Advertisement

ಕಾಸರಗೋಡು ಲೋಕಸಭಾ ಕ್ಷೇತ್ರ: ಶಾಂತಿಯುತ ಮರುಮತದಾನ

02:10 AM May 20, 2019 | Team Udayavani |

ಕಾಸರಗೋಡು: ಬೋಗಸ್‌ ಮತದಾನದ ಹಿನ್ನೆಲೆಯಲ್ಲಿ ಮತದಾನ ರದ್ದುಪಡಿಸಿದ ಕಾಸರಗೋಡು ಲೋಕಸಭಾ ಕ್ಷೇತ್ರದ ನಾಲ್ಕು ಮತ್ತು ಕಣ್ಣೂರು ಲೋಕಸಭಾ ಕ್ಷೇತ್ರದ ಮೂರು ಬೂತ್‌ಗಳಲ್ಲಿ ರವಿವಾರ ಶಾಂತಿಯುತ ಮರುಮತದಾನ ನಡೆಯಿತು.

Advertisement

ಮುಂಜಾನೆ 5 ಗಂಟೆಗೆ ಮತಗಟ್ಟೆಯಲ್ಲಿ ಮತದಾರರು ಸರದಿಯಲ್ಲಿ ನಿಂತಿದ್ದರು. ಮರುಮತದಾನದ ಹಿನ್ನೆಲೆಯಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲಾಗಿತ್ತು. ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌, ವೀಡಿಯೋ ಕವರೇಜ್‌ ಏರ್ಪಡಿಸಲಾಗಿತ್ತು.

ತಹಶೀಲ್ದಾರ್‌ ರ್‍ಯಾಂಕ್‌ನಲ್ಲಿರುವ ಅಧಿಕಾರಿಗಳು ಪ್ರಿಸೈಡಿಂಗ್‌ ಆಫೀಸರ್‌ಗಳಾಗಿ ಕರ್ತವ್ಯ ನಿರ್ವಹಿಸಿ ದ್ದರು. ಪ್ರತಿ ಬೂತ್‌ಗೆ ಹೆಚ್ಚುವರಿಯಾಗಿ ತಲಾ ಒಬ್ಬರಂತೆ ನೇಮಿಸಲಾಗಿತ್ತು.
ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಮತದಾನ ಚಲಾಯಿಸಲು ಸರದಿಯಲ್ಲಿ ನಿಂತಿದ್ದ ಮತದಾರರಲ್ಲಿ ಮತ ಯಾಚಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಪಿಲಾತ್ತರ ಯು.ಪಿ. ಶಾಲೆಯಲ್ಲಿ ಕೆಲಹೊತ್ತು ವಿವಾದಕ್ಕೆ ಕಾರಣವಾಗಿತ್ತು.

ಕಾಸರಗೋಡು ಎಸ್‌. ಪಿ. ಜೇಮ್ಸ್‌ ಜೋಸೆಫ್‌ ಸಹಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿವಾದವನ್ನು ಪರಿಹರಿಸಿದರು. ಕಣ್ಣೂರು ಲೋಕಸಭಾ ಕ್ಷೇತ್ರದ ಕುನ್ನುರಿಕ ಬೂತ್‌ನಲ್ಲಿ ದೃಷ್ಟಿಯಿಲ್ಲದ ಮಹಿಳೆಯ ಜತೆಯಲ್ಲಿ ಮತ ಚಲಾಯಿಸಲು ಬಂದ ವ್ಯಕ್ತಿಯನ್ನು ವಾಪಸು ಕಳುಹಿಸಿದ್ದರಿಂದ ಕೆಲ ಹೊತ್ತು ಮತದಾನ ಸ್ಥಗಿತಗೊಂಡಿತ್ತು. ಮಹಿಳೆಯ ಜತೆಗೆ ಬಂದ ವ್ಯಕ್ತಿಯಲ್ಲಿ ಗುರುತು ಚೀಟಿ ಇಲ್ಲದಿದ್ದುದರಿಂದಾಗಿ ವಾಪಸು ಕಳುಹಿಸಲಾಗಿತ್ತು. ಮತದಾರರಿಗೆ ಮಾತ್ರವೇ ಗುರುತು ಚೀಟಿ ಇದ್ದರೆ ಸಾಕು ಎಂಬುದು ಅರಿವಾದಾಗ ಮತದಾನ ಮಾಡಲು ಅವಕಾಶ ನೀಡಲಾಯಿತು.

