Advertisement

ಬೆಂಗಳೂರಿನಲ್ಲಿ ಚಿನ್ನ-ಚಿತ್ತಾರ ಸಮಾರಂಭ, ಸಮ್ಮಾನ

06:20 AM Sep 22, 2018 | |

ಕಾಸರಗೊಡು: ಗಡಿನಾಡಿನ ಪ್ರತಿಭೆ, ಕೇರಳ ಹಾಗೂ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಕೊಂಡಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರಿಗೆ ಅರುವತ್ತು ತುಂಬಿದ ಸಂದರ್ಭದಲ್ಲಿ ಬೆಂಗಳೂರಿನ ಭಾಗವತರು (ರಿ) ಹಾಗೂ ಚಿನ್ನಾ ಗೆಳೆಯರು ನೇತೃತ್ವದಲ್ಲಿ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಲಾಯಿತು.

Advertisement

“ಚಿನ್ನ ಚಿತ್ತಾರ’ ಕಾರ್ಯಕ್ರಮದಲ್ಲಿ ಏರ್ಪಡಿಸಿದ ಕಾಸರಗೋಡು ಚಿನ್ನಾ ಅವರ ಕುರಿತಾದ ವಿಚಾರಗೋಷ್ಠಿಯನ್ನು ಖ್ಯಾತ ರಂಗಕರ್ಮಿ ಕೆ.ವಿ. ನಾಗರಾಜಮೂರ್ತಿ ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡುತ್ತಾ ಏಕ ಕಾಲಕ್ಕೆ ಕರ್ನಾಟಕ ಹಾಗೂ ಕೇರಳ ಎರಡೂ ರಾಜ್ಯಗಳಲ್ಲಿ ಅಕಾಡೆಮಿ ಸದಸ್ಯನಾಗಿ ದುಡಿದ ಚಿನ್ನಾ ಅವರು ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆಗೆ ಎಂದೂ ಬಜೆಟ್ಟಿನ ಪರಿಮಿತಿ ಹಾಕಿಕೊಂಡವರಲ್ಲ. ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸುವುದರಲ್ಲಿ  ಎತ್ತಿದ ಕೈ ಎಂದರು.

“ಚಿನ್ನಾ ಮತ್ತು ಸಂಘಟನೆ’ ಕುರಿತಂತೆ ಖ್ಯಾತ ರಂಗಕರ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ್‌ ಮಾತನಾಡಿ ಇಡೀ ರಂಗಭೂಮಿಗೆ ಈಗ ಬೇಕಿರುವುದು ನಟ, ನಿರ್ದೇಶಕರಲ್ಲ. ಬದಲಾಗಿ ಅಚ್ಚುಕಟ್ಟಾಗಿ ಆಯೋಜಿಸುವ ಸಂಘಟಕರು. ಏಕೆಂದರೆ ಇಂದು ನೂರಾರು ಕಲಾವಿದರು ಹುಟ್ಟಿಕೊಳ್ಳುತ್ತಿದ್ದಾರೆ. ಸೃಜನಶೀಲ ನಿರ್ದೇಶಕರಿದ್ದಾರೆ. ಆದರೆ ಚಪ್ಪಾಳೆ ತಟ್ಟಿದರೆ ಜನ ಸೇರಿಸಬಲ್ಲ ಸಂಘಟಕರಿಲ್ಲ. ಅದರಲ್ಲಿ ಚಿನ್ನಾ ಸಿದ್ಧಹಸ್ತರು. ಉಡುಪಿಯ ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ನನಗೆ ಅವರು ನೀಡಿದ “ದ್ರವ್ಯ ಕಾಣಿಕೆ’ ನಾನೆಂದೂ ಮರೆಯುವುದಿಲ್ಲ ಎಂದರು.

ಸಾಹಿತಿ ಶಾ.ಮಂ. ಕೃಷ್ಣರಾಯ, ಡಾ| ನಾ. ದಾಮೋದರ ಶೆಟ್ಟಿ ಮಾತನಾಡಿದರು.ಸಂಜೆ ನಡೆದ ಅದ್ದೂರಿ ಸಮ್ಮಾನ ಸಮಾರಂಭವನ್ನು ಖ್ಯಾತ ಸಾಹಿತಿ ಡಾ| ಡಿ.ಕೆ. ಚೌಟ ಅವರು ಉದ್ಘಾಟಿಸಿದರು. ಚಿನ್ನಾ ಅವರ ಎಲ್ಲಾ ಹುಚ್ಚಾಟಗಳಿಗೆ ಸಾಕ್ಷಿ ನಾನು. ಏಕೆಂದರೆ ಅವನೆಲ್ಲಾ ಅಭಿಯಾನಗಳು ಪ್ರಾರಂಭಗೊಳ್ಳುವುದು ನನ್ನೂರಿನಿಂದ. “ಲಾರಿ ನಾಟಕ’ ಕ್ಕೆ ಚಾಗಟೆ ಬಾರಿಸಿ ಚಾಲನೆಯನ್ನು ನಾನು ನೀಡಿದ್ದೆ. ಆದರೆ ಎಂದೂ ನನ್ನ ಬಳಿ ಆರ್ಥಿಕ ಸಹಾಯಕ್ಕಾಗಿ ಕೈ ಒಡ್ಡಿದವರಲ್ಲ. ಮಹಾನ್‌ ಸ್ವಾಭಿಮಾನಿ ಎಂದರು.

