Advertisement

ಕಾಸರಗೋಡಿನವರ ಕನ್ನಡ ಪ್ರೇಮ ಅನನ್ಯ

09:10 AM Oct 23, 2017 | |

ಕುಂಬಳೆ: ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಹೆಚ್ಚು ಕಲಿಯುವಂತಾಗಬೇಕು. ಸವಾಲುಗಳ ನಡುವೆಯೂ ಕಾಸರಗೋಡಿನವರ ಕನ್ನಡ ಭಾಷಾ ಪ್ರೇಮ ಅನನ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್‌.ಜಿ. ಸಿದ್ಧರಾಮಯ್ಯ ಹೇಳಿದರು.

Advertisement

ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇರಳ ಹಾಗೂ ಗೋವಾ ರಾಜ್ಯಗಳ ವಿದ್ಯಾರ್ಥಿಗಳಿಗೆ ರವಿವಾರ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಹಮ್ಮಿಕೊಂಡ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕದೊಳಗಿನ ಕನ್ನಡಿಗರ ಜತೆಗೆ ಹೊರನಾಡಿನ, ಗಡಿನಾಡಿನ ಕನ್ನಡಿಗರ ಸಮಗ್ರ ಶ್ರೇಯೋಭಿವೃದ್ಧಿಗೆ ಕಳಕಳಿಯ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಹೊರರಾಜ್ಯದ ಕನ್ನಡ ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಳೆದ 6 ವರ್ಷಗಳಿಂದ ಗುರುತಿಸಿ, ಗೌರವಿಸುತ್ತಿದೆ ಎಂದು ಅವರು ಹೇಳಿದರು. ಮಂಜೇಶ್ವರ ಶಾಸಕ ಪಿ.ಬಿ. ಅಬ್ದುಲ್‌ ರಝಾಕ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾಸರಗೋಡು ಮೇಲ್ಪಂಕ್ತಿ: ವಿಶೇಷ ಅತಿಥಿಯಾದ್ದ ಸಾಹಿತಿ ಡಾ| ಸಿದ್ಧಲಿಂಗಯ್ಯ ಮಾತನಾಡಿ, ಸರಕಾರದ ನೆರವು ಪಡೆಯದೆ ಕಾಸರ ಗೋಡಿ ನಲ್ಲಿ ನಿರಂತರವಾಗಿ ನಡೆಯುತ್ತಿರುವ ಕನ್ನಡ ಸೇವೆ ಹೆಚ್ಚು ಮಹತ್ವಪೂರ್ಣವಾದುದು. ಈ ಕಾರಣದಿಂದ ಕನ್ನಡದ್ದೇ ಗಟ್ಟಿ ಉಸಿರಿರುವ ಕಾಸರಗೋಡು ಬೆಂಗಳೂರಿಗಿಂತ ಹೆಚ್ಚು ಕರ್ನಾಟಕ ವಾಗಿ ಇಂದು ಮಹತ್ವ ಪಡೆದಿದೆ. ಕನ್ನಡ ಭಾಷೆ, ಸಂಸ್ಕೃತಿಗೆ ಇಲ್ಲಿ ಆಗಾಗ ಎದು ರಾಗುವ ಸವಾಲುಗಳನ್ನು ಏಕಕಂಠದ ಹೋರಾಟದ ಮೂಲಕ ಎದುರಿಸಿ ಕನ್ನಡದ ಅಸ್ಮಿತೆಯನ್ನು ಉಳಿಸಲು ಇತರೆಡೆ ಗಳಿಗೆ ಕಾಸರಗೋಡು ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ಶ್ಲಾಘಿಸಿದರು.

ಶುದ್ಧ ಕನ್ನಡಕ್ಕೆ ಯಕ್ಷಗಾನದ ಕೊಡುಗೆ: ಕಾಸರಗೋಡಿನ ಮಹಾನ್‌ ಕಲೆ ಯಾಗಿರುವ ಯಕ್ಷಗಾನವು ಶುದ್ಧ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಶ್ಲಾ ಸಿದ ಅವರು, ಆಧುನಿಕ ಸವಾಲುಗಳ ನಡುವೆಯೂ ಕನ್ನಡ
ವನ್ನು ಇನ್ನಷ್ಟು ಪ್ರಬಲಗೊಳಿಸುವ ಕಾರ್ಯ ಚಟುವಟಿಕೆಗಳು ನಿರಂತರ ನಡೆಯುತ್ತಿರಲಿ ಎಂದು ಅವರು ಹಾರೈಸಿದರು.

ಗಡಿನಾಡು ಕಾಸರಗೋಡಿನ 75 ಹಾಗೂ ಗೋವಾದ 6 ಹೀಗೆ ಒಟ್ಟು 81 ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ನಗದು ಪುರಸ್ಕಾರ ಸಹಿತ ಅಭಿನಂದನಾ ಪತ್ರಗಳನ್ನು ಉದುಮ ಶಾಸಕ ಕುಂಞಿರಾಮನ್‌ ಪ್ರದಾನ ಮಾಡಿದರು.

Advertisement

ಜಿಲ್ಲಾಧಿಕಾರಿ ಕೆ. ಜೀವನ್‌ ಬಾಬು, ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷ ಎ.ಕೆ.ಎಂ. ಅಶ್ರಫ್‌, ಮೀಂಜ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶಂಶಾದ್‌ ಶುಕೂರ್‌, ಜಿಲ್ಲಾ ಉಪಶಿಕ್ಷಣಾಧಿಕಾರಿ ನಂದಿಕೇಶನ್‌, ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಡಿ. ಸದಾಶಿವ ರಾವ್‌, ಕೇರಳ ಸರಕಾರದ ಪಾರ್ತಿಸುಬ್ಬ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಕರ್ನಾಟಕ ಕೊಂಕಣಿ ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು ಕುಂಬಳೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರತ್ನಾಕರ ಶೆಟ್ಟಿ, ಸಿ.ಎಫ್‌. ನಾಯ್ಕ, ಮೀಯಪದವು ವಿದ್ಯಾವರ್ಧಕ ಶಾಲಾ ಸಂಚಾಲಕ ಡಾ| ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಪ್ರೊ| ಎ. ಶ್ರೀನಾಥ್‌, ಎಂ. ಉಮೇಶ ಸಾಲ್ಯಾನ್‌ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಕೆ. ಮುರಳೀಧರ ಪ್ರಸ್ತಾವನೆಗೈದರು. ಟಿ.ಡಿ. ಸದಾಶಿವ ರಾವ್‌ ವಂದಿಸಿದರು. ಗೋ.ನಾ. ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮೊದಲು ವಿವಿಧ ತಂಡಗಳು ಪ್ರಸ್ತುತಪಡಿಸಿದ ಗೀತಗಾಯನ, ನೃತ್ಯ ಕಾರ್ಯಕ್ರಮ ಜನಮನ ರಂಜಿಸಿತು.

ಚಿತ್ರ: ಅಲಂಕಾರ್‌ ಮೀಯಪದವ

Advertisement

Udayavani is now on Telegram. Click here to join our channel and stay updated with the latest news.

Next