರಾಜಕೀಯ ಪಕ್ಷಗಳ ಕಾರ್ಯಕರ್ತರು, ನಾಯಕರು ತುಂಬ ಸಹಾನುಭೂತಿಯಿಂದ ಪರಿಗಣಿಸಬೇಕು. ಬರೀ ಲಾಭ-ನಷ್ಟಗಳ ದೃಷ್ಟಿಯಿಂದ ನೋಡಿದರೆ ಆರೋಗ್ಯಕ್ಕೆ ಹಾನಿಯಾದೀತು. ಜೀವಕ್ಕೆ ಸಂಚಕಾರ ಬಂದೀತು. ಅದಕ್ಕೆ ಅಧಿಕಾರದಲ್ಲಿದ್ದವರು ಎಂದರೆ ಕೇರಳ-ಕರ್ನಾಟಕ ರಾಜ್ಯಗಳೆರಡೂ ಹೊಣೆಗಾರಿಕೆಯನ್ನು ಹೊರಬೇಕಾದೀತು.

ಗಡಿನಾಡು ಎಂಬ ನೆಲೆಯಲ್ಲಿ ಕಾಸರಗೋಡಿಗೆ ಸಂವಿಧಾನದತ್ತವಾಗಿ ಸಿಗಬೇಕಾದ ಎಲ್ಲ ಸೌಲಭ್ಯ, ಸೌಕರ್ಯಗಳೂ ಕೇರಳ ಸರಕಾರದಿಂದ ಸಿಗಲೇಬೇಕು. ಕರ್ನಾಟಕ ಸರಕಾರ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಇರುವ ಪ್ರೀತಿ, ಬದ್ಧತೆಯಿಂದಲೂ ಕಾಸರಗೋಡಿನಲ್ಲಿ ಅದನ್ನು ಉಳಿಸಿಕೊಳುವುದಕ್ಕೆ ಪ್ರಯತ್ನಿಸಬೇಕು. ಎರಡೂ ಸರಕಾರ ಗಳು ಇದನ್ನೊಂದು ಸಂಘರ್ಷದ ವಿಷಯವಾಗಿಸದೆ ಸೌಹಾ ರ್ದದ ವಿಷಯವೆಂದು ಭಾವಿಸಿ ಪ್ರಶ್ನೆಯನ್ನು ಬಗೆಹರಿಸುವುದಕ್ಕೆ ಪ್ರಯತ್ನಿಸಬೇಕು. ಶಾಶ್ವತ ಪರಿಹಾರ ಕಾಣುವ ತನಕ ಇಲ್ಲಿನ ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದಕ್ಕೆ ಮತ್ತು ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಎಲ್ಲರೂ ಬದ್ಧರಾಗಬೇಕು. ಕರ್ನಾಟಕ ಸರಕಾರ ಇದಕ್ಕಾಗಿಯೇ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಬಹುದು. ಶೈಕ್ಷಣಿಕ ಕ್ಷೇತ್ರವೂ ಸೇರಿದ ಹಾಗೆ ಇಲ್ಲಿನ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲೀನೀಕರಣವನ್ನೂ ಬೆಸೆಯಬಹುದು.

ಇದೇ ಹೊತ್ತಿನಲ್ಲಿ ಇಲ್ಲಿನ ಕನ್ನಡಿಗರೂ ಅಂತಹ ಸಹಕಾರವನ್ನು ಅರ್ಹತೆಯ ಮೇಲೆ ಪಡೆಯಬೇಕಾದ ತಮ್ಮ ಯೋಗ್ಯತೆಯನ್ನು ರುಜುವಾತುಗೊಳಿಸುವುದಕ್ಕೆ ಸಿದ್ಧರಾಗಬೇಕು. ಏಕತೆಯನ್ನು ಕಾಪಾಡಿಕೊಳ್ಳಬೇಕು. ಸಂಸ್ಥೆಗಳು ಗುಣಮಟ್ಟವನ್ನು ಉಳಿಸಿಕೊಳ್ಳಬೇಕು. ತಮ್ಮತಮ್ಮಲ್ಲಿ ಕಾಲೆಳೆಯುವ ಪ್ರವೃತ್ತಿಯನ್ನು ಬದಿಗಿರಿಸಿ ಸಮಷ್ಟಿಯ ಹಿತದೃಷ್ಟಿಯಿಂದ ಒಂದಾಗಿ ನಡೆಯಬೇಕು.

-ಡಾ| ರಮಾನಂದ ಬನಾರಿ, ಮಂಜೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next