ಕಾಸರಗೋಡು: ಕೋಲಾಹಲ ಸೃಷ್ಟಿಸಿದ ಕಾಸರಗೋಡು ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (28) ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.
2017ರ ಮಾರ್ಚ್ 20ರಂದು ರಾತ್ರಿ ಹಳೇ ಸೂರ್ಲಿನ ಬಳಿಯಿರುವ ಅವರ ಕೊಠಡಿಗೆ ನುಗ್ಗಿ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಕೇಳುಗುಡ್ಡೆ ಪರಿಸರ ನಿವಾಸಿ ನಿತಿನ್ (26), ಕೇಳುಗುಡ್ಡೆ ಗಂಗೆ ಕುಟೀರದ ಅಖೀಲೇಶ್ ಆಲಿಯಾಸ್ ಅಖೀಲ್ (32) ಮತ್ತು ಕೇಳುಗುಡ್ಡೆ ಅಯ್ಯಪ್ಪ ಭಜನ ಮಂದಿರ ಸಮೀಪದ ಅಜೇಶ್ ಆಲಿಯಾಸ್ ಅಪ್ಪು (27) ಆರೋಪಿಗಳಾಗಿದ್ದರು.
ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಶನ್ ಪರವಾಗಿ 97 ಮಂದಿಯ ಸಾಕ್ಷಿ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿತ್ತು. ಬಂಧಿತರಾದ ಮೂವರು ಆರೋಪಿಗಳಿಗೆ ಜಾಮೀನು ಲಭಿಸದೆ ಆರು ವರ್ಷಗಳಿಂದ ಜೈಲಿನಲ್ಲೇ ಕಳೆದಿದ್ದರು. ಜ್ಯುಡೀಷಿಯಲ್ ಕಸ್ಟಡಿಯಲ್ಲೇ ಅವರ ವಿಚಾರಣೆ ನಡೆಸಲಾಗಿತ್ತು.
ಅಂದು ಕಣ್ಣೂರು ಕ್ರೈಂ ಬ್ರಾಂಚ್ ಎಸ್‌ಪಿಯಾಗಿದ್ದ ಡಾ| ಎ. ಶ್ರೀನಿವಾಸ್ ನೇತೃತ್ವದ ವಿಶೇಷ ತನಿಖಾ ತಂಡ ಆರೋಪಿಗಳನ್ನು ಕೃತ್ಯ ನಡೆದ ಮೂರೇ ದಿನಗಳಲ್ಲಿ ಬಂಧಿಸಿತ್ತು. ಬಳಿಕ 88 ದಿನಗಳೊಳಗಾಗಿ ತನಿಖೆಯನ್ನು ಮುಗಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಆರೋಪಿಗಳು ಕೋಮು ಗಲಭೆ ಸೃಷ್ಟಿಸುವ ಉದ್ದೇಶ ಹೊಂದಿದ್ದರೆಂದು ಪೊಲೀಸರು ತಿಳಿಸಿದ್ದರು.
ಪ್ರಾಸಿಕ್ಯೂಷನ್ ಪರವಾಗಿ ಮೊದಲು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೋಯಿಕ್ಕೋಡ್‌ನ ಎಂ. ಅಶೋಕನ್ ವಾದಿಸಿದ್ದರು. ಆದರೆ ಅವರು ಇತ್ತೀಚೆಗೆ ನಿಧನ ಹೊಂದಿದ್ದ ಕಾರಣ ಅವರ ಸಹಾಯಕ ವಕೀಲ ಕೋಯಿಕ್ಕೋಡ್‌ನ ಟಿ. ಶಿಜಿತ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಾದ ಮುಂದುವರಿಸಿದ್ದರು. 2019ರಲ್ಲೇ ಪ್ರಕರಣದ ವಿಚಾರಣೆ ಆರಂಭಗೊಂಡಿದ್ದರೂ ವಿವಿಧ ಕಾರಣಗಳಿಂದಾಗಿ ಪದೇಪದೆ ಮುಂದೂಡಲ್ಪಟ್ಟಿತ್ತು. ಕೊಲೆಗೆ ಬಳಸಲಾದ ಆಯುಧಗಳು ಸಹಿತ 45ರಷ್ಟು ವಸ್ತು ಪುರಾವೆಗಳು ಸೇರಿದಂತೆ ಒಟ್ಟು 215 ಪುರಾವೆಗಳನ್ನು ತನಿಖಾ ತಂಡ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ ವೈಜ್ಞಾನಿಕ ಹಾಗೂ ಇತರ ಹಲವು ಪುರಾವೆಗಳೂ ಇದ್ದವು.
ಪೊಲೀಸ್ ಕಟ್ಟೆಚ್ಚರ:
ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ ಕೊಲೆ ಪ್ರಕರಣದ ತೀರ್ಪು ಘೋಷಣೆ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ರಜೆಯಲ್ಲಿರುವ ಎಲ್ಲ ಪೊಲೀಸರನ್ನು ಕರ್ತವ್ಯಕ್ಕೆ ಕರೆಸಿಕೊಳ್ಳಲಾಗಿದೆ. ಎಲ್ಲ ಸೂಕ್ಷ್ಮ ಸಂವೇದಿ ಪ್ರದೇಶಗಳಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.