ಉಪ್ಪಳ: ಕಳೆದ ಏಳು ತಿಂಗಳಿನಿಂದ ಮಲೇಷ್ಯಾದ ಜೈಲಿನಲ್ಲಿರುವ ಹೇರೂರು ಬದಿಯಾರು ನಿವಾಸಿ ಮಧುಸೂದನ ಶೆಟ್ಟಿ ಅವರ ಬಿಡುಗಡೆಗಾಗಿ ಪತ್ನಿ ಇಂದಿರಾವತಿ ಕೇಂದ್ರ ಸಚಿವ ವಿ. ಮುರಳೀಧರನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಲೇಷ್ಯಾ ನೆಗೇರಿ ಸಿಂಬ್ಲಿ ಲಾನ್‌ನ ಮಿಲಾಲ್ ಅರೇಕಾ ಕಮರ್ಶಿಯಲ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಮೂಸಾನ್ ಎಂಟರ್‌ಪ್ರೈಸಸ್‌ನಲ್ಲಿ ಅಡುಗೆಯಾಳಾಗಿ ಮಧುಸೂದನ ಶೆಟ್ಟಿ ಎರಡೂವರೆ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು.
ಅಂದು ಏನಾಗಿತ್ತು?:
ಫೆ. 27ರಂದು ಅಲ್ಲಿನ ಕಡಲ ಕಿನಾರೆಯಲ್ಲಿ ಮಧುಸೂದನ ವಿಶ್ರಾಂತಿ ಪಡೆಯುತ್ತಿದ್ದಾಗ ಬಾಲಕಿಯೊಬ್ಬಳು ಸಮುದ್ರದ ಅಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಳು. ಮಧುಸೂದನ ಸಮುದ್ರಕ್ಕೆ ಧುಮುಕಿ ಬಾಲಕಿಯನ್ನು ರಕ್ಷಿಸಿದ್ದರು. ಅನಂತರ ಬಾಲಕಿಯ ಬಟ್ಟೆ ಬರೆಯಲ್ಲಿ ಅಂಟಿಕೊಂಡಿದ್ದ ಮಣ್ಣನ್ನು ತೆಗೆಯುತ್ತಿದ್ದಾಗ ಅಲ್ಲಿಗೆ ಬಂದ ಬಾಲಕಿಯ ತಂದೆ ಹಾಗೂ ತಾಯಿ ಮಧುಸೂದನ ಅವರು ಆಕೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿ ಅವರನ್ನು ತರಾಟೆಗೆ ತೆಗೆದುಕೊಂಡು, ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಂಧಿಸಿ ಜೈಲಿಗಟ್ಟಿದರು.
ಆದರೆ ಈ ಮಧ್ಯೆ ನೈಜ ವಿಚಾರ ಅರಿತುಕೊಂಡ ಬಾಲಕಿಯ ಹೆತ್ತವರು ತಮ್ಮಿಂದ ತಪ್ಪಾಗಿದೆ ಎಂದು ಅಧಿಕಾರಿ ಗಳಿಗೆ ತಿಳಿಸಿದ್ದರೂ ಕಾನೂನು ಕ್ರಮ ದಿಂದ ಅವರು ಹಿಂದೆ ಸರಿಯಲಿಲ್ಲ. ಮಲೇಷ್ಯಾದ ಮಲಯಾಳಿಗರ ಸಂಘಟನೆಗಳು ಹಾಗೂ ಹೊಟೇಲ್ ಮಾಲಕರೂ ಮಧುಸೂದನ ಶೆಟ್ಟಿ ಅವರ ಬಿಡುಗಡೆಗಾಗಿ ಸಕ್ರಿಯವಾಗಿ ಪ್ರಯತ್ನಿಸಿದರೂ ಪ್ರಯೋಜನ ವಾಗಿಲ್ಲ.
ಮಧುಸೂದನ ಅವರ ಸಹೋದ್ಯೋಗಿಯಾಗಿರುವ ತೃಶ್ಶೂರ್ ನಿವಾಸಿ ಮಧುಸೂದನ ಜೈಲಿನಲ್ಲಿರುವ ವಿಷಯವನ್ನು ಜೂನ್ 11ರಂದು ಪತ್ನಿ ಇಂದಿರಾವತಿಗೆ ತಿಳಿಸಿದ್ದರು. ಕೂಡಲೇ ಅವರು ಕೇಂದ್ರ ವಿದೇಶಾಂಗ ಖಾತೆಯ ಸಹಾಯಕ ಸಚಿವ ವಿ. ಮುರಳೀಧರನ್ ಅವರಿಗೆ ಬಿಜೆಪಿ ನೇತಾರರ ಮೂಲಕ ಮನವಿ ಸಲ್ಲಿಸಿ ಪತಿಯನ್ನು ಸಂಕಷ್ಟದಿಂದ ಪಾರು ಮಾಡುವಂತೆ ಮನವಿ ಮಾಡಿದ್ದಾರೆ.