Advertisement

Kasaragod: ಬಗೆದಷ್ಟು ಆಳವಾಗಿದೆ ಅಮಲು ಪದಾರ್ಥ ಜಾಲ

11:38 PM Sep 24, 2024 | Team Udayavani |

ಕಾಸರಗೋಡು: ಉಪ್ಪಳ ಸಮೀಪದ ಮುಳಿಯ ಪತ್ವಾಡಿಯ ಮನೆಯೊಂದರಿಂದ ಸೆ. 20ರಂದು 3.407 ಕಿಲೋ ಎಂಡಿಎಂಎ ಮೊದಲಾದ ಅಮಲು ಪದಾರ್ಥ ವಶಪಡಿಸಿಕೊಂಡ ಪ್ರಕರಣದ ಮುಖ್ಯ ಸೂತ್ರಧಾರನ ಬಗ್ಗೆ ಗುರುತು ಪತ್ತೆ ಹಚ್ಚಿದ್ದು, ಈತ ಮಂಜೇಶ್ವರ ವ್ಯಕ್ತಿಯೆಂಬುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

Advertisement

ಇಲ್ಲಿಂದ ವಶಪಡಿಸಿದುದಕ್ಕಿಂದಲೂ ಇಮ್ಮಡಿಗೂ ಅಧಿಕ ಮಾದಕ ದ್ರವ್ಯ ವ್ಯವಹಾರ ನಡೆದಿದೆ ಎಂದು ಮಾಹಿತಿ ಲಭಿಸಿದೆ. ಅಮಲು ಪದಾರ್ಥ ವ್ಯವಹಾರದಲ್ಲಿ ಕೇರಳ-ಕರ್ನಾಟಕ ಹಬ್‌ ಎಂದು ಶಂಕಿಸಲಾಗಿದೆ.

ಪತ್ವಾಡಿಯಿಂದ 3.407 ಕಿಲೋ ಎಂಡಿಎಂಎ, 642.65 ಗ್ರಾಂ ಗಾಂಜಾ, 96.65 ಗ್ರಾಂ ಕೊಕೈನ್‌ ಮತ್ತು 30 ಮಾದಕ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಸಂಬಂಧ ಬಂಧಿತ ಪತ್ವಾಡಿ ಅಲ್‌ ಫಲಾಹ್‌ ಮಂಜಿಲ್‌ನ ಅಸ್ಕರ್‌ ಅಲಿ(26)ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು, ಹೆಚ್ಚಿನ ಮಾಹಿತಿ ಪಡೆಯಲು ಈತನನ್ನು ವಶಕ್ಕೆ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

ಅಮಲು ಪದಾರ್ಥ ದಂಧೆಯಲ್ಲಿ ಉಪ್ಪಳ ಪರಿಸರದ ಇನ್ನೂ ಹಲವರು ಶಾಮೀಲಾಗಿದ್ದು, ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅಂತಹವರ ಬಗ್ಗೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ಪ್ರತ್ಯೇಕ ಮೊಬೈಲ್‌ ಆ್ಯಪ್‌
ಮಾದಕ ದ್ರವ್ಯ ಮಾರಾಟ ವ್ಯವಹಾರಕ್ಕಾಗಿ ಈ ಜಾಲ ಪ್ರತ್ಯೇಕ ಮೊಬೈಲ್‌ ಆ್ಯಪ್‌ ಅನ್ನು ತಯಾರಿಸಿದ್ದು, ಈ ಬಗ್ಗೆ ಮಾಹಿತಿ ಲಭಿಸಿದೆ. ಮಾದಕ ದ್ರವ್ಯ ಅಗತ್ಯವಿರುವವರು ಈ ಆ್ಯಪ್‌ ಮೂಲಕ ಸಂಪರ್ಕಿಸಿ ತರಿಸಿಕೊಳ್ಳುತ್ತಾರೆ. ಇದಕ್ಕಿರುವ ಹಣವನ್ನು ಗ್ರಾಹಕರು ಗೂಗಲ್‌ ಪೇ ಮಾಡುತ್ತಿದಾರೆ. ಮಾದಕ ದ್ರವ್ಯ ದಂಧೆಯ ಕುಣಿಕೆಯಲ್ಲಿ ಸಿಲುಕಿದ ಇಬ್ಬರು ಕೊಲ್ಲಿ ರಾಷ್ಟ್ರದಲ್ಲಿ ಜೈಲು ಸೇರಿರುವುದಾಗಿಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

