Advertisement
ಅಭಿವೃದ್ಧಿಯ ಕನಸು ಸಾಕಾರಗೊಳಿಸಲು ಮಲೆನಾಡು, ಕರಾವಳಿ ಪ್ರದೇಶಗಳನ್ನೊಳಗೊಂಡ ಕಾಸರಗೋಡು ಮತ್ತು ಹೊಸದುರ್ಗ ತಾಲೂಕುಗಳನ್ನು ಸೇರಿಸಿಕೊಂಡು ಜನ್ಮ ಪಡೆದ ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
Related Articles
Advertisement
ಎಂಡೋಸಲ್ಫಾನ್ ದುರಂತದ ಹಿನ್ನೆಲೆಯಲ್ಲಿ ಉಕ್ಕಿನಡ್ಕದಲ್ಲಿ ಹಿಂದಿನ ಐಕ್ಯರಂಗ ಸರಕಾರ ಮಂಜೂರು ಮಾಡಿದ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರೂ, ಕಾಲೇಜು ಕಟ್ಟಡ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗಿದೆ.
ರಾಜ್ಯದಲ್ಲೇ ಅತ್ಯಂತ ಹೆಚ್ಚು ಗೇರು ಬೆಳೆಯುವ ಎರಡನೇ ಜಿಲ್ಲೆ ಹಾಗೂ ಅತ್ಯುತ್ತಮ ಗುಣಮಟ್ಟದ ಗೇರು ನೀಡುವ ಕಾಸರಗೋಡು ಜಿಲ್ಲೆಯಲ್ಲಿ ಸರಕಾರಿ ಗೇರು ಫ್ಯಾಕ್ಟರಿಯೂ ಇಲ್ಲ. ಕಾಸರಗೋಡಿನಲ್ಲಿ ಸರಕಾರಿ ಮುದ್ರಣಾಲಯ ನಿರ್ಮಿಸುವ ಕುರಿತಾಗಿ ಕೇಳಿ ಬಂದಿತ್ತು. ಆದರೆ ಈ ಯೋಜನೆಯೂ ಮೂಲೆಗುಂಪಾಗಿದೆ.
ಜಿಲ್ಲೆಯಲ್ಲಿ ಗಮನಿಸಬಹುದಾದ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ. ಕಾಸರಗೋಡಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಬೇಕಾದರೆ ಮಂಗಳೂರನ್ನೇ ಆಶ್ರಯಿಸಬೇಕಾದ ಗತಿಗೇಡು ಮುಂದುವರಿದಿದೆ.ಕಾಸರಗೋಡು ಜಿಲ್ಲೆಯಲ್ಲಿ ಪ್ರಮುಖ 11 ನದಿಗಳ ಸಹಿತ ಹಲವು ನದಿಗಳಿದ್ದರೂ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ವರೆಗೂ ಸಾಧ್ಯವಾಗಿಲ್ಲ. ಕಾಸರಗೋಡು ನಗರ ಮತ್ತು ಕೆಲವು ಗ್ರಾಮ ಪಂಚಾಯತ್‌ಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಬಾವಿಕೆರೆ ಶಾಶ್ವತ ಅಣೆಕಟ್ಟು ಸ್ಥಾಪಿಸಲು ಸಾಧ್ಯವಾಗದಿರುವುದರಿಂದ ಉಪ್ಪು ನೀರು ಕುಡಿಯಬೇಕಾದ ಪರಿಸ್ಥಿತಿ ಇನ್ನೂ ತಪ್ಪಿಲ್ಲ. ಜಿಲ್ಲೆಯಲ್ಲಿ ಒಂದೇ ಒಂದು ನೀರಾವರಿ ಯೋಜನೆಯಿಲ್ಲ. ಹಿಂದಿನ ಸರಕಾರ ವೆಳ್ಳರಿಕುಂಡು ಮತ್ತು ಮಂಜೇಶ್ವರ ಎಂಬೀ ಎರಡು ತಾಲೂಕುಗಳನ್ನು ರೂಪೀಕರಿಸಿದ್ದರೂ ಈ ತಾಲೂಕು ಕಚೇರಿಗಳಲ್ಲಿ ಯಾವುದೇ ಸೌಕರ್ಯಗಳಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಸಾಧ್ಯತೆಗಳಿದ್ದರೂ, ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಬಹಳಷ್ಟು ಹಿಂದುಳಿದಿದೆ. ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯಾಗಲಿ, ಚಾರಣಪ್ರಿಯರ ರಾಣಿಪುರ, ಪೊಸಡಿ ಗುಂಪೆ ಮೊದಲಾದ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಇಕೋ ಟೂರಿಸಂ, ತೋಣಿಕಡವು ಅಭಿವೃದ್ಧಿ ನಡೆದಿಲ್ಲ. ಈ ಕಾರಣದಿಂದ ಕಾಸರಗೋಡು ಜಿಲ್ಲೆ ಪ್ರವಾಸೋದ್ಯಮದಲ್ಲಿ ಬಹಳಷ್ಟು ಹಿಂದುಳಿದಿದೆ. ಮಹತ್ವಾಕಾಂಕ್ಷೆಯ ಕಾಸರಗೋಡು ಮೀನುಗಾರಿಕಾ ಬಂದರಿನ ಗಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಇನ್ನೂ ಉದ್ಘಾಟನೆಯಾಗಿಲ್ಲ. ಮಂಜೇಶ್ವರ ಮೀನುಕಾರಿಕಾ ಬಂದರು ಕಾಮಗಾರಿ ಆಮೆನಡಿಗೆಯಲ್ಲಿ ಸಾಗುತ್ತಿದೆ. ಜಿಲ್ಲಾ ಪಂಚಾಯತ್‌ನ ಕನಸಿನ ಯೋಜನೆ
ಕಾಸರಗೋಡಿನ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಪೆರಿಯ ಏರ್‌ಸ್ಟಿÅಪ್ ಸಾಕಾರಗೊಳಿಸಲು ಕಾಸರಗೋಡು ಜಿಲ್ಲಾ ಪಂಚಾಯತ್ ಮುಂದಾಗಿದೆ. ಸರಕಾರದ ಅನುಮತಿಗಾಗಿ ಕಾಯುತ್ತಿದೆ. ಅನುಮತಿ ಲಭಿಸಿದ್ದಲ್ಲಿ ಕಿರು ವಿಮಾನಗಳು ಲ್ಯಾಂಡ್ ಆಗುವ ಸ್ಥಳವಾಗಿ ಬದಲಾಗಲಿದೆ. ಇದಕ್ಕಾಗಿ ಈಗಾಗಲೇ ಒಂದು ಹಂತದ ವರೆಗೆ ಚರ್ಚೆಗಳು ನಡೆದಿವೆ. ಅಲ್ಲದೆ ಕಿರು ಜಲ ವಿದ್ಯುತ್ ಯೋಜನೆಗೂ ಜಿಲ್ಲಾ ಪಂಚಾಯತ್ ಮುಂದಾಗಿದೆ. ಇದು ಸಾಕಾರಗೊಳ್ಳಬೇಕಾದರೆ ಇಚ್ಛಾಶಕ್ತಿ ತೋರಲೇ ಬೇಕಾಗುತ್ತದೆ. ಇದೇ ರೀತಿ ಸ್ಥಳೀಯಾಡಳಿತ ಸಂಸ್ಥೆಗಳೂ ಅಭಿವೃದ್ಧಿ ಕಾರ್ಯದಲ್ಲಿ ಬಹಳಷ್ಟು ಆಸಕ್ತಿ ವಹಿಸಬೇಕು. ಡಾ| ಪಿ. ಪ್ರಭಾಕರನ್ ಆಯೋಗ ಶಿಫಾರಸು ಈಡೇರಿಲ್ಲ
ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ರೂಪಿಸಿದ ಡಾ| ಪಿ. ಪ್ರಭಾಕರನ್ ಆಯೋಗ ಶಿಫಾರಸುಗಳು ಇನ್ನೂ ಈಡೇರಿಲ್ಲ. ಕಾಸರಗೋಡಿನ ಸಮಗ್ರ ಅಭಿವೃದ್ಧಿಗೆ 11,123 ಕೋಟಿ ರೂಪಾಯಿಯ ಯೋಜನೆಯನ್ನು ಶಿಫಾರಸು ಮಾಡಿತ್ತು. ಈ ಯೋಜನೆಗಳಿಗೆ ಹಿಂದಿನ ಐಕ್ಯರಂಗ ಸರಕಾರ ಮಾನ್ಯತೆಯನ್ನು ನೀಡಿತ್ತು. ಆದರೆ ಸಾಕಷ್ಟು ಹಣ ಬಿಡುಗಡೆಗೊಳಿಸಿಲ್ಲ. ಕೇಂದ್ರ ಸರಕಾರ, ರಾಜ್ಯ ಸರಕಾರ, ಸಹಕಾರಿ ಸಂಸ್ಥೆಗಳು ಮತ್ತು ಖಾಸಗಿ ಹೂಡಿಕೆದಾರರು ಸಂಯುಕ್ತವಾಗಿ ಜಾರಿಗೊಳಿಸಬೇಕಾದ ಯೋಜನೆಗಳನ್ನು ಆಯೋಗ ಶಿಫಾರಸು ಮಾಡಿತ್ತು. ಆದರೆ ಕಾಸರಗೋಡಿನ ಅಭಿವೃದ್ಧಿಗೆ ಅಗತ್ಯದ ಫಂಡ್‌ಗಾಗಿ ಕೇಂದ್ರ ಸರಕಾರಕ್ಕೋ ಹೂಡಿಕೆದಾರರೊಂದಿಗೋ ಯಾವುದೇ ಚರ್ಚೆಯನ್ನು ರಾಜ್ಯ ಸರಕಾರ ಮಾಡಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಸ್ಥಳ ಸೌಕರ್ಯಗಳಿದ್ದರೂ ಕೈಗಾರಿಕೆಗಳನ್ನು ಮಂಜೂರು ಮಾಡಿಲ್ಲ. ಈ ಹಿಂದೆ ಆರಂಭಿಸಲು ಉದ್ದೇಶಿಸಿದ್ದ ಉದುಮ ಸ್ಪಿನ್ನಿಂಗ್ ಮಿಲ್‌ನ ಉಪಕರಣಗಳು ತುಕ್ಕು ಹಿಡಿದು ನಾಶದ ಅಂಚಿಗೆ ಸರಿದಾಗ ಕೊನೆಗೂ ಮಿಲ್ ಚಾಲನೆಗೊಂಡಿದೆ. ಹಲವು ವರ್ಷಗಳ ಹಿಂದೆ ನೆಲ್ಲಿಕುಂಜೆಯಲ್ಲಿ ಸ್ಥಾಪಿಸಿದ್ದ ಆಸ್ಟ್ರಾಲ್ ವಾಚಸ್ ಕಂಪೆನಿ ಮುಚ್ಚಲಾಗಿದೆ. ಅದನ್ನು ತೆರೆದು ಯಾವುದಾದರೂ ಕೈಗಾರಿಕೆ ಆರಂಭಿಸುವ ಬಗ್ಗೆ ಚಿಂತಿಸಿಲ್ಲ. ಇಲ್ಲಿ ಐಟಿ ಪಾರ್ಕ್ ಸ್ಥಾಪಿಸುವ ಬಗ್ಗೆ ಕೇಳಿ ಬಂದಿತ್ತು. ಆದರೆ ಆ ಬಳಿಕ ಈ ವದಂತಿಯೂ ನಿಂತಿತು. ಅಭಿವೃದ್ಧಿಯಾಗದ ಆರೋಗ್ಯ ಕ್ಷೇತ್ರ
ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ತಪ್ಪಿಲ್ಲ. ಅತ್ಯಾ ಧುನಿಕ ಮತ್ತು ತಜ್ಞರಿರುವ ಆಸ್ಪತ್ರೆಗಳಿಗೆ ಕಾಸರಗೋಡಿನ ಜನರು ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯನ್ನೇ ಆಶ್ರಯಿಸಿದ್ದಾರೆ. ಕಾಸರ ಗೋಡು ಜಿಲ್ಲಾ ಆಸ್ಪತ್ರೆ, ಜನರಲ್ ಆಸ್ಪತ್ರೆ ಗಳಿದ್ದರೂ ಬೇಕಾದಷ್ಟು ವೈದ್ಯರಾಗಲೀ, ದಾದಿ ಯರಾಗಲೀ, ಸಿಬಂದಿಯಾಗಲೀ ಇಲ್ಲ. ಆಧುನಿಕ ಸೌಕರ್ಯಗಳೂ ಇಲ್ಲ. ಇರುವ ಕೆಲವೊಂದು ಸಲಕರಣೆಗಳು ಉಪಯೋಗಕ್ಕಿಲ್ಲ ಎಂಬಂಥ ಪರಿಸ್ಥಿತಿ ತಪ್ಪಿಲ್ಲ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪದೇ ಪದೇ ಕೈಕೊಡುತ್ತಿರುವ ಲಿಫ್ಟ್‌ಗೆ ಇನ್ನೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ರೋಗಿಗಳನ್ನು ಸಾಗಿಸಲು ಇನ್ನೂ ರ್‍ಯಾಂಪ್ ನಿರ್ಮಾಣವಾಗಿಲ್ಲ. ಕನ್ನಡಿಗರ ಮೇಲೆ ತೂಗುಗತ್ತಿ
ಇಲ್ಲಿನ ಭಾಷಾ ಅಲ್ಪಸಂಖ್ಯಾಕರಾಗಿರುವ ಕನ್ನಡಿಗರಿಗೆ ಕೇರಳ ಸರಕಾರ ಪದೇ ಪದೆ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಮೂಲಕ ನಿರಂತರವಾಗಿ ಕನ್ನಡ ಭಾಷೆ, ಸಂಸ್ಕೃತಿ ನಾಶಕ್ಕೆ ಪ್ರಯತ್ನಿಸುತ್ತಲೇ ಇದೆ. ಕಾಸರ ಗೋಡಿನ ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನ ಬದ್ಧವಾಗಿ ನೀಡಲಾದ ಹಕ್ಕು, ಸವಲತ್ತು ಗಳನ್ನು ಕಸಿಯುತ್ತಲೇ ಕನ್ನಡಿಗರ ಮೇಲೆ ತೂಗುಗತ್ತಿ ಯಂತೆ ವರ್ತಿಸುತ್ತಲೇ ಇದೆ. ಕೇರಳ ಸರಕಾರ 2018ರ ಜೂ. 1ರಿಂದ 1ನೇ ತರಗತಿಯಿಂದ 10ನೇ ತರಗತಿಯ ವರೆಗೂ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಸರ್ವನಾಶ ಮಾಡಲು ಹೊರಟಿದೆ. ಸಪ್ತ ಭಾಷೆಗಳ ನಾಡೆಂದು ಹೇಳುತ್ತಲೇ ಬಂದಿರುವ ಕೇರಳ ಸರಕಾರ ನಿರಂತರವಾಗಿ ಕನ್ನಡಿಗರ ಮೇಲೆ ದಬ್ಟಾಳಿಕೆ ನಡೆಸುತ್ತಲೇ ಬಂದಿದ್ದು, ಕಾಸರಗೋಡಿನ ಕನ್ನಡಿಗರಿಗೆ ನಿರಂತರ ಸಮಸ್ಯೆ ಸೃಷ್ಟಿಸುತ್ತಲೇ ಇದೆ. ಈ ಮೂಲಕ ಕನ್ನಡಿಗರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. – ಪ್ರದೀಪ್ ಬೇಕಲ್