Advertisement

ಕಾಸರಗೋಡು ರೈಲು ನಿಲ್ದಾಣ ಪಾರ್ಕಿಂಗ್‌ ಸಮಸ್ಯೆ: ಪರಿಹಾರವೆಂದು?

06:00 AM Jul 11, 2018 | Team Udayavani |

ಕಾಸರಗೋಡು: ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲೊಂದಾದ ಕಾಸರಗೋಡು ರೈಲು ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್‌ ಸಮಸ್ಯೆಗೆ ಇನ್ನೂ ಸ್ಪಷ್ಟ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

Advertisement

ಕಾಸರಗೋಡು ರೈಲು ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್‌ ಬಗ್ಗೆ ರೈಲು ಪ್ರಯಾಣಿಕರು ವಿವಿಧ ಸಮಸ್ಯೆಗಳನ್ನು ಹೇಳುತ್ತಲೇ ಬಂದಿದ್ದಾರೆ. ಅದರಲ್ಲೂ ಮುಖ್ಯವಾಗಿ ವಾಹನ ಸುರಕ್ಷೆಯ ಬಗ್ಗೆ ಅತೀ ಹೆಚ್ಚಿನ ದೂರುಗಳು ಬರುತ್ತಲೇ ಇವೆ. ವಾಹನ ಪಾರ್ಕಿಂಗ್‌ ಮಾಡುವ ಸ್ಥಳಯದಲ್ಲಿ ಛಾವಣಿಯಿಲ್ಲದೆ ವಾಹನಗಳು ಮಳೆ ಬಿಸಿಲೆನ್ನದೆ ತೆರೆದ ಬಯಲಿನಲ್ಲಿ ನಿಲ್ಲಿಸಬೇಕಾಗುತ್ತದೆ. ಇದರಿಂದಾಗಿ ವಾಹನಗಳಿಗೆ ದುಷ್ಪರಿಣಾಮ ಬೀರುತ್ತಿದೆ. 

ದುಡ್ಡು ತೆತ್ತು ವಾಹನ ಪಾರ್ಕ್‌ ಮಾಡಲಾಗುತ್ತಿದ್ದರೂ ಇಂತಹ ವಾಹನಗಳಿಗೆ ಯಾವುದೇ ಸುರಕ್ಷೆ ಇಲ್ಲ ಎಂಬುದು ಪ್ರಯಾಣಿಕರ ಕೊರಗು. ರೈಲ್ವೇ ಪಾಲಾಟ್‌ ಡಿವಿಜನ್‌ನ ಹಲವು ರೈಲು ನಿಲ್ದಾಣಗಳಲ್ಲಿ ಪಾರ್ಕ್‌ ಮಾಡಿದ ವಾಹನಗಳ ಮೇಲೆ ಮರದ ರೆಂಬೆ ಮುರಿದು ಬಿದ್ದು ಹಾನಿಗೊಳ್ಳುತ್ತಿರುವುದು ಸಾಮಾನ್ಯವಾಗಿದ್ದು, ಕಾಸರಗೋಡು ನಿಲ್ದಾಣದಲ್ಲೂ ಇದರಿಂದ ಹೊರತಾಗಿಲ್ಲ. ಕಾಸರಗೋಡು ನಿಲ್ದಾಣದಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲದೆ ವಾಹನಗಳನ್ನು ರೈಲು ನಿಲ್ದಾಣ ಸಮೀಪದ ರಸ್ತೆ ಬದಿಯಲ್ಲಿ ನಿಲ್ಲಿಸಬೇಕಾಗುತ್ತದೆ. ರಸ್ತೆ ಬದಿಯಲ್ಲಿ ಮರಗಳು ಮುರಿದು ಬಿದ್ದು ಹಲವು ಪಾರ್ಕ್‌ ಮಾಡಿದ ವಾಹನಗಳು ಹಾನಿಗೀಡಾದ ಪ್ರಸಂಗಗಳೂ ನಡೆದಿವೆ.

