Advertisement
ಕಾಸರಗೋಡು: ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೇರಳವನ್ನು ಮತ್ತೆ ಮೇಲಕ್ಕೆತ್ತಲು ಹಲವು ಯೋಜನೆಗಳ ಸಹಿತ ನಾಲ್ಕು ಗಂಟೆಗಳೊಳಗೆ ಕಾಸರಗೋಡಿನಿಂದ ತಿರುವನಂತಪುರಕ್ಕೆ ತಲುಪುವ ಕ್ಷಿಪ್ರ ರೈಲು ಯೋಜನೆಯನ್ನು ಘೋಷಿಸಲಾಗಿದೆ. ಕಾಸರಗೋಡು ಪ್ಯಾಕೇಜ್‌ನಲ್ಲಿ 91 ಕೋಟಿ ರೂ. ಮತ್ತು ಎಂಡೋ ಸಂತ್ರಸ್ತರ ಪುನರ್ವಸತಿ ಕಲ್ಪಿಸಲು 20 ಕೋಟಿ ರೂ. ಕಾದಿರಿಸಿ ಕೇರಳದ 2019-20ನೇ ಹಣಕಾಸು ವರ್ಷದ ಮುಂಗಡಪತ್ರವನ್ನು ಗುರುವಾರ ಬೆಳಗ್ಗೆ ರಾಜ್ಯ ಹಣಕಾಸು ಸಚಿವ ಡಾ| ಥೋಮಸ್ ಐಸಾಕ್ ವಿಧಾನಸಭೆಯಲ್ಲಿ ಮಂಡಿಸಿದರು.
Related Articles
Advertisement
ವಯನಾಡು, ಅಲಪ್ಪುಳ ಜಿಲ್ಲೆಗಳಿಗೆ ಹೆಚ್ಚು ಕೊಡುಗೆ
ಬಜೆಟ್‌ನಲ್ಲಿ ವಯನಾಡು ಮತ್ತು ಆಲಪ್ಪುಳ ಜಿಲ್ಲೆಗೆ ಹೆಚ್ಚು ಯೋಜನೆಗಳನ್ನು ಕೊಡುಗೆಯಾಗಿ ನೀಡಿದೆ. ಈ ಎರಡು ಜಿಲ್ಲೆಗಳಲ್ಲಿ ಪ್ರವಾಹದಿಂದ ಭಾರೀ ನಷ್ಟ ಸಂಭವಿಸಿತ್ತು.
ಎಲ್ಲ ತಾಲೂಕು ಸರಕಾರಿ ಆಸ್ಪತ್ರೆಗಳನ್ನು ನವೀಕರಿಸಲಾಗುವುದು. ಮೀನು ಕಾರ್ಮಿಕರಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಅದಕ್ಕಾಗಿ ಮತ್ಸ ್ಯ ಫೆಡ್‌ಗೆ 10 ಕೋಟಿ ರೂ. ನೀಡಲಾಗುವುದು. ಕರಾವಳಿ ಪ್ರದೇಶಗಳ ಅಭಿವೃದ್ಧಿಗಾಗಿ 1,000 ಕೋಟಿ ರೂ. ಸಹಾಯ ನೀಡಲಾಗುವುದು. ಕರಾವಳಿ ಪ್ರದೇಶಗಳ ಸರಕಾರಿ ತಾಲೂಕು ಆಸ್ಪತ್ರೆಗಳ ಅಭಿವೃದ್ಧಿಗಾಗಿ 400 ಕೋಟಿ ರೂ. ಮೀಸಲಿರಿಸಲಾಗಿದೆ.
ವಿದ್ಯುತ್ ಚಾಲಿತ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಲಾಗುವುದು. ಕಾಸರಗೋಡಿನಿಂದ ತಿರುವನಂತಪುರ ತನಕದ ಕರಾವಳಿ ಹೆದ್ದಾರಿ ನಿರ್ಮಾಣಕ್ಕಾಗಿ ಕಿಫ್‌ಬಿ ಮೂಲಕ 6,000 ಕೋಟಿ ರೂ. ಮೀಸಲಿರಿಸಲಾಗಿದೆ. ಕಾಸರಗೋಡು-ತಿರುವನಂತಪುರ ತನಕ 515 ಕಿ.ಮೀ. ಕ್ಷಿಪ್ರ ರೈಲು ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆ ಜಾರಿಗೊಂಡಲ್ಲಿ ಕಾಸರಗೋಡಿನಿಂದ ತಿರುವನಂತಪುರಕ್ಕೆ ನಾಲ್ಕು ತಾಸುಗಳಲ್ಲಿ ತಲುಪಬಹುದು. ಇದು ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸುವ ರೈಲುಗಳು ಈ ಹಳಿಯಲ್ಲಿ ಸೇವೆ ನಡೆಸಲಿವೆ.
