Advertisement

ಸವಾರಿ ಹಿಂದಿನ ರೂವಾರಿ

09:38 PM Jun 27, 2019 | mahesh |

“ನನಗೆ  ಕೆ. ಸದಾಶಿವ ಅವರ ಕೃತಿಯನ್ನು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಅದೀಗ ಈಡೇರಿದೆ…’

Advertisement

– ಹೀಗೆ ನಗುಮೊಗದಿಂದಲೇ ಹೇಳುತ್ತಾ ಹೋದರು ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ. ಅವರು ಹೇಳಿದ್ದು “ರಾಮನ ಸವಾರಿ’ ಚಿತ್ರದ ಬಗ್ಗೆ. ಹೌದು, ಇದು ಕಥೆಗಾರ ಕೆ.ಸದಾಶಿವ ಅವರ “ರಾಮನ ಸವಾರಿ ಸಂತೆಗೆ ಹೋದದ್ದು’ ಕಥೆ ಆಧರಿಸಿದ ಚಿತ್ರ. ಇತ್ತೀಚೆಗೆ ಏರ್ಪಡಿಸಿದ್ದ ಪೂರ್ವಭಾವಿ ಪ್ರದರ್ಶನ ಬಳಿಕ ಗಿರೀಶ್‌ ಕಾಸರವಳ್ಳಿ ಸಿನಿಮಾ ಕುರಿತು ಮಾತಿಗಿಳಿದರು. “ಒಮ್ಮೆ ಯು.ಆರ್‌.ಅನಂತಮೂರ್ತಿ ಅವರು, ಏ ನೋಡಯ್ಯ ಕೆ.ಸದಾಶಿವ ಅವರ ಕಥೆಯೊಂದಿದೆ. ಅದನ್ನು ಸಿನಿಮಾ ಮಾಡಬಹುದು ಅಂದಿದ್ದರು. ನನಗೂ ಅದೇ ಆಸೆ ಇತ್ತು. ನಾನೂ ಸಹ ಚಿತ್ರ ಮಾಡುವ ಉತ್ಸಾಹದಲ್ಲಿ ಚಿತ್ರಕಥೆ ರೆಡಿ ಮಾಡಿದ್ದೆ. ಆದರೆ, ಸಿನಿಮಾ ಆಗಲಿಲ್ಲ. ಒಮ್ಮೆ ನಿರ್ದೇಶಕ ಕೆ.ಶಿವರುದ್ರಯ್ಯ ಬಂದು, “ಸರ್‌, ಕೆ.ಸದಾಶಿವ ಅವರ “ರಾಮನ ಸವಾರಿ ಸಂತೆಗೆ ಹೋದದ್ದು’ ಕಥೆ ಇಟ್ಟುಕೊಂಡು ಸಿನಿಮಾ ಮಾಡ್ತೀನಿ’ ಅಂದರು. ಆಗ ಖುಷಿಯಿಂದಲೇ ಮಾಡಿ, ಅಂದೆ. ನೀವು ಸಂಭಾಷಣೆ ಬರೆದುಕೊಡಿ ಅಂದರು. ನನಗೆ ಈ ಚಿತ್ರಕ್ಕೆ ಚಿತ್ರಕಥೆ, ಮಾತುಗಳನ್ನು ಬರೆಯಲು ಅವಕಾಶ ಸಿಕ್ಕಿತು. ನಾನೂ ಈ ಚಿತ್ರತಂಡದ ಸದಸ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಪ್ರಕೃತಿ ಇಲ್ಲಿ ಆಕರ್ಷಣೆಯಾಗಿದೆ. ಪಾತ್ರಗಳು, ಆ ಬಾಲನಟನ ಅಭಿನಯ ಎಲ್ಲವೂ ಪೂರಕವಾಗಿವೆ’ ಎಂಬುದು ಗಿರೀಶ್‌ ಕಾಸರವಳ್ಳಿ ಅವರ ಮಾತು.

