Advertisement

ಕಾಸರಗೋಡು:ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ

09:45 PM May 17, 2019 | Sriram |

ಕಾಸರಗೋಡು: ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಕಾಸರಗೋಡು ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಮೂಲ ಸೌಕರ್ಯಗಳಿಲ್ಲದೆ ಸಮಸ್ಯೆ ಎದುರಿಸುತ್ತಿರುವಂತೆ ವೈದ್ಯರ ಸಮಸ್ಯೆ ಕಾಡುತ್ತಿದೆ.

Advertisement

ಕಾಸರಗೋಡು ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವೈದ್ಯರ ನೇಮಕ ಈ ವರೆಗೂ ಆಗಿಲ್ಲ.ಮುಂದಿನ ತಿಂಗಳಿಂದ ಮುಂಗಾರು ಮಳೆ ಆರಂಭಿಸಲಿರುವಂತೆ ವಿವಿಧ ಮಾರಕ ಹಾಗೂ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದರೂ, ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಬಿದ್ದಿರುವ ವೈದ್ಯರ ಹುದ್ದೆಗಳನ್ನು ಇನ್ನೂ ಭರ್ತಿ ಮಾಡಿಲ್ಲ.

ಕಾಸರಗೋಡು ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ 24 ಅಸಿಸ್ಟೆಂಟ್‌ ಸರ್ಜನ್‌ಗಳ ಮತ್ತು 9 ಕ್ಯಾಶುವಲ್ಟಿ ಮೆಡಿಕಲ್‌ ಆಫೀಸರ್‌ಗಳ ಹುದ್ದೆ ಖಾಲಿ ಬಿದ್ದಿವೆ. ಹೀಗಿದ್ದರೂ ಈ ಹುದ್ದೆಗಳನ್ನು ಭರ್ತಿಗೊಳಿಸಲು ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಕಮ್ಯೂನಿಟಿ ಹೆಲ್ತ್‌ ಸೆಂಟರ್‌ಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಪರಿವರ್ತಿಸಿದಾಗ ಸ್ಪೆಶಾಲಿಟಿ ವಿಭಾಗದಲ್ಲೂ ಸಾಕಷ್ಟು ಹುದ್ದೆಗಳು ತೆರವಾಗಿವೆ. ಮಳೆಗಾಲ ಇನ್ನೇನು ಆರಂಭಗೊಳ್ಳಲಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಹಿಂದಿನ ವರ್ಷಗಳಲ್ಲೂ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕವಾಗಿ ಸಾಂಕ್ರಾಮಿಕ ರೋಗ ಹರಡಿತ್ತು. ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸದ್ಯ ಇರುವ ವೈದ್ಯರು ಸಾಕಷ್ಟು ಶ್ರಮ ವಹಿಸಬೇಕಾಗಿದೆ. ಸದ್ಯದ ವೈದ್ಯರು ಹೆಚ್ಚು ಒತ್ತಡದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಮುಖಾಂತರ ತಾತ್ಕಾಲಿಕ ವೈದ್ಯರ ನೇಮಕ ನಡೆಯುತ್ತಿದೆ. ಎನ್‌.ಎಚ್‌.ಎಂ. ಮುಖಾಂತರವೂ ತಾತ್ಕಾಲಿಕ ವೈದ್ಯರನ್ನು ನೇಮಿಸಲಾಗುತ್ತಿದ್ದರೂ, ವೈದ್ಯರ ಕೊರತೆಯನ್ನು ನೀಗಿಸಲು ಇದು ಸೂಕ್ತ ಕ್ರಮವಲ್ಲ. ಈ ಕಾರಣದಿಂದ ಖಾಯಂ ವೈದ್ಯರನ್ನು ನೇಮಿಸಬೇಕೆಂಬುದಾಗಿ ಸಾರ್ವತ್ರಿಕವಾಗಿ ಸರಕಾರವನ್ನು ಆಗ್ರಹಿಸಲಾಗಿದೆ.

Advertisement

ಕ್ರಮವಿಲ್ಲ
2017ರಲ್ಲಿ ಜಾರಿಗೆ ಬಂದ ಅಸಿಸ್ಟೆಂಟ್‌ ಸರ್ಜನ್‌ಗಳ ರ್‍ಯಾಂಕ್‌ ಪಟ್ಟಿಯಿಂದ ನೇಮಕಾತಿ ನಡೆದು ಒಂದು ವರ್ಷವೇ ಕಳೆಯಿತು. 2014ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. 2015ರಲ್ಲಿ ಪರೀಕ್ಷೆ ನಡೆಸಿ ಸಿದ್ಧಪಡಿಸಿದ ರ್‍ಯಾಂಕ್‌ ಪಟ್ಟಿಯಲ್ಲಿ ಸ್ಥಾನ ಪಡೆದ 598 ರ ವರೆಗಿನ ವೈದ್ಯರನ್ನು ನೇಮಿಸಲಾಗಿತ್ತು. ಆದರೆ ಈ ಯಾದಿಯಲ್ಲಿದ್ದ ಹೆಚ್ಚಿನ ವೈದ್ಯರು ಉನ್ನತ ಶಿಕ್ಷಣ ಮೊದಲಾದ ಕಾರಣಗಳ ಹಿನ್ನೆಲೆಯಲ್ಲಿ ಸೇವೆಗೆ ಸೇರ್ಪಡೆಯಾದವರು ಕಡಿಮೆ. ಈ ಹಿನ್ನೆಲೆಯಲ್ಲಿ ಇನ್ನೂ ರ್‍ಯಾಂಕ್‌ ಯಾದಿಯಲ್ಲಿರುವ ವೈದ್ಯರನ್ನು ಖಾಲಿ ಹುದ್ದೆಗಳಿಗೆ ನೇಮಿಸಬೇಕೆಂದು ನಿರಂತರವಾಗಿ ಆಗ್ರಹಿಸಿದ್ದರೂ, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕುಟುಂಬ ಆರೋಗ್ಯ ಕೇಂದ್ರಗಳ ಸ್ಪೆಶಲಿಸ್ಟ್‌ ಹುದ್ದೆಗಳಿಗೆ ಭಡ್ತಿಗೊಳಿಸಿದ್ದಲ್ಲಿ ಅಸಿಸ್ಟೆಂಟ್‌ ಸರ್ಜನ್‌ಗಳ ಹುದ್ದೆಗಳು ಇನ್ನಷ್ಟು ತೆರವುಗೊಳ್ಳಲಿವೆ.