ಮತಯಂತ್ರ ಕಿರಿಕ್‌; ಮತದಾನ ತಡ
ಇದೇ ಮತಗಟ್ಟೆಯಲ್ಲಿ ಮತಯಂತ್ರ ಕೆಟ್ಟು ಹೋದುದರಿಂದ ಕೆಲವು ಹೊತ್ತು ಮತದಾನ ಸ್ಥಗಿತಗೊಂಡಿತ್ತು. ದುರಸ್ತಿಯ ಬಳಿಕ ಮತದಾನ ಮುಂದುವರಿಯಿತು.

Advertisement

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಪಿಲಾತ್ತರ ಯು.ಪಿ. ಸ್ಕೂಲ್‌, ಪುದಿಯಂಗಾಡಿ ಜಮಾಅತ್‌ ಹೈಸ್ಕೂಲ್‌ನಲ್ಲಿ ಎರಡು ಬೂತ್‌ಗಳು, ಕಳಿಯಾಡ್‌ ಸರಕಾರಿ ಹೈಯರ್‌ ಸೆಕೆಂಡರಿ ಸ್ಕೂಲ್‌ಗ‌ಳಲ್ಲಿ ಮರುಮತದಾನ ನಡೆಯಿತು.

ಉಣ್ಣಿತ್ತಾನ್‌ ವಿರುದ್ಧ ದೂರು
ಮರುಮತದಾನ ನಡೆಯುತ್ತಿರುವ ಪಿಲಾತ್ತ‌ರ ಸ್ಕೂಲ್‌ಗೆ ತಲುಪಿದ ಯುಡಿಎಫ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ 19ನೇ ನಂಬ್ರ ಬೂತ್‌ನಲ್ಲಿ ಸರದಿಯಲ್ಲಿ ನಿಂತಿದ್ದ ಮತದಾರರಲ್ಲಿ ಮತ ಯಾಚಿಸಿದ್ದಾಗಿ ಎಲ್‌ಡಿಎಫ್‌ ಸಂಚಾಲಕ ಎ.ವಿ. ರವೀಂದ್ರನ್‌ ದೂರು ನೀಡಿದ್ದಾರೆ.

ಬೆಳಗ್ಗೆ 6.30ಕ್ಕೆ ಉಣ್ಣಿತ್ತಾನ್‌ ಮತ ಯಾಚಿಸಿದ್ದು ಚುನಾವಣ ನೀತಿ ಸಂಹಿತೆ ಉಲ್ಲಂಘನೆ ಯಾಗಿದೆಯೆಂದೂ ಈ ಬಗ್ಗೆ ಕ್ರಮ ತೆಗೆದುಕೊಳ್ಳ ಬೇಕೆಂದೂ ದೂರಿನಲ್ಲಿ ಮನವಿ ಮಾಡಿದ್ದಾರೆ. ಬೋಗಸ್‌ ಮತದಾನದ ಹಿನ್ನೆಲೆಯಲ್ಲಿ ಪಿಲಾತ್ತ‌ರ ಬೂತ್‌ನಲ್ಲಿ ಮರುಮತದಾನ ನಡೆಸಲಾಗಿತ್ತು.

ಮಹಿಳಾ ಸಿಬಂದಿ ನೇಮಕ
ಮುಖವನ್ನು ಮುಚ್ಚುವಂಥ ಉಡುಪು ಧರಿಸಿರುವ (ಬುರ್ಖಾಧಾರಿ) ಮಹಿಳೆಯರನ್ನು ಮುಸುಕು ಸರಿಸಿ ಮುಖ ನೋಡಿ ಗುರುತಿಸುವ ನಿಟ್ಟಿನಲ್ಲಿ ಮಹಿಳಾ ಸಿಬಂದಿಯನ್ನು ಈ ನಿಟ್ಟಿನಲ್ಲಿ ನೇಮಕಗೊಳಿಸಲಾಗಿತ್ತು.

ಪೊಲೀಸ್‌ ಬಿಗಿ ಭದ್ರತೆ
ಅಕ್ರಮ ಮತದಾನ ನಡೆದಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡು ಲೋಕಸಭೆ ಕ್ಷೇತ್ರದ ತೃಕ್ಕರಿಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 48ನೇ ನಂಬ್ರ ಮತಗಟ್ಟೆ ಯಾಗಿರುವ ಕುಳಿಯಾಟ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಗಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು. 133 ಪೊಲೀಸರನ್ನು ಸುರಕ್ಷೆ ಅಂಗವಾಗಿ ನೇಮಿಸಲಾಗಿದೆ. ವೆಬ್‌ ಕಾಸ್ಟಿಂಗ್‌ ಮೂಲಕ ಮತದಾನದ ಪ್ರಕ್ರಿಯೆಗಳನ್ನು ಜಿಲ್ಲಾ ಧಿಕಾರಿ ಡಾ| ಡಿ| ಸಜಿತ್‌ ಬಾಬು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next