Advertisement

ಸಮಾಜ ತಿದ್ದುವ ಕೆಲಸ ಸಾಹಿತ್ಯ ನಿರ್ವಹಿಸುತ್ತದೆ : ಡಾ|ಶರತ್‌

06:45 AM Apr 03, 2018 | |

ಮುಳ್ಳೇರಿಯ: ಸಮಕಾಲೀನ ನೋವನ್ನು ಹೇಳುವ, ಸಮಕಾಲೀನ ವಿಚಾರಗಳಿಗೆ ಕಣ್ಣಾಗಿ ಕಾವ್ಯ, ಸಾಹಿತ್ಯಗಳು ಸಮಾಜವನ್ನು ತಿದ್ದುವ ಕೆಲಸ ನಿರ್ವಹಿಸುತ್ತದೆ. ಗಡಿನಾಡಿನ ಬದುಕು, ಜನಜೀವನದ ಮನದಾಳದ ಬೇಗುದಿಗಳ ಸೂಚಕವಾಗಿ ಸಮ್ಮೇಳನ ಮೂಡಿಬಂದಿದೆ ಎಂದು ಬೆಳ್ತಂಗಡಿ ಸಹಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ, ಕವಿ ಡಾ| ಶರತ್‌ ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಆವರಣದಲ್ಲಿ ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವರ್ತಮಾನದ ಆಗುಹೋಗುಗಳು, ಬದಲಾವಣೆ ಮತ್ತು ಅದು  ಜನಜೀವನ ವನ್ನು ವಿವಿಧ ಸಂದರ್ಭಗಳಲ್ಲಿ ಬೀರುವ ಪ್ರಭಾವ, ಪರಿಣಾಮಗಳು ಕವಿಯ ಮೂಲಕ ಪ್ರತಿಬಿಂಬಿತಗೊಳ್ಳುವುದು ಸುಸ್ಥಿರತೆಗೆ ತೆರೆದುಕೊಳ್ಳುತ್ತದೆ. ಅಂತಹ ತಪಸ್ಸು ಕವಿಯ ಮೇಲಿದೆ ಎಂದು ತಿಳಿಸಿದ ಅವರು, ಕರ್ನಾಟಕದ ಬೇರೆಡೆಗಳ ಸಮ್ಮೇಳನಕ್ಕಿಂತ ಗಡಿನಾಡಿನ ಸಾಹಿತ್ಯ ಸಮ್ಮೇಳನವು ಆಶಯ ಬಿಂಬಿಸುವಿಕೆಯಲ್ಲಿ ವಿಶೇಷವಾಗಿದೆ ಎಂದು ತಿಳಿಸಿದರು.

ಕವಿಗಳಾದ ರಾಧಾಕೃಷ್ಣ ಕೆ. ಉಳಿಯ ತ್ತಡ್ಕ, ವಿಜಯಲಕ್ಷಿ$¾à ಶಾನು ಭೋಗ್‌, ಡಾ| ರಾಧಾ ಕೃಷ್ಣ ಬೆಳ್ಳೂರು, ಶಂಕರನಾರಾಯಣ ಭಟ್‌ ಕಕ್ಕೆಪ್ಪಾಡಿ, ಕವಿತಾ ಕೂಡ್ಲು, ವಿರಾಜ್‌ ಅಡೂರು, ಪ್ರಭಾವತಿ ಕೆದಿಲಾಯ ಪುಂಡೂರು, ಪರಿಣಿತ ರವಿ ಎಡನಾಡು, ಪುರುಷೋತ್ತಮ ಭಟ್‌ ಕೆ., ವಿಜಯರಾಜ್‌ ಪುಣಿಂಚತ್ತಾಯ, ಶ್ಯಾಮಲಾ ರವಿರಾಜ್‌ ಕುಂಬಳೆ, ಶ್ರದ್ಧಾ ನಾಯರ್ಪಳ್ಳ ಸ್ವರಚಿತ ಕವನಗಳನ್ನು ವಾಚಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ| ನಾ. ಮೊಗಸಾಲೆ ಉಪಸ್ಥಿತರಿದ್ದ ಗೋಷ್ಠಿಯಲ್ಲಿ ಸಮ್ಮೇಳನದ ಚಿತ್ರಕಲೆ ಮತ್ತು ಪುಸ್ತಕ ಪ್ರದರ್ಶನ ಸಮಿತಿ ಸದಸ್ಯ ಬಾಲ ಮಧುರಕಾನನ ಸ್ವಾಗತಿಸಿ, ಸ್ವಾಗತ ಸಮಿತಿ ಸದಸ್ಯ ಪಿ.ರಾಮಚಂದ್ರ ಪುಣಿಂಚತ್ತಾಯ ಕವನ ರೂಪದ ಸಾಲುಗಳ ಮೂಲಕ ವಂದಿಸಿದರು. ಚಿತ್ರಕಲೆ, ಪುಸ್ತಕ ಪ್ರದರ್ಶನ ಸಮಿತಿ ಸದಸ್ಯ ವೆಂಕಟ ಭಟ್‌ ಎಡನೀರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯ ನಾದ ಮಾಧುರ್ಯದ ವಿದ್ವನ್ಮಣಿಗಳಾದ ಕಲ್ಮಾಡಿ ಸದಾಶಿವ ಆಚಾರ್ಯ, ರಾಧಾ ಮುರಳೀಧರ್‌, ಉಷಾ ಈಶ್ವರ ಭಟ್‌, ಯೋಗೀಶ ಶರ್ಮಾ ಬಳ್ಳಪದವು ರಿಂದ ಸಂಗೀತ ಸಂಭ್ರಮ ಪ್ರಸ್ತುತಗೊಂಡಿತು. 