ಪ್ರಯಾಣಿಕರು ಪಾರ್ಕ್‌ ಮಾಡುವ ವಾಹನಗಳಿಗೆ ಸುರಕ್ಷೆ ನೀಡಬೇಕಾದುದು ಅತ್ಯಗತ್ಯವಾಗಿದೆ. ಈ ಕಾರಣಕ್ಕೆ ಪಾರ್ಕಿಂಗ್‌ ವಲಯದಲ್ಲಿ ಮೇಲ್ಛಾವಣಿಯನ್ನು ನಿರ್ಮಿಸಬೇಕು, ವಾಹನಗಳ ಸುರಕ್ಷೆಗಾಗಿ ಕೆಮರಾಗಳನ್ನು ಜೋಡಿಸಬೇಕು. ಹ್ಯಾಂಡ್‌ ಹೆಲ್ಡ್‌ ಟರ್ಮಿನಲ್‌ ಮೆಶಿನ್‌ ಬಳಸಿ ವಾಹನ ಪಾರ್ಕಿಂಗ್‌ ಮಾಡುವವರಿಗೆ ರಶೀದಿ ನೀಡುವ ಸೌಲಭ್ಯಗಳನ್ನು ಏರ್ಪಾಡು ಮಾಡಬೇಕೆಂದು ಪ್ರಯಾಣಿಕರು ಹಲವು ವರ್ಷಗಳಿಂದ ಬೇಡಿಕೆಯನ್ನು ಮುಂದಿಟ್ಟರೂ ಈ ವರೆಗೂ ಪ್ರಯಾಣಿಕರ ಯಾವುದೇ ಬೇಡಿಕೆ ಈಡೇರಿಲ್ಲ. ಆದರೆ ಈ ಬೇಡಿಕೆಗಳನ್ನು ಗುತ್ತಿಗೆದಾರರು ಈಡೇರಿಸಬೇಕೆಂಬುದು ರೈಲ್ವೇ ಅಧಿಕೃತರ ಅಂಬೋಣವಾಗಿದೆ.

ಈಗಾಗಲೇ ಕಾಸರಗೋಡು, ಕುಟ್ಟಿಪ್ಪುರಂ, ಒಟ್ಟಪ್ಪಾಲಂ ರೈಲು ನಿಲ್ದಾಣಗಳಲ್ಲಿ    ಪಾರ್ಕಿಂಗ್‌ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ಸೆಂಟ್ರಲ್‌, ಮಂಗಳೂರು ಜಂಕ್ಷನ್‌, ಕಾಂಞಂಗಾಡ್‌, ಪಯ್ಯನ್ನೂರು, ಕಣ್ಣೂರು, ಬಡಗರ, ಕೊಯಿಲಾಂಡಿ, ಫಾರೂಕ್‌ ಮೊದಲಾದ ರೈಲು ನಿಲ್ದಾಣಗಳಲ್ಲಿ ಪಾರ್ಕಿಂಗ್‌ ನಿರ್ವಹಿಸಲು ಶೀಘ್ರವೇ ಅರ್ಜಿ ಆಹ್ವಾನಿಸಲಿದೆ. ಕಾಸರಗೋಡು ರೈಲು ನಿಲ್ದಾಣದಲ್ಲಿ 2242.860 ಚದರಡಿ, ಒಟ್ಟಪ್ಪಾಲಂನಲ್ಲಿ 1462.46 ಚದರಡಿ ಮತ್ತು ಕುಟ್ಟಿಪ್ಪುರದಲ್ಲಿ 1135.15 ಚದರಡಿ ವಿಸ್ತೀರ್ಣದಲ್ಲಿ ಪಾರ್ಕಿಂಗ್‌ ಪ್ರದೇಶವಿದೆ. ಕಾಸರಗೋಡು ನಿಲ್ದಾಣದಲ್ಲಿ 71 ಲಕ್ಷ ರೂ., ಕುಟ್ಟಿಪ್ಪುರದಲ್ಲಿ 30 ಲಕ್ಷ ರೂ., ಒಟ್ಟಪ್ಪಾಲಂನಲ್ಲಿ 12 ಲಕ್ಷ ರೂ. ಮೂರು ವರ್ಷಕ್ಕೆ ಕನಿಷ್ಠ ಗುತ್ತಿಗೆ ಮೊತ್ತ. ವಿಸ್ತೀರ್ಣಕ್ಕೆ ಅನುಗುಣವಾಗಿ ಗುತ್ತಿಗೆ ಮೊತ್ತವನ್ನು ನಿರ್ಧರಿಸಲಾಗಿದೆ. ಹರಾಜಿನಲ್ಲಿ ಭಾಗವಹಿಸುವವರು ಕಾಸರಗೋಡು ರೈಲು ನಿಲ್ದಾಣದ ಪಾರ್ಕಿಂಗ್‌ ನಿರ್ವಹಣೆಯ ಜವಾಬ್ದಾರಿ ವಹಿಸಲು ಆಗ್ರಹಿಸುವವರು 1,42,000 ರೂ., ಕುಟ್ಟಿಪ್ಪುರದಲ್ಲಿ 60,000 ರೂ., ಒಟ್ಟಪ್ಪಾಲಂನಲ್ಲಿ 24,000 ರೂ. ಪಾವತಿಸಬೇಕು.

