Advertisement
ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಬರುವ ಸುಮಾರು 10 ಗಡಿಗಳನ್ನು ಬಂದ್ ಮಾಡಲಾಗಿತ್ತು. ದ.ಕ.ದಲ್ಲಿ ಪ್ರಕರಣ ವೃದ್ಧಿಸಿ ಕಾಸರಗೋಡಿನಲ್ಲಿ ಇಳಿಕೆಯಾಗುತ್ತಿದ್ದಂತೆ ಕೇರಳ ಸರಕಾರವೂ ಇದೇ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ನಿರ್ಧಾರ ಇದೀಗ ಮಂಗಳೂರಿನಲ್ಲಿ ಕೆಲಸ ಮಾಡುವ ಕೇರಳದ ಮತ್ತು ಕೇರಳದಲ್ಲಿ ಕೆಲಸ ಮಾಡುವ ದಕ್ಷಿಣ ಕನ್ನಡದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. ನಿರಂತರ ಗೈರುಹಾಜರಿಯಿಂದ ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಸಮಸ್ಯೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಸಂದೇಶ ಕಳುಹಿಸಿ ಉಭಯ ರಾಜ್ಯಗಳ ಸರಕಾರ, ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ.ಜೀವನೋಪಾಯಕ್ಕಾಗಿ ನಿತ್ಯ ಓಡಾಟ ನಡೆಸುವ ಅನಿವಾರ್ಯ ಇರುವವರಿಗೆ ಸ್ವಂತ ವಾಹನದಲ್ಲಿ ದಿನಕ್ಕೆರಡು ಬಾರಿ ಸಂಚರಿಸಲು ಪಾಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
Related Articles
ನೆರೆಯ ಕೇರಳ ಮಾತ್ರವಲ್ಲದೆ, ಇತರ ಹೊರ ರಾಜ್ಯಗಳಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮಂದಿಯೂ ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಲಸಕ್ಕೆ ಹಾಜರಾಗುವಂತೆ ಕಂಪೆನಿಗಳಿಂದ ಕರೆ ಬಂದಿದ್ದು, ಕೋವಿಡ್ ತಪಾಸಣೆ ನಡೆಸಬೇಕೊ, ಕೋವಿಡ್ ಇಲ್ಲವೆಂಬ ಪ್ರಮಾಣಪತ್ರ ಕೊಂಡೊಯ್ಯಬೇಕೊ, ಹಾಗೆ ಪ್ರಮಾಣಪತ್ರ ಕೊಂಡೊಯ್ದರೆ ಹೋಂ ಕ್ವಾರಂಟೈನ್‌ನಲ್ಲಿರಬೇಕೋ ಎಂಬ ಗೊಂದಲದಲ್ಲಿದ್ದಾರೆ. ಇಂತಹ ಉದ್ಯೋಗಿಗಳೂ ಲಾಕ್‌ಡೌನ್ ಮುಗಿಯುವವರೆಗೆ ಕಾದರೆ ಉದ್ಯೋಗ ಕಳೆದುಕೊಳ್ಳುವ ಭೀತಿಯೂ ಇದೆ.
Advertisement
ಲಾಕ್‌ಡೌನ್ ಸಂಪೂರ್ಣ ತೆರವಾಗುವವರೆಗೆ ರಾಜ್ಯದ ಹೊರಗಿನವರು ಬರುವುದಕ್ಕೆ ಅವಕಾಶ ಇರುವುದಿಲ್ಲ. ಉದ್ಯೋಗದಾತ ಸಂಸ್ಥೆಗಳೂ ಕೂಡ ಈ ಸಂಬಂಧ ಗಡಿಬಿಡಿ ಮಾಡಬಾರದು. ಕೋವಿಡ್ ಭೀತಿ ಇರುವಾಗ ನಿಯಮ, ಸಮಯಾವಕಾಶದ ಹೆಸರಿನಲ್ಲಿ ಅಮಾನತು, ಕೆಲಸದಿಂದ ತೆಗೆಯುವ ಸೂಚನೆ ನೀಡಬಾರದು.– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು