ಕಾಸರಗೋಡು : ಸುಮಾರು 600 ವರ್ಷಗಳ ಇತಿಹಾಸವುಳ್ಳ ಹಾಗು ಕನ್ನಡಿಗರ ಶೌರ್ಯ, ಸಾಹಸದ ಪ್ರತೀಕ ವಾಗಿರುವ, ಇಕ್ಕೇರಿ ರಾಜರು ನಿರ್ಮಿಸಿ ರುವ ಕಾಸರಗೋಡು ಕೋಟೆಯ ಬುರುಜು ಗಾಳಿ ಮಳೆಗೆ ಕುಸಿದು ಬಿದ್ದಿದೆ. ಕಾಡು ಪೊದೆ ಬೆಳೆದು ಕೋಟೆಯ ಬುರುಜು ಯಾರ ಗೋಚರಕ್ಕೂ ಬರುತ್ತಿರ ಲಿಲ್ಲ. ಗಾಳಿ ಮಳೆಯಿಂದಾಗಿ ಕೋಟೆ ಬುರು ಜಿನ ಕಲ್ಲು ಕುಸಿಯುತ್ತಿದ್ದಂತೆ ಕೋಟೆಗೆ ಹಾನಿ ಯಾಗಿರುವುದು ಕಂಡು ಬಂತು. ಇಕ್ಕೇರಿ ರಾಜರು ಕಾಸರಗೋಡು ಕೋಟೆಯನ್ನು ನಿರ್ಮಿಸಿದ್ದರು.
ವರ್ಷಗಳ ಹಿಂದೆ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳು ಕೋಟೆಯನ್ನು ಯಾರ ಗಮನಕ್ಕೂ ಬಾರದಂತೆ ಮಾರಾಟ ಮಾಡಲು ಯತ್ನ ನಡೆದಿತ್ತು. ಕೋಟೆ ಮಾರಾಟ ಬಯಲಾಗುತ್ತಿದ್ದಂತೆ ಪ್ರತಿಭಟನೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿಗಳ ಆದೇಶದಂತೆ ಕಂದಾಯ ಇಲಾಖೆ ಕೋಟೆಯನ್ನು ವಶಕ್ಕೆ ತೆಗೆದು ಕೊಂಡಿತ್ತು. ಕೋಟೆ ಮಾರಾಟ ಸಂಬಂಧ ಸರಕಾರಿ ಅಧಿಕಾರಿಗಳು ಸಹಿತ 15 ಮಂದಿ ವಿರುದ್ಧ ಕಾಸರಗೋಡು ವಿಜಿಲೆನ್ಸ್ ಕೇಸು ದಾಖಲಿಸಿತ್ತು. ಮಾರಾಟ ಪ್ರಕರಣ ತನಿಖೆ ಇನ್ನೂ ನಡೆಯುತ್ತಿದೆ.
ಕೋಟೆಯ ದುರಸ್ತಿ ಹಾಗು ನವೀಕರಿಸ ದಿರುವುದರಿಂದಾಗಿ ಕೋಟೆಯ ಒಂದು ಭಾಗ ಕುಸಿದು ಬೀಳಲು ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕೋಟೆಯನ್ನು ಅಭಿವೃದಿ§ ಪಡಿಸಿದರೆ ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದಲಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.
ಕಾಡು ಪೊದೆ
ಕಾಸರಗೋಡು ನಗರದಿಂದ ಫೋರ್ಟ್ ರೋಡ್ ಮೂಲಕ ಕಾಸರಗೋಡು ಕೋಟೆಗೆ ರಸ್ತೆಯಿದ್ದರೂ ಕಾಸರಗೋಡು ಕೋಟೆ ಎಲ್ಲಿದೆ ಎಂಬುದು ಹಲವರಿಗೆ ತಿಳಿದಿಲ್ಲ ಎಂಬ ಪರಿಸ್ಥಿತಿಯೂ ಇದೆ. ಕಾಡು ಪೊದೆ ಬೆಳೆದು ಕೋಟೆ ಗೋಚರಿಸುತ್ತಿಲ್ಲ. ಕೋಟೆಯೊಳಗೆ ಬುರುಜುಗಳು, ಕೆರೆಗಳು, ವೀಕ್ಷಣ ಬತ್ತೇರಿಗಳಿವೆ. ಕೋಟೆಯೊಳಗೆ ಆಂಜನೇಯ ದೇವಸ್ಥಾನವೂ ಇದೆ. ಈ ದೇವಸ್ಥಾನವನ್ನು ಕೆಲವು ವರ್ಷಗಳ ಹಿಂದೆ ನವೀಕರಿಸಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು.
ನಕಲಿ ದಾಖಲೆ
ಕಾಸರಗೋಡು ಕೋಟೆಯನ್ನು ಪ್ರಾಚ್ಯ ವಸ್ತು ಇಲಾಖೆ ವಶಪಡಿಸಿಕೊಂಡಿದ್ದರೂ ಕೋಟೆಗೆ ಸೇರಿದ 4.80 ಎಕರೆ ಸ್ಧಳವನ್ನು ಕೆಲವು ಖಾಸಗಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ವಶಪಡಿಸಿಕೊಳ್ಳಲು ಯತ್ನಿಸಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು. ಕೆಲವು ದಿನಗಳ ಕಾಲ ಇದರ ವಿರುದ್ಧ ಪ್ರತಿಭಟನೆಯೂ ನಡೆದಿತ್ತು.
ಎರಡು ವಾರಗಳ ಹಿಂದೆ ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯ ಬುರುಜು ಕುಸಿದು ಬಿದ್ದಿರುವುದು ನೆನಪಿಸಬಹುದು.