Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

10:11 PM Mar 23, 2019 | Team Udayavani |

ವಿದ್ಯಾರ್ಥಿಗೆ ಹಲ್ಲೆ
ಕಾಸರಗೋಡು:
ವಿದ್ಯಾನಗರದಲ್ಲಿ ಚೆಂಗಳ ನಾಲ್ಕನೇ ಮೈಲ್‌ ರೆಹಮ್ಮತ್‌ನಗರದ ನಿವಾಸಿ, ಪ್ಲಸ್‌ ಟು ವಿದ್ಯಾರ್ಥಿ ನೂಹ್‌ಮಾನ್‌(17) ಅವರಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಇಮಿ¤ಯಾಸ್‌, ಆಮಿ ಮತ್ತು ನೌಫಲ್‌ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

2.4 ಕಿಲೋ ಚಿನ್ನ ವಶಕ್ಕೆ
ಕಾಸರಗೋಡು:
ಕರಿಪ್ಪೂರ್‌ನಲ್ಲಿರುವ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್‌ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 2.4 ಕಿಲೋ ಚಿನ್ನವನ್ನು ವಶಪಡಿಸಿಕೊಂಡಿದೆ. ಇದರ ಒಟ್ಟು ಮೌಲ್ಯ 69,60,725 ರೂ. ಈ ಸಂಬಂಧ ಕಾಸರಗೋಡಿನ ಖದೀಜಮ್ಮ, ಕಳನಾಡು ನಿವಾಸಿ ಮೊಹಮ್ಮದ್‌ ರಝಾಕ್‌ ಸಹಿತ ಆರು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ತಡೆದು ನಿಲ್ಲಿಸಿ ಹಲ್ಲೆ : ಕೇಸು ದಾಖಲು
ಕಾಸರಗೋಡು:
ಕ್ಯಾಂಟೀನ್‌ನಿಂದ ಆಹಾರ ಸೇವಿಸಿ ಮಸೀದಿಗೆ ತೆರಳುತ್ತಿದ್ದ ಇಮಾಂರನ್ನು ದಾರಿ ಮಧ್ಯೆ ತಡೆದು ನಿಲ್ಲಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ನೆಲ್ಲಿಕುಂಜೆ ನೂರ್‌ ಮಸೀದಿಯ ಇಮಾಂ, ಸುಳ್ಯ ಕಲ್ಮಡ್ಕ ಉಚ್ಚಿಲ ನಿವಾಸಿ ಅಬ್ದುಲ್‌ ನಾಸರ್‌ ಸಖಾಫಿ(26) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಮಾ.21 ರಂದು ರಾತ್ರಿ 9 ಗಂಟೆಗೆ ನೆಲ್ಲಿಕುಂಜೆಯಲ್ಲಿ ಮುಖವಾಡ ಧರಿಸಿದ ಇಬ್ಬರು ಹಲ್ಲೆ ಮಾಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಪೂರ್ವ ದ್ವೇಷ ಹಲ್ಲೆಗೆ ಕಾರಣವೆನ್ನಲಾಗಿದೆ. ಗಾಯಾಳು ಸಖಾಫಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರೈಲಿನಿಂದ ಬಿದ್ದು ಇಬ್ಬರು ಯುವತಿಯರಿಗೆ ಗಾಯ
ಕಾಸರಗೋಡು
: ಹೊಸದುರ್ಗ ರೈಲು ನಿಲ್ದಾಣದಲ್ಲಿ ಯುವತಿಯರು ರೈಲಿನಿಂದ ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದು, ಇವರು ಪಯ್ಯನ್ನೂರಿಗೆ ತೆರಳಲು ಕಾಸರಗೋಡಿನಿಂದ ಪುಣೆ ಎಕ್ಸ್‌ಪ್ರೆಸ್‌ ರೈಲು ಗಾಡಿಗೇರಿದ್ದರು. ಆದರೆ ಈ ರೈಲು ಪಯ್ಯನ್ನೂರಿನಲ್ಲಿ ನಿಲ್ಲುವುದಿಲ್ಲ ಎಂದು ತಿಳಿದಾಗ ಹೊಸದುರ್ಗ ರೈಲು ನಿಲ್ದಾಣದಲ್ಲಿ ಇಳಿಯಲು ಯತ್ನಿಸಿದರು. ಇಳಿಯುತ್ತಿದ್ದಾಗ ರೈಲು ಚಲಿಸಿದ ಕಾರಣದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