Advertisement

ಪಕ್ಕವಾದ್ಯದಲ್ಲಿ ಡಾ| ಶಂಕರರಾಜ್‌ ಕಾಸರಗೋಡು (ಮೃದಂಗ), ಪ್ರಭಾಕರ ಕುಂಜಾರು (ವಯಲಿನ್‌), ಕೆ.ಶ್ರೀಧರ ರೈ (ತಬಲ), ಈಶ್ವರ ಭಟ್‌ ವಿದ್ಯಾನಗರ (ಘಟಂ) ನಲ್ಲಿ ಸಹಕರಿಸಿದರು. ಕಾರ್ಯಕ್ರಮ ಸಂಯೋಜನಾ ಸಮಿತಿ ಸದಸ್ಯ ಬಾಲಸುಬ್ರಹ್ಮಣ್ಯ ಕೋಳಿಕ್ಕಜೆ ಕಾರ್ಯಕ್ರಮ ನಿರ್ವಹಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನ : ಠರಾವು ಮಂಡನೆ, ನಿರ್ಣಯ ಅಂಗೀಕಾರ
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಎರಡು ದಿನಗಳ ಕಾಲ ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ ನಡೆದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ರವಿವಾರ ಸಂಜೆ ಸಮ್ಮೇಳನದ ಸರ್ವಾಧ್ಯಕ್ಷ  ಡಾ| ನಾ. ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ಜರಗಿತು. ಕನ್ನಡದ ಪ್ರಸಿದ್ಧ ವಿಮರ್ಶಕ, ಅಂಕಣಕಾರ ಎಸ್‌.ಆರ್‌. ವಿಜಯಶಂಕರ್‌ ಸಮಾರೋಪ ಭಾಷಣಗೈದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಮಾಜಿ ಅಧ್ಯಕ್ಷ ನ್ಯಾಯವಾದಿ ಐ.ವಿ. ಭಟ್‌ ಅವರು ಗಣ್ಯರು ಹಾಗೂ ಕನ್ನಡಾಭಿಮಾನಿಗಳ ಉಪಸ್ಥಿತಿಯಲ್ಲಿ ಠರಾವು ಮಂಡಿಸಿ ಬಳಿಕ ಈ ಕೆಳಗಿನ ನಿರ್ಣಯಗಳನ್ನು ಅಂಗೀಕರಿಸಿತು.

– ಕೇರಳ ರಾಜ್ಯ ಸರಕಾರದ ಮಲೆಯಾಳ ಹೇರಿಕೆಯ ನೀತಿಯಿಂದ ಕಾಸರಗೋಡಿನ ಬಹುಭಾಷೆ ಹಾಗೂ ಸಂಸ್ಕೃತಿಗಳಿಗೆ ಅಪಾಯವಿರುವುದರಿಂದ ಕೇಂದ್ರ ಸರಕಾರವು ಕೂಡಲೇ ಮಹಾಜನ ವರದಿಯನ್ನು ಜಾರಿಗೊಳಿಸಿ ಕಾಸರಗೋಡನ್ನು ಕರ್ನಾಟಕದಲ್ಲಿ ವಿಲೀನಗೊಳಿಸಬೇಕು.