Advertisement

ಉಪ್ಪಿನಕಾಯಿ ಡಬ್ಬದಲ್ಲಿ ಎಂಡಿಎಂಎ ಮಾದಕ ಸೊತ್ತು!
ಹಿದಾಯತ್‌ ನಗರ ನಿವಾಸಿ ಯಾಗಿರುವ ಯುವಕ ನೋರ್ವ ಒಂದು ತಿಂಗಳ ಹಿಂದೆ ಕೊಲ್ಲಿಗೆ ಹೋಗುವ ಸಂದರ್ಭದಲ್ಲಿ ಆತನ ಕೈಯಲ್ಲಿ ಓರ್ವರಿಗೆ ತಲುಪಿಸಲೆಂದು ನೀಡಲಾಗಿದ್ದ ಉಪ್ಪಿನಕಾಯಿ ಡಬ್ಬದಲ್ಲಿ ಆತನಿಗೆ ತಿಳಿಯದೆ ಬಚ್ಚಿಟ್ಟಿದ್ದ ಎಂಡಿಎಂಎಯನ್ನು ಕೊಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದರು. ಆಗ ಆತನಿಗೆ ತಾನು ವಂಚನೆಗೆ ಸಿಲುಕಿದ್ದ ವಿಷಯ ಗೊತ್ತಾಗಿತ್ತು. ಇದೇ ರೀತಿ ಉಪ್ಪಳದ ನಿವಾಸಿ ಯುವಕ ಕೂಡ ಇದೇ ಜಾಲಕ್ಕೆ ಸಿಲುಕಿ ಎರಡು ದಿನಗಳ ಹಿಂದೆ ಕತಾರ್‌ನಲ್ಲಿ ಬಂಧಿತನಾಗಿದ್ದಾನೆ.

ಆನ್‌ಲೈನ್‌ನಲ್ಲಿ ಲಕ್ಷಾಂತರ ರೂ. ವಹಿವಾಟು
ಆಗಸ್ಟ್‌ 30 ರಂದು ಮೇಲ್ಪರಂಬದಿಂದ 49.33 ಗ್ರಾಂ ಎಂಡಿಎಂಎ ಸಹಿತ ಅಬ್ದುಲ್‌ ರಹೀಂ ಯಾನೆ ಬಿ.ಇ.ರವಿ(28)ನನ್ನು ಬಂಧಿಸಲಾಗಿತ್ತು. ಈತ ಪ್ರತ್ಯೇಕ ಆ್ಯಪ್‌ ಬಳಸಿದ್ದಾಗಿಯೂ, ಭಾರೀ ಮೊತ್ತ ಬ್ಯಾಂಕ್‌ ಅಕೌಂಟ್‌ಗೆ ಜಮೆ ಮಾಡಿದ್ದಾಗಿಯೂ ತನಿಖೆಯಿಂದ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಣ ಕಳುಹಿಸಿದ ಅಕೌಂಟ್‌ನ ಫೋನ್‌ ನಂಬರ್‌ ಅಸ್ಕರ್‌ ಆಲಿದಾಗಿತ್ತು. ಅಕೌಂಟ್‌ ಇನ್ನೊಬ್ಬನ ಹೆಸರಿನಲ್ಲಿದೆ. ಆಗಸ್ಟ್‌ ತಿಂಗಳಲ್ಲಿ ಮಾತ್ರ 17 ಲಕ್ಷ ರೂ. ವ್ಯವಹಾರ ಅಸ್ಕರ್‌ ಅಲಿ ಅಕೌಂಟ್‌ ಮೂಲಕ ನಡೆದಿದೆ ಎಂದು ತಿಳಿಯಲಾಗಿದೆ. ಈತನ ಅಕೌಂಟ್‌ ಮಾಹಿತಿ ಹಾಗು ಆನ್‌ಲೈನ್‌ ವ್ಯವಹಾರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೂ ಸಂಬಂಧಿಸಿ ಅಸ್ಕರ್‌ ಅಲಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ.

ಬರೇ 30 ದಿನಗಳಲ್ಲಿ 136 ಪ್ರಕರಣ: ಎಸ್‌ಪಿ
ಅಮಲು ಪದಾರ್ಥ ಮಾರಾಟ ಹಾಗೂ ಬಳಕೆ ಸಂಬಂಧ ಕಳೆದ 30 ದಿನಗಳಲ್ಲಿ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ 136 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕಾಸರಗೋಡು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಶಿಲ್ಪಾ ತಿಳಿಸಿದ್ದಾರೆ. ಈ ಸಂಬಂಧ 140 ಮಂದಿಯನ್ನು ಬಂಧಿಸಲಾಗಿದೆ. ಆ. 23ರಿಂದ ಸೆ. 20ರ ವರೆಗಿನ ಅಂಕಿ ಅಂಶ ಇದಾಗಿದೆ. ಈ ಸಂಬಂಧ ಅತೀ ಹೆಚ್ಚು ಕೇಸುಗಳನ್ನು ದಾಖಲಿಸಿದ್ದು ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಾಗಿದೆ ಎಂದು ಎಸ್‌ಪಿ ಶಿಲ್ಪಾ ಡಿ. ತಿಳಿಸಿದ್ದಾರೆ.

ಅಮಲು ಪದಾರ್ಥ ದಂಧೆಗೆ ಸಂಬಂಧಿಸಿ ತನಿಖೆ ನಡೆಯುತ್ತಿರುವುದರಿಂದ ದಂಧೆಯಲ್ಲಿ ಶಾಮೀಲಾಗಿರುವ ವ್ಯಕ್ತಿಗಳ ಬಗ್ಗೆಯಾಗಲೀ, ಇತರ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next