ಹಿರಿಯ ನಾಗರಿಕರಿಗೆ ನೀಡುವ ಕಲ್ಯಾಣ ಪಿಂಚಣಿ ಮೊತ್ತವನ್ನು 1,100 ರೂ.ನಿಂದ 1,200 ಗೇರಿಸಲಾಗುವುದು. ಐದು ವರ್ಷದೊಳಗೆ ಈ ಪಿಂಚಣಿ ಮೊತ್ತವನ್ನು 1,500 ರೂ.ಗೇರಿಸಲಾಗುವುದು. ಕೇರಳ ಬ್ಯಾಂಕ್ ಶೀಘ್ರ ಅಸ್ತಿತ್ವಕ್ಕೆ ಬರಲಿದೆ. ಗಲ್ಫ್ನಲ್ಲಿ ದುಡಿಯುತ್ತಿರುವ ಕೇರಳಿಯರು ಅಲ್ಲಿ ಸಾವಿಗೀಡಾದರೆ ಅವರ ಮೃತ ದೇಹವನ್ನು ನೋರ್ಕಾದ ಸಹಾಯದೊಂದಿಗೆ ಉಚಿತವಾಗಿ ಊರಿಗೆ ತಲುಪಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಒಳಪಡಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ 1,420 ಕೋಟಿ ರೂ. ಮೀಸಲಿರಿಸಲಾಗಿದೆ. ರಬ್ಬರ್ ಕೃಷಿ ಬೆಂಬಲ ನೀಡಲು 500 ಕೋಟಿ ರೂ. ಮೀಸಲಿರಿಸಲಾಗಿದೆ. ಕಿಫ್‌ಬಿ ಸಹಾಯದೊಂದಿಗೆ ರಾಜ್ಯದಲ್ಲಿ ಹೊಸದಾಗಿ 30 ಜಲವಿದ್ಯುತ್ ಯೋಜನೆ ಸ್ಥಾಪಿಸಲಾಗುವುದು. ಇಡುಕ್ಕಿಯಲ್ಲಿ ಹೊಸ ವಿದ್ಯುತ್ ಸ್ಥಾವರ ಆರಂಭಿಸಲಾಗುವುದು. ಎಲ್ಲ ಸರಕಾರಿ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಸೋಲಾರ್ ಪ್ಯಾನಲ್‌ಗಳನ್ನು ಸ್ಥಾಪಿಸಿ ಸೌರ ವಿದ್ಯುತ್ ಉತ್ಪಾದಿಸಲಾಗುವುದು. ಮನೆಗಳಲ್ಲಿ ಸಾಧಾರಣ ಬಲ್ಬುಗಳನ್ನು ಹೊರತುಪಡಿಸಿ ಅತೀ ಕಡಿಮೆ ವಿದ್ಯುತ್ ಬಳಸುವ ಎಲ್‌ಇ.ಡಿ. ಬಲ್ಬುಗಳನ್ನು ವಿತರಿಸುವ ಯೋಜನೆ ಆರಂಭಿಸಲಾಗುವುದು. ಇದರಿಂದ 50 ಮೆಗಾವಾಟ್ ವಿದ್ಯುತ್ ಉಳಿತಾಯವಾಗಲಿದೆ. ವಿದ್ಯುತ್ ಯೋಜನೆಗಾಗಿ ಕಿಫ್‌ಬಿ 6375 ಕೋಟಿ ರೂ. ನೀಡಲು ಮುಂದಾಗಿದೆ. ಮಹಾಪ್ರವಾಹದಿಂದ ಕೇರಳಕ್ಕೆ 15000 ಕೋಟಿ ರೂ. ಆದಾಯ ನಷ್ಟವಾಗಿದೆ. ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಈ ತನಕ 3229 ಕೋಟಿ ರೂ. ಲಭಿಸಿದೆ.
ರಾಜ್ಯದಲ್ಲಿ ಎಲ್ಲ ಆಟೋ ರಿಕ್ಷಾಗಳನ್ನು ಹಂತಹಂತವಾಗಿ ವಿದ್ಯುತ್ ಆಟೋ ರಿಕ್ಷಾಗಳನ್ನಾಗಿ ಪರಿವರ್ತಿಸಲಾಗುವುದು. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವಿದ್ಯುತ್ ಚಾಲಿತ ಬಸ್ಸುಗಳನ್ನಾಗಿ ಪರಿವರ್ತಿಸಲಾಗುವುದು.
ಕಾಸರಗೋಡು-ತಿರುವನಂತಪುರ ತನಕದ ಜಲ ಸಾರಿಗೆ ಯೋಜನೆಯನ್ನು 2020ರೊಳಗಾಗಿ ಪೂರ್ತಿಗೊಳಿಸಲಾಗುವುದು. ಶಾಲೆಗಳ ಸಾರ್ವಜನಿಕ ಶಿಕ್ಷಣ ವಲಯಕ್ಕೆ ಕಿಫ್‌ಬಿ ಸಹಾಯ ಮೂಲಕ 1320 ಕೋಟಿ ರೂ. ಮೀಸಲಿರಿಸಲಾಗಿದೆ.
ಎಲ್ಲ ಕುಟುಂಬಗಳಿಗೆ ವಿಮೆ
ಎಲ್ಲಾ ಕುಟುಂಬಗಳಿಗೆ ವಿಮಾ ಸಂರಕ್ಷಣೆ ಏರ್ಪಡಿಸಲಾಗುವುದು. ಪ್ರತಿ ಕುಟುಂಬದ ನಾಲ್ವರಿಗೆ ಇದರ ಪ್ರಯೋಜನ ಲಭಿಸಲಿದೆ. ಕಂತುಗಳನ್ನು ಪಾವತಿಸಿ ಈ ಯೋಜನೆಯ ಸದಸ್ಯರಾಗಬಹುದು.