Advertisement

ಕಾಸರಗೋಡು: ಭಾರೀ ಗಾಳಿ, ಮಳೆ; ವ್ಯಾಪಕ ನಷ್ಟ

05:29 PM Aug 08, 2019 | Sriram |

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗಾಳಿ, ಮಳೆ ಮತ್ತೆ ಬಿರುಸುಗೊಂಡಿದ್ದು ಭಾರೀ ನಷ್ಟ ಸಂಭವಿಸಿದೆಮೂಸೋಡಿಯಲ್ಲಿ ಇನ್ನೊಂದು ಮನೆ ಸಮುದ್ರಪಾಲಾಗಿದ್ದು, ಐದು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ|ಡಿ.ಸಜಿತ್‌ಬಾಬು ಶಾಲಾ ಕಾಲೇಜುಗಳಿಗೆ ರಜೆ ಸಾರಿದ್ದರು. ಅಂಗನವಾಡಿಗಳಿಗೂ, ಮದರಸಾಗಳಿಗೂ ರಜೆ ಸಾರಲಾಗಿತ್ತು. ಮಳೆಯ ಜತೆ ಭಾರೀ ಗಾಳಿ ಬೀಸುತ್ತಿರುವುದರಿಂದ ನಷ್ಟ ಹೆಚ್ಚಲು ಕಾರಣವಾಗಿದೆ.


ಮನೆಗಳು ಜಲಾವೃತ
ಕಾಸರಗೋಡು ನಗರಸಭೆಯ ಆಶ್ರಯ ಯೋಜನೆಯಲ್ಲಿ ಕೊರಕ್ಕೋಡು ಬಯಲಿನಲ್ಲಿ ನಿರ್ಮಿಸಲಾಗಿದ್ದ ಮನೆಗಳು ನೀರಿನಿಂದ ಆವೃತವಾಗಿದೆ. ಪಕ್ಕದ ಚಂದ್ರಗಿರಿ ಹೊಳೆ ತುಂಬಿ ತುಳುಕುತ್ತಿದೆ. ವಯಲಾಂಕುಳಿಯಲ್ಲಿ ಹೆಚ್ಚಿನ ಪ್ರದೇಶಗಳು ನೀರಿನಿಂದ ಆವೃತ್ತವಾಗಿದ್ದು, ಭತ್ತದ ಹೊಲಗಳೂ ನೀರಿನಲ್ಲಿ ಮುಳುಗಿವೆ. ಜಿಲ್ಲೆಯ ಮಲೆನಾಡ ಪ್ರದೇಶಗಳಲ್ಲಿ ಬಿರುಗಾಳಿಗೆ ಹಲವು ಕಂಗು ಮತ್ತು ತೆಂಗಿನ ಮರಗಳು ಬುಡಸಮೇತ ಮಗುಚಿ ಬಿದ್ದಿದೆ. ಇತರ ಕೃಷಿಗಳು ಹಾನಿಗೀಡಾಗಿವೆ.

ಬಂದಡ್ಕ ಚಾಮಕೊಚ್ಚಿ ಚಾಪಕ್ಕಲ್‌ನ ಕೋರ್ಪಾಳು ಅವರ ಮೇಲೆ ಮರ ಬಿದ್ದಿದೆ. ಮೀಯಪದವು ಕುಳವಯಲ್‌ನಲ್ಲಿ ಬಾಡೂರಿನ ಬಡುವನ್‌ ಕುಂಞಿ ಅವರ ಮನೆಯ ಪಕ್ಕದ ದೊಡ್ಡಿಗೆ ಸಿಡಿಲು ಬಡಿದು ದನ ಮತ್ತು ಕರು ಸಾವಿಗೀಡಾಗಿದೆ. ಮನೆಗೂ ಸಿಡಿಲು ಬಡಿದು ವಿದ್ಯುತ್‌ ಉಪಕರಣಗಳು, ವಯರ್‌ ಬೆಂಕಿಗಾಹುತಿಯಾಗಿದೆ. ಮನೆಗೂ ಹಾನಿಯಾಗಿದೆ.

ಸುಮಾರು ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಆಲಂಪಾಡಿ ಅನಾಥಾಲಯದ ಬಳಿಯ ಅಬ್ದುಲ್‌ ಖಾದರ್‌ ಅವರ ಹೆಂಚು ಹಾಸಿದ ಮನೆಯ ಮೇಲ್ಛಾವಣಿ ಬಿರುಗಾಳಿಯಿಂದ ಕುಸಿದು ಬಿದ್ದಿದೆ. ಬಂದಡ್ಕ ಚಾಪಕ್ಕಲ್‌ ತೂಕ್ಕೂಟ್‌ ನಾಯ್ಕ ಅವರ ಬೈಕ್‌ನ ಮೇಲೆ ಮರ ಬಿದ್ದು ಹಾನಿಗೀಡಾಗಿದೆ. ಬಿರುಗಾಳಿಗೆ ಕುತ್ತಿಕೋಲ್‌ ವಿದ್ಯುತ್‌ ಕಚೇರಿ ಸಂಪರ್ಕ ಮೊಟಕುಗೊಂಡಿದೆ. ಪಾಲಾರ್‌ನಲ್ಲಿ ಎರಡು, ಚಾಮಕೊಚ್ಚಿ, ಮಲ್ಲಂಪಾರೆ ಮತ್ತು ಮಾಕಟ್ಟೆಯಲ್ಲಿ ಒಂದರಂತೆ ವಿದ್ಯುತ್‌ ಕಂಬ ಕುಸಿದು ಬಿದ್ದಿದೆ.

