Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

06:00 AM Jun 30, 2018 | Team Udayavani |

ಫಾಸ್ಟ್‌ಫುಡ್‌ ಕೆಫೆಗೆ ನುಗ್ಗಿ ಹಲ್ಲೆ : ಇಬ್ಬರು ಆಸ್ಪತ್ರೆಗೆ
ಕುಂಬಳೆ:
ಉಪ್ಪಳ ಗೇಟ್‌ ಬಳಿಯ ಫಾಸ್ಟ್‌ಫುಡ್‌ ಕೆಫೆಗೆ ನುಗ್ಗಿದ ತಂಡವೊಂದು ಎರಿಯಾಲ್‌ ಚೇರಂಗೈಯ ಗಸಾಲಿ (22), ಮೊಹಮ್ಮದ್‌ ಇಲ್ಯಾಸ್‌(21) ಅವರಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ.ಗಾಯಾಳುಗಳನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

ಜೂ.28 ರಂದು ರಾತ್ರಿ 12 ಗಂಟೆಗೆ ಕಾರು ಹಾಗು ಬೈಕ್‌ನಲ್ಲಿ ಬಂದ ತಂಡ ಕಬ್ಬಿಣದ ಸರಳುಗಳಿಂದ ಹೊಡೆದು ಗಾಯಗೊಳಿಸಿದ್ದಾಗಿ ಆರೋಪಿಸಲಾಗಿದೆ.

ಟ್ಯಾಂಕರ್‌ ಢಿಕ್ಕಿ: ಸ್ಕೂಟರ್‌ ಸವಾರಸಾವು
ಉಪ್ಪಳ:
ಉಪ್ಪಳ ಪೇಟೆಯಲ್ಲಿ ಜೂ. 28ರಂದು ರಾತ್ರಿ 9 ಗಂಟೆಗೆ ಟ್ಯಾಂಕರ್‌ ಲಾರಿ ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ಕಾಂಕ್ರೀಟ್‌ ಕಾರ್ಮಿಕರಾಗಿರುವ ನಂದ ನಾಯ್ಕ (35) ಸಾವಿಗೀಡಾದರು. ಸ್ಕೂಟರ್‌ನಲ್ಲಿದ್ದ ನಾಗರಾಜ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಇವರಿಬ್ಬರೂ ಕರ್ನಾಟಕ ನಿವಾಸಿಗಳಾಗಿದ್ದಾರೆ.

ಬೈಕ್‌ ಢಿಕ್ಕಿ : ಮಹಿಳೆಗೆ ಗಾಯ
ಉಪ್ಪಳ:
ಕೈಕಂಬ ಪರಿಸರದಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್‌ ಢಿಕ್ಕಿ ಹೊಡೆದು ಸೋಂಕಾಲು ಕೊಡಂಗೆ ನಿವಾಸಿ ಸುಶೀಲಾ (55) ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಬೈಕ್‌ ಸವಾರ ಮೊಹಮ್ಮದ್‌ ನಸೀರ್‌ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಅಬಕಾರಿ ಪ್ರಕರಣ : ಆರೋಪಿಗೆ ಸಜೆ
ಕಾಸರಗೋಡು
: 2017ರ ಮೇ 12ರಂದು ಕುತ್ತಿಕ್ಕೋಲ್‌ ಆಮ ಕಾಲನಿಯಿಂದ ಬಂದಡ್ಕ ರೇಂಜ್‌ ಅಬಕಾರಿ ತಂಡ 20 ಲೀಟರ್‌ ಹುಳಿರಸ(ವಾಶ್‌) ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕುತ್ತಿಕ್ಕೋಲ್‌ ಆಮ ಕಾಲನಿಯ ರಘುನಾಥ್‌ (28)ಗೆ ಕಾಸರಗೋಡು ಅಸಿಸ್ಟೆಂಟ್‌ ಸೆಶನ್ಸ್‌ ನ್ಯಾಯಾಲಯ ಒಂದು ವರ್ಷ ಸಜೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಎರಡು ವಾರಗಳ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ಹೇಳಿದೆ.

Advertisement

ಪಾನ್‌ ಮಸಾಲೆ ಸಹಿತ ಬಂಧನ
ಬದಿಯಡ್ಕ
: 37 ಪ್ಯಾಕೆಟ್‌ ಪಾನ್‌ ಮಸಾಲೆ ಸಹಿತ ಪಳ್ಳತ್ತಡ್ಕದ ಮೂಸಾ ಕುಂಞಿ (50)ಯನ್ನು ಪೊಲೀಸರು ಬಂಧಿಸಿದ್ದಾರೆ. ಜೂ.28 ರಂದು ಸಂಜೆ ಈತನ ಅಂಗಡಿ ಬಳಿಯಿಂದ ಪಾನ್‌ ಮಸಾಲೆ ವಶಪಡಿಸಲಾಯಿತು.

ವಿದ್ಯಾರ್ಥಿಗಳಿಗೆ ಹಲ್ಲೆ : ಬಂಧನ
ಮಂಜೇಶ್ವರ:
ಕುಂಜತ್ತೂರುಪದವಿನಲ್ಲಿ ವಿದ್ಯಾರ್ಥಿಗಳಾದ ಕುಂಜತ್ತೂರು ಮಜಲ್‌ ನಿವಾಸಿ ಅಸೀಮ್‌ (18) ಮತ್ತು ಅಬ್ದುಲ್‌ ವಾಹಿದ್‌(18) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕುಂಜತ್ತೂರು ಪರಿಸರ ನಿವಾಸಿ ಸೋನನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಅಶ್ವಂದ್‌, ಮೈಕಲ್‌, ಪ್ರಫುಲ್‌ ಮತ್ತು ಸೋನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ಸುಟ್ಟ ಗಾಯಗೊಂಡ ಮಹಿಳೆ ಸಾವು
ಕಾಸರಗೋಡು:
ಬೆಂಕಿ ತಗಲಿ ಸುಟ್ಟು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೊಸದುರ್ಗ ಅಲಾಮಿಪಳ್ಳಿಯ ಶ್ರೀಕಲಾ (40) ಸಾವಿಗೀಡಾದರು. ಜೂನ್‌ 15 ರಂದು ಅವರು ಮನೆಯಲ್ಲಿ ಬೆಂಕಿ ತಗಲಿ ಗಂಭೀರ ಗಾಯಗೊಂಡಿದ್ದರು.