Advertisement

ಪ್ರಮುಖ ರೈಲು ನಿಲ್ದಾಣಗಳಲ್ಲಿ ವಾಹನ ಪಾರ್ಕಿಂಗ್‌ ನಿರ್ವಹಿಸಲು ಟೆಂಡರ್‌ಗಳನ್ನು ಈಗಾಗಲೇ ಕರೆಯಲಾಗಿದೆ. ಆದರೆ ವಾಹನ ಪಾರ್ಕಿಂಗ್‌ ಬಗೆಗಿನ ಪ್ರಯಾಣಿಕರ ಬೇಡಿಕೆಯನ್ನು ಈಡೇರಿಸುವ ಬಗ್ಗೆ ರೈಲ್ವೇಯಿಂದ ಯಾವುದೇ ಸೂಚನೆ ಈ ವರೆಗೂ ಇಲ್ಲ.

ವಾಹನಗಳ ಕಳವು ಸಾಮಾನ್ಯ
ಕಾಸರಗೋಡು ರೈಲು ನಿಲ್ದಾಣ ಪರಿಸರದಲ್ಲಿ ಪಾರ್ಕ್‌ ಮಾಡಿದ  ಹಲವು ದ್ವಿಚಕ್ರ ವಾಹನಗಳು ಕಳವಾಗಿವೆ. ರೈಲು ನಿಲ್ದಾಣದಲ್ಲಿ ವ್ಯವಸ್ಥಿತವಾದ ಸುರಕ್ಷೆ ಸಂವಿಧಾನವಿಲ್ಲ ದಿರುವುದರಿಂದಾಗಿ ಪಾರ್ಕ್‌ ಮಾಡಿದ ವಾಹನಗಳು ಕಳವಾಗುತ್ತಿರುವುದು ಸಾಮಾನ್ಯ ವಾಗಿದೆ. ಇಲ್ಲಿ ಪೊಲೀಸ್‌ ಏಯ್ಡ ಪೋಸ್ಟ್‌ ಇದ್ದರೂ ಹಲವು ಸಂದರ್ಭಗಳಲ್ಲಿ ಪೊಲೀಸರೇ ಇರುವುದಿಲ್ಲ. ಈ ಕಾರಣದಿಂದಾಗಿ ರೈಲು ನಿಲ್ದಾಣದಲ್ಲಿ ಪಾರ್ಕ್‌ ಮಾಡಿದ ವಾಹನಗಳು ಕಳವಾಗುತ್ತಿವೆ. ಈಗಾಗಲೇ ಹಲವು ವಾಹನಗಳು ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೂ ವಾಹನ ಸುರಕ್ಷೆಗೆ ಸಂಬಂಧಪಟ್ಟವರು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಪ್ರಯಾಣಿಕರು ಹೇಳುತ್ತಲೇ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next