ವೆಳ್ಳರಿಕುಂಡು ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದೆ. ಅಲ್ಲಿ ಭಾರೀ ನಾಶನಷ್ಟ ಸಂಭವಿಸಿದೆ. ಚೆರ್ವತ್ತೂರು ಮತ್ತು ಸಮೀಪ ಪ್ರದೇಶಗಳಲ್ಲಿ ಬಿರುಗಾಳಿಗೆ ಮೇಲ್ಸೇತುವೆ ರಸ್ತೆಯ ಕೃಷಿ ಭವನ ಬಳಿ ನಿಲ್ಲಿಸಲಾಗಿದ್ದ ಕುಟ್ಟಮತ್ತ್ ಪೊನ್ನಲದ ಟಿ.ಮೋಹನ್‌ ಅವರ ಕಾರಿನ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಗೀಡಾಗಿದೆ. ಅಲ್ಲೇ ಪಕ್ಕದ ದಿನೇಶ್‌ ಉತ್ಪನ್ನಗಳ ಸ್ಟಾಲ್‌ನ ಎದುರುಗಡೆಯ ಶೀಟ್‌ ಹಾನಿಗೀಡಾಗಿದೆ. ಬೈಕ್‌ ಕೂಡಾ ಹಾನಿಯಾಗಿದೆ. ಹೊಸದುರ್ಗ ಮಡಿಕೈಯ ತಂಡಾರ ಕಾತ್ಯಾìಯಿನಿ ಅವರ ಮನೆ ಮೇಲೆ ಮರ ಬಿದ್ದು ಹಾನಿಗೀಡಾಗಿದೆ.

Advertisement

ಅಂಗಡಿಗೆ ನುಗ್ಗಿದ ನೀರು
ಬುಧವಾರ ರಾತ್ರಿ ಸುರಿದ ಮಳೆಯಿಂದ ಹಳೆ ಬಸ್‌ ನಿಲ್ದಾಣದಲ್ಲಿರುವ ಕೆಲವು ಅಂಗಡಿಯೊಳಗೆ ನೀರು ನುಗ್ಗಿದೆ. ಹೊಟೇಲ್‌ ಸಹಿತ ಆರು ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.

ಕಡಲ್ಕೊರೆತ ತೀವ್ರ
ಮೂಸೋಡಿಯಲ್ಲಿ ಬುಧವಾರ ರಾತ್ರಿ ಅಬ್ದುಲ್ಲ ಅವರ ಮನೆ ಸಮುದ್ರ ಪಾಲಾಗಿದೆ. ನೆಫೀಸ ಅವರ ಮನೆ ಯಾವುದೇ ಕ್ಷಣದಲ್ಲೂ ನೀರು ಪಾಲಾಗುವ ಭೀತಿ ಉಂಟಾಗಿದೆ. ಈ ಪರಿಸರದ ಅಬ್ಟಾಸ್‌, ಮೊಹಮ್ಮದ್‌ ಹನೀಫ್‌, ಅಬ್ದುಲ್‌ ಮಜೀದ್‌, ಮೊದು, ಮರಿಯುಮ್ಮ ಕುಟುಂಬಗಳನ್ನು ಸಮೀಪದ ಶಾಲೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಇನ್ನೂ 8 ಮನೆಗಳು ಅಪಾಯದಂಚಿನಲ್ಲಿವೆ. ಮಣಿಮುಂಡ, ಶಾರದಾನಗರ, ಹನುಮಾನ್‌ ನಗರದಲ್ಲೂ ಕಡಲ್ಕೊರೆತ ಭೀತಿ ಉಂಟಾಗಿದೆ.

ಮಂಗಲ್ಪಾಡಿ ಪಂಚಾಯತ್‌ ವ್ಯಾಪ್ತಿಯ ಶಿರಿಯದಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದೆ. ಈ ಪರಿಸರದ ಮೊದೀನ್‌ ಕುಂಞಿ, ಉಸ್ಮಾನ್‌, ಬೀಫಾತಿಮ್ಮ, ಮರಿಯುಮ್ಮ, ಹಾಜಿರ, ಅಶ್ರಫ್‌, ಯೂಸಫ್‌ ಅವರ ಮನೆ ಅಪಾಯದಂಚಿನಲ್ಲಿದೆ.

ಜಿಲ್ಲೆಯಲ್ಲಿ 2015.776 ಮಿ.ಮೀ. ಮಳೆ
ಜಿಲ್ಲೆಯಲ್ಲಿ ಬಿರುಸಿನ ಮಳೆ ಆರಂಭಗೊಂಡ ನಂತರ ಈ ವರೆಗೆ 2015.776 ಮಿ.ಮೀ. ಮಳೆ ಬಿದ್ದಿದೆ. ಕಳೆದ 24 ತಾಸುಗಳಲ್ಲಿ 57.662 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 13 ಮನೆಗಳು ಪೂರ್ಣರೂಪದಲ್ಲಿ, 186ಮನೆಗಳು ಭಾಗಶ: ಹಾನಿಗೊಂಡಿವೆ. ಕಳೆದ 24 ತಾಸುಗಳಲ್ಲಿ 8 ಮನೆಗಳು ಅರ್ಧಾಂಶ ನಾಶವಾಗಿವೆ. ಜಿಲ್ಲೆಯಲ್ಲಿ ಈವರೆಗೆ 2,46,87,600 ರೂ.ನ ಕೃಷಿ ನಾಶ ಗಣನೆ ಮಾಡಲಾಗಿದೆ. 348.52606 ಹೆಕ್ಟೇರ್‌ ಕೃಷಿ ಜಾಗಕ್ಕೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next