ಕಾಸರಗೋಡು: ಕನ್ನಡ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕ ಅಧ್ಯಕ್ಷ ಸುಬ್ರಮಣ್ಯ ವೆಂಕಟ್ರಮಣ ಭಟ್ (74) ಅವರು ಸೆ. 10ರಂದು ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಕಾಸರಗೋಡಿನ ಬೀರಂತಬೈಲು ನಿವಾಸಿಯಾಗಿರುವ ಎಸ್. ವಿ. ಭಟ್ ಎಂದೇ ಖ್ಯಾತರಾದ ಅವರು ಬದಿಯಡ್ಕದಲ್ಲಿ ನಡೆದ ಕಾರ್ಯಕ್ರಮಯೊಂದರ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತತ್‌ಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ .
ಕುಂಬಳೆ, ಕಾಸರಗೋಡು, ಅಡೂರು ಹಾಗೂ ಜಿಲ್ಲೆಯ ವಿವಿಧೆಡೆಯ ಶಾಲೆಗಳಲ್ಲಿ ಅಧ್ಯಾಪರಾಗಿಯೂ, ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿ, ಕಾಸರಗೋಡು ಜಿಲ್ಲಾ ಅಸಿಸ್ಟೆಂಟ್ ಎಜುಕೇಶನ್ ಆಫೀಸರ್ ಆಗಿಯೂ, ಹೈಯರ್ ಸೆಕೆಂಡರಿಯ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಕೇರಳದ ಘಟಕದ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಆಯ್ಕೆಯಾಗಿ, ಕನ್ನಡ ಪರ ಹೋರಾಟಗಳಲ್ಲಿ , ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹಲವಾರು ಸಾಹಿತ್ಯ ಸಮ್ಮೇಳನವನ್ನು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
ಸಂತಾಪ
ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರವಾದುದು. ಅವರ ಅಗಲುವಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.