ಕಣ್ಣೂರು ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ 31 ಡಾಕ್ಟರ್‌ಗಳ ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳಲ್ಲಿ 24 ಅಸಿಸ್ಟೆಂಟ್‌ ಸರ್ಜನ್‌ಗಳು, 7 ಕ್ಯಾಶ್ವಾಲ್ಟಿ ಮೆಡಿಕಲ್‌ ಆಫೀಸರ್‌ ಹುದ್ದೆಗಳು ತೆರವಾಗಿವೆ.

ಸಾಂಕ್ರಾಮಿಕ ರೋಗ ಭೀತಿ
ಪ್ರತೀ ವರ್ಷವೂ ಕಾಸರಗೋಡು ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಸಾಮಾನ್ಯವಾಗಿ ಹರಡುತ್ತಿದೆ. ಹಿಂದಿನ ವರ್ಷಗಳಲ್ಲಿ ಡೆಂಗ್ಯೂ, ಮಲೇರಿಯ, ಇಲಿ ಜ್ವರ ಮೊದಲಾದ ಮಾರಕ ರೋಗಗಳು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ್ದವು¤. ಸಾಂಕ್ರಾಮಿಕ ರೋಗದಿಂದ ಹಲವರು ಪ್ರಾಣ ಕಳೆದು ಕೊಂಡಿದ್ದರು. ಇಂತಹ ಪರಿಸ್ಥಿತಿ ಕಾಸರಗೋಡು ಜಿಲ್ಲೆಯಲ್ಲಿದ್ದರೂ ಇಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರಿಲ್ಲದಿರುವುದು ಆರೋಗ್ಯ ದೃಷ್ಟಿಯಿಂದ ಸಮಸ್ಯೆಯಾಗಿ ಕಾಡಲಿದೆ. ಸಾಂಕ್ರಾಮಿಕ ರೋಗ ಭೀತಿಹಿನ್ನೆಲೆಯಲ್ಲಿ ಖಾಲಿ ಬಿದ್ದಿರುವ ವೈದ್ಯರ ಹುದ್ದೆಗಳನ್ನು ಶೀಘ್ರವೇ ಭರ್ತಿಗೊಳಿಸಲು ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಿದೆ.

ಖಾಲಿ ಹುದ್ದೆ ಭರ್ತಿ ಮಾಡಿ
ಮೊದಲೇ ಕಾಸರಗೋಡು ಜಿಲ್ಲೆಯಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆಗಳಿಲ್ಲ. ಇದ್ದ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರಾಗಲೀ, ದಾದಿಯರಾಗಲೀ ಇಲ್ಲ. ಸಾಕಷ್ಟು ಚಿಕಿತ್ಸೆ ಸೌಕರ್ಯವೂ ಇಲ್ಲ. ಔಷಧದ ಕೊರತೆಯೂ ಕಾಡುತ್ತಿದೆ. ಸುಸಜ್ಜಿತ ಲ್ಯಾಬ್‌ಗಳಿಲ್ಲ. ಈ ಕಾರಣದಿಂದ ಕಾಸರಗೋಡು ಜಿಲ್ಲೆಯ ರೋಗಿಗಳಿಗೆ ಮಂಗಳೂರು, ಉಡುಪಿ ಮೊದಲಾದೆಡೆಗಳಲ್ಲಿರುವ ಆಸ್ಪತ್ರೆಗಳನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ. ಬಡ ರೋಗಿಗಳಿಗೆ ಕರ್ನಾಟಕದಲ್ಲಿ ಚಿಕಿತ್ಸೆ ಪಡೆಯಬೇಕಾದಲ್ಲಿ ಆರ್ಥಿಕ ಹೊರೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಬಡ ರೋಗಿಗಳಿಗೆ ತ್ರಿಶಂಕು ಸ್ಥಿತಿ ಎದುರಾಗುತ್ತದೆ. ಇಂತಹ ಪರಿಸ್ಥಿತಿಯಿಂದ ರೋಗಿಗಳನ್ನು ಪಾರು ಮಾಡಲು ಕಾಸರಗೋಡು ಸರಕಾರಿ ಆಸ್ಪತ್ರೆಗಳಲ್ಲಿ ತೆರವಾಗಿರುವ ವೈದ್ಯರನ್ನು ಶೀಘ್ರವೇ ಭರ್ತಿಗೊಳಿಸಿ ಬಡ ರೋಗಿಗಳನ್ನು ರಕ್ಷಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next