Advertisement

ಮನೆಯಿಂದ ಕಳವು ಯತ್ನ
ಕುಂಬಳೆ:
ಕುಂಬಳೆ ರೈಲು ನಿಲ್ದಾಣ ಬಳಿಯ ಅಬೂಬಕ್ಕರ್‌ ಅವರ ಮನೆಯಿಂದ ಕಳವು ಮಾಡಲು ಯತ್ನಿಸಿ ವಿಫಲರಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಹೆಂಚು ಸರಿಸಿ ಮನೆಯೊಳಗೆ ನುಗ್ಗಿ ಕೊಠಡಿಯಲ್ಲಿದ್ದ ಕಪಾಟುಗಳನ್ನು ಮುರಿಯಲು ಯತ್ನಿಸಿದ್ದರು. ಕಪಾಟು ಮುರಿಯಲು ಸಾಧ್ಯವಾಗದೆ ಕಳವಿಗೆ ವಿಫಲ ಯತ್ನ ನಡೆಸಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಬಸ್‌ ನಿರ್ವಾಹಕನ ಹಣ ಕಳವು : ಸೆರೆ
ಉಪ್ಪಳ:
ಕುರುಡಪದವು ರೂಟ್‌ನಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನ ನಿರ್ವಾಹಕ ಜಯಪ್ರಕಾಶ್‌ ಅವರ ಬ್ಯಾಗ್‌ನಲ್ಲಿದ್ದ 1,500 ರೂ., ಮೊಬೈಲ್‌ ಫೋನ್‌, ವಾಚ್‌ ಹಾಗೂ ಬಸ್‌ನಲ್ಲಿದ್ದ 6,000 ರೂ. ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸುಂಕದಕಟ್ಟೆ ಗೋಳಿಕಟ್ಟೆ ಬಳಿಯ ಮಾಡಾಯಿಗುಡ್ಡೆ ನಿವಾಸಿ ರಹೀಂ ಯಾನೆ ಅಬ್ದುಲ್‌ ರಹೀಂ(25)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಕಳವು ಮಾಡಿದ ಗೇರು ಬೀಜ 
ಸಹಿತ ವ್ಯಕ್ತಿಯ ಬಂಧನ
ಮುಳ್ಳೇರಿಯ:
ಪ್ಲಾಂಟೇಶನ್‌ ಕಾರ್ಪೊರೇಶನ್‌ನ ಆದೂರು ಡಿವಿಷನ್‌ನ ಗೇರು ತೋಟದಿಂದ ಕಳವು ಮಾಡಿದ ಗೇರು ಬೀಜ ಸಹಿತ ಗೇರು ತೋಟದ ಕಾವಲುಗಾರ ಆದೂರು ನಿವಾಸಿ ಅಬ್ದುಲ್ಲ (35)ನನ್ನು ಪೊಲೀಸರು ಬಂಧಿಸಿದ್ದಾರೆ. 
ಮಿಂಚಿಪದವಿನ ಗೇರು ತೋಟದಿಂದ ಮೂರುವರೆ ಕಿಲೋ ಗೇರು ಬೀಜ ಕಳವು ಮಾಡಿ ಸಾಗಿಸುತ್ತಿದ್ದಾಗ ಬಂಧಿಸಲಾಗಿದೆ.

ಕಾರಿನಲ್ಲಿ ಮಾರಕಾಯುಧ 
ಸಾಗಿಸುತ್ತಿದ್ದ ಇಬ್ಬರ ಬಂಧನ
ಉಪ್ಪಳ
: ಮಾರಕಾಯುಧಗಳ ಸಹಿತ ಕಾರಿನಲ್ಲಿ ಸಂಚರಿ ಸುತ್ತಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮಾ. 21ರಂದು ರಾತ್ರಿ ಕೈಕಂಬದಿಂದ ಪೈವಳಿಕೆ ಭಾಗದತ್ತ ಸಾಗುತ್ತಿದ್ದ ಆಲ್ಟೋ ಕಾರನ್ನು ಸೋಂಕಾಲ್‌ನಲ್ಲಿ ತಪಾಸಣೆ ಮಾಡಿದಾಗ ಆಯುಧ ಪತ್ತೆಯಾಯಿತು. ಕಾರಿನಲ್ಲಿದ್ದ ಉಪ್ಪಳ ನಿವಾಸಿ ತೌಸೀಫ್‌ (19) ಮತ್ತು ಇನ್ನೋರ್ವ ಅಪ್ರಾಪ್ತ ವಯಸ್ಕ ಬಾಲಕನನ್ನು ಬಂಧಿಸಲಾಯಿತು. ಕಾರಿನಲ್ಲಿ ಕತ್ತಿ, ತಲವಾರು, ಚೂರಿ, ಕಬ್ಬಿಣದ ಸರಳುಗಳು ಕಂಡು ಬಂದಿದೆ. ಆಯುಧಗಳನ್ನು ಹಾಗೂ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಶಾಲೆ ಎಲ್‌.ಸಿ.ಡಿ. ಪ್ರೊಜೆಕ್ಟರ್‌ ಕಳವು
ಬದಿಯಡ್ಕ:
ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯ ಎಲ್‌.ಸಿ.ಡಿ. ಪ್ರೊಜೆಕ್ಟರ್‌ ಕಳವು ಮಾಡಲಾಗಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next