– ಕೇರಳ ಸರಕಾರದಿಂದಲೇ ಭಾಷಾ ಅಲ್ಪಸಂಖ್ಯಾಕ ಕನ್ನಡ ಪ್ರದೇಶವೆಂದು ಅಂಗೀಕೃತಗೊಂಡ  ಕಾಸರಗೋಡು ತಾಲೂಕಿನಲ್ಲಿರುವ ಎಲ್ಲ ಕೇಂದ್ರ ಸರಕಾರಿ ಕಚೇರಿಗಳಲ್ಲಿ ರಾಜ್ಯಭಾಷೆ ಮಲೆಯಾಳದೊಂದಿಗೆ ಸ್ಥಳೀಯ ಭಾಷೆಯಾದ ಕನ್ನಡವನ್ನೂ ಅಧಿಕೃತ ಪ್ರಾದೇಶಿಕ ಭಾಷೆಯನ್ನಾಗಿ ಪರಿಗಣಿಸಿ ಕೇಂದ್ರ ಸರಕಾರವು ಆದೇಶ ಹೊರಡಿಸಬೇಕು.

– ಭಾಷೆಗಳನ್ನು ಕಲಿಯುವುದು ಪರಸ್ಪರ ಪ್ರೀತಿ – ವಿಶ್ವಾಸದಿಂದ   ನಡೆಯಬೇಕೇ ಹೊರತು ಒತ್ತಾಯ ದಿಂದಲೋ ಒತ್ತಡದಿಂದಲೋ ಅಲ್ಲ. ಆದುದರಿಂದ ಕೇರಳ ಸರಕಾರವು ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾಕರ ಮೇಲೆ ಶಿಕ್ಷಣ, ಆಡಳಿತ ಸಹಿತ ಎಲ್ಲ ರಂಗಗಳಲ್ಲೂ ಮಲೆಯಾಳವನ್ನು ಕಡ್ಡಾಯವಾಗಿ ಹೇರುವುದನ್ನು ಕೈಬಿಡಬೇಕು.

– ಕೇರಳ ರಾಜ್ಯಸರಕಾರವು ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಕಾಸರಗೋಡು ತಾಲೂಕಿನಲ್ಲಿ ಎಲ್ಲ ಸಾರ್ವಜನಿಕ ಮಾಹಿತಿಗಳನ್ನು ಅಧಿಕೃತ ಅಲ್ಪಸಂಖ್ಯಾಕ ಭಾಷೆಯಾದ ಕನ್ನಡದಲ್ಲೂ ಒದಗಿಸಬೇಕು.

– ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾಕರಿಗೆ ಶಿಕ್ಷಣ ಹಾಗೂ ಉದ್ಯೋಗ ರಂಗಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸಲು ಕ್ರಮಗಳನ್ನು ಕೈಗೊಳ್ಳಬೇಕು.

– ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಮಂಜೂರು ಮಾಡಬೇಕು.

– ಕಾಸರಗೋಡು ತಾಲೂಕಿನಿಂದ ಬೇರ್ಪಡಿಸಿ ನೂತನವಾಗಿ ರಚಿಸಲಾದ ಮಂಜೇಶ್ವರ ತಾಲೂಕನ್ನೂ ಕನ್ನಡ ಭಾಷಾ ಅಲ್ಪಸಂಖ್ಯಾಕ ಪ್ರದೇಶವೆಂದು ಕೂಡಲೇ ಘೋಷಿಸಬೇಕು ಎಂಬ ಬೇಡಿಕೆ ಸಲ್ಲಿಸಲು ತೀರ್ಮಾನಿಸಲಾಯಿತು.

ಸಮಾರೋಪ ಸಮಾರಂಭದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಭೂಮಿಕಾ ಪ್ರತಿಷ್ಠಾನದ ವಿದುಷಿ ಅನುಪಮಾ ರಾಘವೇಂದ್ರ ಉಡುಪಮೂಲೆಯವರ ಶಿಷ್ಯವೃಂದದವರಿಂದ ನೃತ್ಯ ಸಿಂಚನ ಪ್ರದರ್ಶನಗೊಂಡಿತು. ಬಳಿಕ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಮಹಿಷಾಸುರ ವಧೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಡಾ| ಶಿವಕುಮಾರ ಅಡ್ಕ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next