ಮದ್ಯ ಇಳಿಸುತ್ತಿದ್ದಾಗ ತಡೆದ ಆರು ಮಂದಿಗೆ ದಂಡ
ಕಾಸರಗೋಡು:
ಅಣಂಗೂರಿನಲ್ಲಿ ಕೇರಳ ಬಿವರೇಜ್‌ ಕಾರ್ಪೊರೇಶನ್‌ನ ಹೊಸ ವಿದೇಶಿ  ಮದ್ಯದಂಗಡಿ ಆರಂಭಿಸಿದ್ದ ವೇಳೆ ಅಲ್ಲಿಗೆ 2016ರ ಅಕ್ಟೋಬರ್‌ 26ರಂದು ಲಾರಿಯಲ್ಲಿ ಬಂದ ಮದ್ಯವನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ತಡೆದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ ನ್ಯಾಯಾಲಯ ತಲಾ 2500 ರೂ. ನಂತೆ ದಂಡ ವಿಧಿಸಿ ತೀರ್ಪು ನೀಡಿದೆ.

ಅಣಂಗೂರು ನಿವಾಸಿಗಳಾದ ಎಂ.ಸತೀಶ, ಜಯಂತ್‌ ಕುಮಾರ್‌, ಜಾನಕಿ, ನುಳ್ಳಿಪ್ಪಾಡಿಯ ಸೂರಜ್‌ ಶೆಟ್ಟಿ, ಅಣಂಗೂರಿನ ಶರತ್‌ ಕುಮಾರ್‌ ಮತ್ತು ಸುನಿಲ್‌ ಶೆಟ್ಟಿ ಅವರಿಗೆ ದಂಡ ವಿಧಿಸಲಾಗಿದೆ.

ಬಾಲಕನಿಗೆ ಹಲ್ಲೆ : ಕೇಸು ದಾಖಲು
ಬದಿಯಡ್ಕ:
ಮದ್ರಸಾದಿಂದ ಮನೆಗೆ ಮರಳುತ್ತಿದ್ದ ಬಾಲಕನಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನೆಕ್ರಾಜೆ ಚೂರಿಪಳ್ಳ ಚೆನ್ನಡ್ಕ ನಿವಾಸಿ ಸಕೀನಾ (38) ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮಿನಿ ಲಾರಿ ತಡೆದು ದರೋಡೆ : ಆರೋಪಿಗಳಿಗೆ ಶೋಧ
ಮುಳ್ಳೇರಿಯ
: ಮಿನಿ ಲಾರಿಯನ್ನು ತಡೆದು ನಿಲ್ಲಿಸಿ ಒಂದೂವರೆ ಲಕ್ಷ ರೂ. ಹಾಗೂ ಮೊಬೈಲ್‌ ಫೋನ್‌ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕಾಸರಗೋಡು ತಳಂಗರೆ ನಿವಾಸಿ ಮುಸ್ತಾಕ್‌ ಸಹಿತ ಮೂವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.ಈ ಪೈಕಿ ಮುಸ್ತಾಕ್‌ ಎರ್ನಾಕುಳಂನಲ್ಲಿ ಇರುವುದಾಗಿ ಲಭಿಸಿದ ಮಾಹಿತಿಯಂತೆ ಆದೂರು ಪೊಲೀಸರು ಅಲ್ಲಿಗೆ ತೆರಳಿದ್ದಾರೆ.

ಚೆರ್ವತ್ತೂರು ನಿವಾಸಿ  ದುಬಾೖಯಿಂದ ನಾಪತ್ತೆ
ಕಾಸರಗೋಡು:
ಚೆರ್ವತ್ತೂರು ಕಾಡಾಂಗೋಡಿನ ಎಂ.ಶಿಹಾಬ್‌(29) ಕೊಲ್ಲಿಯಿಂದ ನಾಪತ್ತೆಯಾಗಿರುವುದಾಗಿ ಆತನ ತಂದೆ ಚಂದೇರಾ ಪೊಲೀಸರಿಗೆ ದೂರು ನೀಡಿದ್ದಾರೆ. ಶಿಹಾಬ್‌ ಆರು ವರ್ಷಗಳಿಂದ ದುಬಾೖಯಲ್ಲಿ ದುಡಿಯುತ್ತಿದ್ದು, ಆರು ತಿಂಗಳ ಹಿಂದೆ ಆತನ ವಿವಾಹವಾಗಿತ್ತು. ಆದರೆ ಕಳೆದ ಮೂರು ತಿಂಗಳಿಂದ ಆತನ ಬಗ್ಗೆ ಯಾವುದೇ ಮಾಹಿತಿ ತಮಗೆ ಲಭಿಸಿಲ್ಲವೆಂದೂ ದೂರಿನಲ್ಲಿ ಆತನ ತಂದೆ ತಿಳಿಸಿದ್ದಾರೆ. ಚಂದೇರಾ ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next