Advertisement

ಆಟವಾಡಲು ಹೋದ ವಿದ್ಯಾರ್ಥಿ ಶಾಲಾ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

09:11 PM Mar 08, 2023 | Team Udayavani |

ಕಾಸರಗೋಡು: ಆಟಕ್ಕೆಂದು ಮನೆಯಿಂದ ಹೊರ ಹೋಗಿದ್ದ ವಿದ್ಯಾರ್ಥಿಯ ಮೃತದೇಹ ಶಾಲೆಯ ಹಿಂಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಡಂಗುಳಿಗೆ ಸಮೀಪದ ಪೇರಳದ ವಿನೋದ್‌ ಅವರ ಪುತ್ರ, ಕುಂಡಂಗುಳಿ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಪ್ಲಸ್‌ ವನ್‌ ವಿದ್ಯಾರ್ಥಿ ಅಭಿನವ್‌(17) ಅವರ ಮೃತ ದೇಹ ಪತ್ತೆಯಾಗಿದೆ.
ಮಾ.7 ರಂದು ಸಂಜೆ ಶಾಲೆ ಬಿಟ್ಟು ಮನೆಗೆ ಬಂದ ಅಭಿನವ್‌ ಆಟವಾಡಲೆಂದು ಮನೆಯಿಂದ ಹೊರ ಹೋಗಿದ್ದನು. ತಡವಾದರೂ ಮನೆಗೆ ಹಿಂತಿರುಗದೇ ಇರುವುದನ್ನು ಗಮನಿಸಿದ ಮನೆಯವರು ಆತನಿಗಾಗಿ ಹುಡುಕಾಟ ನಡೆಸಿದಾಗ ರಾತ್ರಿ 8 ಗಂಟೆಗೆ ಅಲ್ಲೇ ಪಕ್ಕದ ಎಲ್‌.ಪಿ. ಶಾಲೆಯ ಹಿಂದುಗಡೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
**
ಕೊಲೆ ಪ್ರಕರಣ : ಇನ್ನೋರ್ವನ ಬಂಧನ
ಮಂಜೇಶ್ವರ: ಸೀತಾಂಗೋಳಿ ಮುಗು ನಿವಾಸಿ ಗಲ್ಫ್ ಉದ್ಯೋಗಿಯಾಗಿದ್ದ ಅಬೂಬಕ್ಕರ್‌ ಸಿದ್ದಿಕ್‌ (22) ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಉದ್ಯಾವರ ಸೆಕೆಂಡ್‌ ರೈಲ್ವೇ ಗೇಟ್‌ ಬಳಿಯ ನಿವಾಸಿ ಹಾಗು ಈಗ ಕಾಯರ್‌ಕಟ್ಟೆಯ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಮೊಹಮ್ಮದ್‌ ನಿಯಾಸ್‌(35) ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಬಂಧಿತರ ಸಂಖ್ಯೆ 11 ಕ್ಕೇರಿದೆ. 2022 ಜೂನ್‌ 26 ರಂದು ಅಪಹರಿಸಿ ಪೈವಳಿಕೆ ಬಳಿಯ ನಿರ್ಜನ ಪ್ರದೇಶಕ್ಕೊಯ್ದು ಅಲ್ಲಿ ಕಟ್ಟಿ ಹಾಕಿ ಹೊಡೆದು ಕೊಲೆ ಮಾಡಲಾಗಿತ್ತೆಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
**
ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಬಂಧನ
ಕಾಸರಗೋಡು: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 500 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ ಕಾಸರಗೋಡು ಅಬಕಾರಿ ಎನ್‌ಫೋರ್ಸ್‌ಮೆಂಟ್‌ ಆ್ಯಂಡ್‌ ಆ್ಯಂಟಿ ನಾರ್ಕೋಟಿಕ್‌ ಸ್ಪೆಷಲ್‌ ಸ್ಕ್ವಾಡ್ ಕಲ್ಲಿಕೋಟೆ ಜಿಲ್ಲೆಯ ಕೊಲಾಂಡಿ ತಾಲೂಕಿನ ಇರಿಂಙಲ್‌ ಕೋಟೆಕ್ಕಲ್‌ ಅಶಾìದ್‌ ಮಂಜಿಲ್‌ನ ಸಿದ್ದಿಕ್‌ ಇ.ಎಂ(31)ನನ್ನು ಬಂಧಿಸಿದೆ. ಗಾಂಜಾ ಸಾಗಿಸುತ್ತಿದ್ದ ಸ್ಕೂಟರನ್ನು ವಶಪಡಿಸಿದೆ.
**
ಕೊಲೆ ಬೆದರಿಕೆ : ಮಹಿಳೆಯ ದೂರು
ಕಾಸರಗೋಡು: ಪತಿ ದೌರ್ಜನ್ಯವೆಸಗುತ್ತಿರುವುದಾಗಿ ಮಹಿಳಾ ಸೆಲ್‌ಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪತಿ ಹಾಗು ಸಂಬಂಧಿಕ ಮನೆಗೆ ನುಗ್ಗಿ ಹಲ್ಲೆಗೈದು ಕೊಲೆ ಬೆದರಿಕೆಯೊಡ್ಡಿರುವುದಾಗಿ ಜಿಲ್ಲಾ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಮನೆಯಿಂದ ಹೊರ ಹೋಗದಿದ್ದರೆ ತನ್ನನ್ನು ಹಾಗು 16, 14 ವರ್ಷ ಪ್ರಾಯದ ಇಬ್ಬರು ಮಕ್ಕಳನ್ನು ಮನೆಯೊಳಗೆ ಸುಟ್ಟು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ ಬಳಿಕ ಮನೆ ಸಾಮಗ್ರಿಗಳನ್ನು ಹಾನಿಗೊಳಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಜೀವ ಕೈಯಲ್ಲಿ ಹಿಡಿದು ಚೆಂಗಳದಲ್ಲಿ ತಾಯಿಯ ಮನೆಯಲ್ಲಿ ಕಳೆಯುತ್ತಿರುವ ತನ್ನನ್ನು ಪತಿ ಹಾಗು ತಂಡ ಕೊಲೆಗೈಯ್ಯಲು ಸಾಧ್ಯತೆಯಿದೆ ಎಂದು ಉಳಿಯತ್ತಡ್ಕದಲ್ಲಿ ಈ ಹಿಂದೆ ವಾಸಿಸುತ್ತಿದ್ದ ಎಂ.ಕೆ.ಫಾತಿಮತ್‌ ರಸೀನ ದೂರಿದ್ದಾರೆ. ಪತಿ ಫಿರೋಜ್‌ ಹಾಗು ಸಂಬಂಧಿಕ ಸೆಲಿ ಜೊತೆಗೂಡಿ ಕೊಲೆ ಬೆದರಿಕೆ ಒಡ್ಡಿರುವುದಾಗಿ ದೂರು ನೀಡಲಾಗಿದೆ.