ಮುಖ್ಯ ಅತಿಥಿಯಾಗಿ ಮಾಜಿ ಸಂಸ್ಕೃತಿ ಸಚಿವೆ ಉಮಾಶ್ರೀ, ನಟ, ಭರತನಾಟ್ಯ ಕಲಾವಿದ ಶ್ರೀಧರ್‌ ಮಾತನಾಡಿದರು. ನಟ ರಾಮಕೃಷ್ಣ ಶುಭಾಶಂಸನೆಗೈದರು. 

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರಿನ ಅಂಕಣಕಾರ, ಪತ್ರಕರ್ತ ರವೀಂದ್ರ ಜೋಷಿ ಚಿನ್ನಾ ಅವರ ಬಹು ಮುಖ ವ್ಯಕ್ತಿತ್ವವನ್ನು ತಿಳಿಸಿ ಕರ್ನಾಟಕದ ರಾಜಧಾನಿಯಲ್ಲಿ ಅವರನ್ನು ಗೌರವಿಸುವ ಮುಖಾಂತರ ನಮಗೆ ನಾವೇ ಸಮ್ಮಾನಿಸಿಕೊಳ್ಳುತ್ತಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ದತ್ತಣ್ಣ ಅವರು “ದುಡ್ಡು ದೊಡ್ಡದ್ದಲ್ಲ, ದುಡಿಮೆ ದೊಡ್ಡದು. ಜೀವ ದೊಡ್ಡದ್ದಲ್ಲ ಜೀವನ ದೊಡ್ಡದು’. ಅದಕ್ಕೆ ತಕ್ಕಂತೆ ಚಿನ್ನಾ ಜೀವನ ಮಾಡಿದ್ದಾರೆ ಎಂದರು.
ವಿಚಾರಗೋಷ್ಠಿಯ ಅಧ್ಯಕ್ಷತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್‌.ಜಿ. ಸಿದ್ಧರಾಮಯ್ಯ ವಹಿಸಿ ಮಾತನಾಡಿದರು. 

ಕಾಸರಗೋಡು ಚಿನ್ನಾ ಹಾಗೂ ಅವರ ಪತ್ನಿ ಅನಿತಾ ಅವರಿಗೆ ಸಮಸ್ತ ಬೆಂಗಳೂರಿನ ಕಲಾವಿದರ ಪರವಾಗಿ “ರಂಗ ಗೌರವ’ ವನ್ನು ನೀಡಲಾಯಿತು. 

ಕಾರ್ಯಕ್ರಮದ ಪ್ರಾರಂಭದಲ್ಲಿ ಖ್ಯಾತ ಸುಗಮ ಸಂಗೀತ ಗಾಯಕಿ ಸೀಮಾ ರಾಯ್ಕರ್‌ ಹಾಗೂ ಬಿ.ಪಿ.ಗೋಪಾಲಕೃಷ್ಣ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಿತು. ಭಾಗವತರು ಸಂಸ್ಥೆಯ ರೂವಾರಿ ರೇವಣ್ಣ ಸ್ವಾಗತಿಸಿದರು. ಶಿವಲಿಂಗಯ್ಯ ಕಾರ್ಯಕ್ರಮ ನಿರೂಪಿಸಿದರು. ರಂಗಭೂಮಿ, ಸಾಹಿತ್ಯ, ಚಲನಚಿತ್ರ ಕ್ಷೇತ್ರದ ಹಲವಾರು ಜನರು ಭಾಗವಹಿಸಿದ್ದರು. 

ಸಾರ್ಥಕ ಜೀವನ ನಡೆಸಿಕೊಂಡು ಬಂದಿದ್ದೇನೆ. ಸಮ್ಮಾನದ ಹಿಂದೆ ಓಡಿ ಹೋಗಿಲ್ಲ. ನಾನು ಸಂಘ ಜೀವಿ. ಹಾಗೇ ಭಾವಜೀವಿ ಕೂಡ. ಆದರೆ “ಬುದ್ಧಿ ಜೀವಿ’ ಅಲ್ಲ. ಕಾವೇರಿಗಾಗಿ ಧ್ವನಿ ಎತ್ತುವ ಕರ್ನಾಟಕದ ಜನ ಕಾಸರಗೋಡಿಗಾಗಿ ಧ್ವನಿ ಎತ್ತಿದರೆ ಅಲ್ಲಿನ ಕನ್ನಡಿಗರಲ್ಲಿ ಭಾಷಾ ಅಲ್ಪಸಂಖ್ಯಾಕರು ಎಂಬ ಅನಾಥ ಪ್ರಜ್ಞೆ  ದೂರವಾಗಲಿದೆ. 
– ಕಾಸರಗೊಡು ಚಿನ್ನಾ

Advertisement

Udayavani is now on Telegram. Click here to join our channel and stay updated with the latest news.

Next