ಅಂದು “ರಾಮನ ಸವಾರಿ’ ಚಿತ್ರ ವೀಕ್ಷಿಸಿದ ರಂಗಕರ್ಮಿ ಜಿ.ಎಸ್‌.ಕಪ್ಪಣ್ಣ ಕೂಡ, “ಇಡೀ ಚಿತ್ರ ಸಹಜವಾಗಿ ಮೂಡಿಬಂದಿದೆ. ಶಿವರುದ್ರಯ್ಯ ಒಳ್ಳೆಯ ಛಾಯಾಗ್ರಾಹಕರು. ಹಾಗಾಗಿ ಚಿತ್ರದ ಒಂದೊಂದು ದೃಶ್ಯಗಳು ಅದ್ಭುತವಾಗಿವೆ. ಹೀರೋ, ವಿಲನ್‌, ಹೊಡಿಬಡಿಕಡಿ ಸಿನಿಮಾಗಳ ನಡುವೆ ಈ ಚಿತ್ರ ಮನಸ್ಸಿಗೆ ನೆಮ್ಮದಿ ಕೊಡುವಂತಹ ಕಥಾಹಂದರ ಹೊಂದಿದೆ. ಇಂತಹ ಚಿತ್ರಗಳು ಕನ್ನಡದಲ್ಲಿ ಹೆಚ್ಚೆಚ್ಚು ಬರಬೇಕು ‘ಎಂದರು ಕಪ್ಪಣ್ಣ.

ಚಿತ್ರದಲ್ಲಿ ಅಜ್ಜಿ ಪಾತ್ರ ನಿರ್ವಹಿಸಿರುವ ಭಾರ್ಗವಿ ನಾರಾಯಣ್‌, “ಇಲ್ಲಿ ಸೂಕ್ಷ್ಮ ವಿಷಯಗಳನ್ನು ಚೆನ್ನಾಗಿ ತೋರಿಸಲಾಗಿದೆ. ಮಗುವಿನ ಮುಗ್ಧತೆ, ಹೆತ್ತವರ ಹಠಮಾರಿತನ, ಪರಿಸ್ಥಿತಿಗಳನ್ನು ನಾಟುವಂತೆ ತೋರಿಸಿದ್ದಾರೆ. ಇಲ್ಲಿ ಯಾವುದನ್ನೂ ದೂರುವಂತಿಲ್ಲ. ಎಲ್ಲವೂ ಅಚ್ಚುಕಟ್ಟಾಗಿ ಬಂದಿದೆ. ನಾನೂ ಇಲ್ಲಿ ನಟಿಸಿದ್ದೇನೆ ಎಂಬುದು ಖುಷಿಯ ಸಂಗತಿ ‘ ಎಂದರು.

ನಿರ್ದೇಶಕ ಕೆ. ಶಿವರುದ್ರಯ್ಯ ಅವರಿಗೆ ಒಂದೊಳ್ಳೆಯ ಚಿತ್ರ ಮಾಡಿದ ಖುಷಿ. ಆ ಬಗ್ಗೆ ಹೇಳುವ ಅವರು, “ಇದು ಮಕ್ಕಳ ಚಿತ್ರ. 2006 ರಲ್ಲೇ ಈ ಚಿತ್ರ ಮಾಡಬೇಕಿತ್ತು. ಆಗಲಿಲ್ಲ.

Advertisement

ನಿರ್ಮಾಪಕ ಜೋಸೆಫ್ ಫೈಸ್‌ ಒಳ್ಳೆಯ ಕಥೆ ಇಟ್ಟುಕೊಂಡು ಚಿತ್ರ ಮಾಡಬೇಕೆಂದು
ನಿರ್ಧರಿಸಿದ್ದರಿಂದ ಇದು ಸಾಧ್ಯವಾಗಿದೆ. ಕಥೆ ಬಗ್ಗೆ ಹೇಳುವುದಾದರೆ, ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಗೆ ಹತ್ತಿರವಾದಂತಹ ಕಥೆಯ ಚಿತ್ರಣ ಇಲ್ಲಿದೆ. ಇದು ಮಲೆನಾಡ ಭಾಗದ ಕಥೆಯಾದ್ದರಿಂದ ಬಹುತೇಕ ಹೊಸನಗರ, ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣಗೊಂಡಿದೆ. 1964, 1974 ರ ಕಾಲಘಟ್ಟದ ಕಥೆ ಇಲ್ಲಿ ಹೇಳಲಾಗಿದೆ ‘ ಎಂದು ವಿವರ ಕೊಡುತ್ತಾರೆ ಅವರು.

ಚಿತ್ರದಲ್ಲಿ ಸೋನುಗೌಡ, ರಾಜೇಶ್‌ ನಟರಂಗ, ಸುಧಾ ಬೆಳವಾಡಿ, ಬಾಲನಟ ಆರೋನ್‌, ಅಹನ್‌ ಸುತಿ, ಶೃಂಗೇರಿ ರಾಮಣ್ಣ, ವಿಜಯ್‌ಕುಮಾರ್‌, ಗುಂಡುರಾಜ್‌ ಮುರಳಿ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಕೆ.ಕಲ್ಯಾಣ್‌ ಅವರ ಸಂಗೀತವಿದೆ. ವಿಶ್ವನಾಥ್‌ ಛಾಯಾಗ್ರಹಣವಿದೆ.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next