**
ಗುತ್ತಿಗೆದಾರನ ಕೊಲೆ : ಮೂವರ ಬಂಧನ
ಕಾಸರಗೋಡು: ಒಂದು ವರ್ಷದ ಹಿಂದೆ ಚೆರ್ಕಳ ಬೇರ್ಕದ ಯುವ ಗುತ್ತಿಗೆದಾರ ಪೆರ್ಲಂ ಅಶ್ರಫ್‌ ಅವರನ್ನು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಚೆರ್ಕಳ ಬೇರ್ಕದ ಪುನತ್ತಿಲ್‌ ಅಶ್ರಫ್‌, ಅನ್ವರ್‌ ಪಳ್ಳತ್ತಡ್ಕ ಮತ್ತು ಕೆ.ಕೆ.ಚೇರೂರಿನ ರಫೀಕ್‌ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಚೆರ್ಕಳ ಬೇರ್ಕದ ಬಾವಾ ಬಷೀರ್‌ ಯಾನೆ ಪಾರ ಬಷೀರ್‌ ಸೂಚನೆಗೆ ಮೇರೆಗೆ 2,50,000 ರೂ. ಆರೋಪಿಗಳು ಕೊಟೇಶನ್‌ ಪಡೆದು ಅಶ್ರಫ್‌ನನ್ನು ಕೊಲೆಗೈಯ್ಯಲೆತ್ನಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
**
ವರದಕ್ಷಿಣೆ ದೌರ್ಜನ್ಯ : ಕೇಸು ದಾಖಲು
ಕುಂಬಳೆ: ವರದಕ್ಷಿಣೆ ಪ್ರಕರಣದಲ್ಲಿ ಉಡುಪಿ ನಿವಾಸಿಯಾದ 26 ರ ಹರೆಯದ ಮಹಿಳೆ ನೀಡಿದ ದೂರಿನಂತೆ ಮಂಗಲ್ಪಾಡಿ ಪುಳಿಕುತ್ತಿ ನಿವಾಸಿಯಾದ ಪತಿ ಹಾಗು ಸಂಬಂಧಿಕರ ವಿರುದ್ಧ ಉಡುಪಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಪ್ರಕರಣವನ್ನು ಉಡುಪಿ ಪೊಲೀಸರು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಉಡುಪಿಯ ಜಾಗಿರ್‌ ಹುಸೈನ್‌ ಅವರ ಪುತ್ರಿ ಸೆಮಿನ ಬಾನು(26) ನೀಡಿದ ದೂರಿನಂತೆ ಪತಿ ಪುಳಿಕುತ್ತಿಯ ಮುಹಮ್ಮದ್‌ ಖುರೇಸಿ, ಪತಿಯ ತಂದೆ ಮುಹಮ್ಮದ್‌, ತಾಯಿ ಮುಂತಾಸ್‌, ಸಂಬಂಧಿಕರಾದ ಅಹಮ್ಮದ್‌ ಅರಾಫತ್‌, ಅರ್ಷಾದ್‌ ವಿರುದ್ಧ ಕೇಸು ದಾಖಲಿಸಲಾಗಿದೆ.
**
ನಕಲಿ ಚಿನ್ನಾಭರಣ ವಂಚನೆ : ಕೇಸು ದಾಖಲು
ಕಾಸರಗೋಡು: ಗ್ರಾಮೀಣ ಬ್ಯಾಂಕ್‌ ಮೇಲ್ಪರಂಬದ ಶಾಖೆಯಲ್ಲಿ ಮತ್ತೆ ನಕಲಿ ಚಿನ್ನಾಭರಣವನ್ನಿರಿಸಿ ವಂಚಿಸಿದ ಘಟನೆ ನಡೆದಿದೆ. ಬ್ಯಾಂಕ್‌ ಮೆನೇಜರ್‌ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ.

204.25 ಗ್ರಾಂ ತೂಕದ ಎರಡು ಚಿನ್ನದ ಬಿಲ್ಲೆಗಳನ್ನು ಅಡವಿರಿಸಿ ಸುಮಾರು 7 ಲಕ್ಷದಷ್ಟು ರೂ. ಸಾಲ ಪಡೆದು ವಂಚಿಸಿರುವುದಾಗಿ ಚೆಂಗಳ, ಚೇರೂರಿನ ಮೊಹಮ್ಮದ್‌ ಯಾಕೂಬ್‌ ವಿರುದ್ಧ ಕೇಸು ದಾಖಲಿಸಲಾಗಿದೆ. ಎರಡು ತಿಂಗಳೊಳಗೆ ಇಲ್ಲಿ ಎರಡನೇ ಬಾರಿ ನಕಲಿ ಚಿನ್ನಾಭರಣವಿರಿಸಿ ವಂಚನೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next