ಕಾಸರಗೋಡು: ನಾಡಿನೆಲ್ಲೆಡೆ ಗುರುವಾರ ಭಕ್ತಿ ನಿಷ್ಠೆ ಸಡಗರದಿಂದ ನಾಗರ ಪಂಚಮಿ ಆಚರಿಸಲಾಯಿತು. ನಾಡಿನ ಪ್ರಮುಖ ದೇವಾಲಯಗಳಲ್ಲಿ, ಮಂದಿರಗಳಲ್ಲಿ, ನಾಗನ ಬನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ನಾಗನಿಗೆ ಎಳನೀರು ಮತ್ತು ಕ್ಷೀರಾಭಿಷೇಕ ನಡೆಸಿದರು. ವರ್ಷದ ಮೊದಲ ಹಬ್ಬದ ಸಡಗರ ಎಲ್ಲೆಡೆ ಕಂಡು ಬಂತು. ಪ್ರಕೃತಿಯನ್ನು ಪೂಜಿಸುವ ನಾಗಾರಾಧನೆ ಹೆಣ್ಮಕ್ಕಳಿಗೆ ವಿಶೇಷವಾಗಿದೆ.
ಕಾಸರಗೋಡಿನ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗಿನಿಂದಲೇ ನಾಗನಿಗೆ ಕ್ಷೀರಾಭಿಷೇಕ ಮತ್ತು ಎಳನೀರಿನ ಅಭಿಷೇಕ ಸಮರ್ಪಿಸಲು ಭಕ್ತಾದಿಗಳು ನೆರೆದಿದ್ದರು. ಇದೇ ರೀತಿ ಜಿಲ್ಲೆಯ ಬಹುತೇಕ ದೇವಸ್ಥಾನ, ಮಂದಿರ, ನಾಗಬನಗಳಲ್ಲಿ ದೃಶ್ಯಗಳು ಕಂಡು ಬಂತು. ನಾಗನಿಗೆ ಅಭಿಷೇಕ ಮಾಡುವ ಮೂಲಕ ಭಕ್ತಾದಿಗಳು ಕೃತಾರ್ಥತೆಯ ಭಾವವನ್ನು ಹೊಂದಿದರು. ಕಾಸರಗೋಡು ಬ್ಯಾಂಕ್ ರಸ್ತೆಯಲ್ಲಿರುವ ನಾಗರಾಜ ಕಟ್ಟೆಯಲ್ಲಿ ನಾಗನಿಗೆ ಹಾಲನ್ನೆರೆಯಲು ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಬೆಳಗ್ಗಿನಿಂದಲೇ ಸರದಿಯಲ್ಲಿ ನಿಂತಿದ್ದರು.
ಕಾಸರಗೋಡು ನಗರದ ಎಸ್.ವಿ.ಟಿ. ರಸ್ತೆಯಲ್ಲಿರುವ ನಾಗನ ಕಟ್ಟೆಯಲ್ಲಿ ಭಕ್ತಾದಿಗಳು ಅಭಿಷೇಕ ಮಾಡಿದರು. ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ನೆಲ್ಲಿಕುಂಜೆ ಕೋಮರಾಡಿ ದೈವಸ್ಥಾನ, ಕೊರಕ್ಕೋಡು ನಾಗರಕಟ್ಟೆಯ ಶ್ರೀ ಶಾರದಾ ಭಜನಾಶ್ರಮದ ನಾಗನಕಟ್ಟೆಯಲ್ಲಿ ನಾಗನಿಗೆ ಹಾಲನ್ನೆರೆಯಲು ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದು, ವಿಶೇಷ ಪೂಜೆ ಪುನಸ್ಕಾರ ನಡೆಸಿದರು. ಹಲವೆಡೆ ನಾಗತಂಬಿಲ ನಡೆಯಿತು.
ವರ್ಕಾಡಿಯ ಕಾವೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯ ಅಂಗವಾಗಿ ಬೆಳಗ್ಗೆ ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕೂಡ್ಲು ಸಮೀಪದ ಬಾದಾರದಲ್ಲಿರುವ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿ¿åಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಯಿತು. ನಾಗ ದೇವರಿಗೆ ಹಾಲು, ಎಳನೀರಿನ ಅಭಿಷೇಕ ಹಾಗು ತಂಬಿಲ, ಮಹಾಪೂಜೆ ನಡೆಯಿತು.
ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಬಳಿಕ ಅನ್ನ ದಾನವೂ ನಡೆಯಿತು. ಕಳತ್ತೂರು ಶ್ರೀ ಚಂಡೀಕಾದೇವಿ ಕ್ಷೇತ್ರದಲ್ಲಿ ನಾಗರ ಪಂಚಮಿಯಂಗವಾಗಿ ಬೆಳಗ್ಗೆ ನಾಗನಿಗೆ ಹಾಲಿನ ಅಭಿಷೇಕ, ನಾಗನಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ, ಚಂಡೀಕಾದೇವಿ ಕ್ಷೇತ್ರದಲ್ಲಿ ಪೂಜೆ, ಪ್ರಸಾದ ವಿತರಣೆ, ಅನ್ನದಾನ ಜರಗಿತು. ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಹಾಗು ಬಲಿವಾಡುಕೂಟ ನಡೆಯಿತು. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಕಾನದಲ್ಲಿ ನಾಗರಪಂಚಮಿ ಆಚರಿಸಲಾಯಿತು.