Advertisement

ಬನ್ನಿ ನೋಡೋಣ ಕೊನ್ನಕ್ಕಾಡು ಜಲಪಾತದ ವೈಭವ 

06:00 AM Jul 21, 2018 | |

ಧುಮ್ಮಿಕ್ಕಿ ಭೋರ್ಗರೆಯುವ ಈ ಜಲಪಾತ ಕಾಣಬೇಕಾದರೆ ಕಾಂಞಂಗಾಡ್‌ನಿಂದ ಪೂರ್ವಕ್ಕೆ ಕೊನ್ನಕ್ಕಾಡಿಗೆ ತೆರಳಿದರೆ ಸಾಕು. ಮಾವುಂಗಾಲ್‌ ಆನಂದಾಶ್ರಮದಿಂದ ಸುಮಾರು 25-30 ಕಿ.ಮೀ. ದೂರ ಪನತ್ತಡಿ ರಸ್ತೆಗುಂಟ ಸಾಗಿದರೆ ವೆಳ್ಳರಿಕುಂಡು ತಾಲೂಕು ಸಿಗುತ್ತದೆ. ಒಡಯಂಚಾಲ್‌, ಕಲ್ಲಾರ್‌, ಪರಪ್ಪು, ಮಾಲೋಂ ಇತ್ಯಾದಿ ಮಲೆನಾಡ ಕೇಂದ್ರಗಳನ್ನು ದಾಟಿ ಸಾಗಬೇಕು. ನೀಲೇಶ್ವರ ಮುಖಾಂತರ ಪರಪ್ಪಕ್ಕೆ ಆಗಮಿಸಿ ಅಲ್ಲಿಂದ ಮುಂದೆ ವೆಳ್ಳರಿಕುಂಡಿಗೆ ಪಯಣಿಸಿ ಕೆಲವೇ  ನಿಮಿಷಗಳಲ್ಲಿ ಕೊನ್ನಕ್ಕಾಡು ಪೇಟೆ ಸೇರಬಹುದು. 

Advertisement

ಕಾಸರಗೋಡಿಗರಿಗೆ ಮಳೆಗಾಲದ ದಿನಗಳಲ್ಲಿ ಅನೇಕ ತಾತ್ಕಾಲಿಕ ಜಲಪಾತಗಳು ಸನಿಹದಲ್ಲೇ ಇವೆ. ಉದಾಹರಣೆಗೆ ಕಲಾವಿದ ಪಿ.ಎಸ್‌. ಪುಣಿಂಚಿತ್ತಾಯರ ಕಲಾಗ್ರಾಮದ ತೋಟದಲ್ಲಿ ಸಣ್ಣಗೆ ಧುಮುಕುವ ಜಲಪಾತವಿದೆ – ಕಾರಡ್ಕ ಗ್ರಾಮದಲ್ಲಿ. 

ಹೇಳಿ-ಕೇಳಿ ಇವೆಲ್ಲ ಗುಡ್ಡ-ಗಾಡು ಪ್ರದೇಶಗಳು. ಮುಗಿಲೆತ್ತರಕ್ಕೆ ಚಾಚಿನಿಂತ ಹಸಿರು ಬೆಟ್ಟಗಳು ಮೋಡವನ್ನು ಮುತ್ತಿಕ್ಕುವ ದೃಶ್ಯ ಬಹಳ ಮನೋಹರ. ಕೇರಳದ ದಕ್ಷಿಣ ಭಾಗದಿಂದ ಇತ್ತ ಬಂದು ನೆಲೆಯೂರಿದ ಕ್ರೈಸ್ತ ಸಮುದಾಯದವರು ರಬ್ಬರ್‌, ತೆಂಗು, ಅಡಿಕೆ, ಕಾಳು ಮೆಣಸು, ಮರಗೆಣಸಿನ ವ್ಯಾಪಕ ಕೃಷಿಯಲ್ಲಿ ತೊಡಗಿಸಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಕ್ರೈಸ್ತ ದೇವಾಲಯಗಳು, ಹೊಂದಿಕೊಂಡಂತೆ ವಿದ್ಯಾಲಯಗಳು ಕಾಣಿಸುತ್ತವೆ. 

ಸ್ವಚ್ಚ ಸುಂದರ ಪರಿಸರ
ಸಂಚರಿಸುವ ಗ್ರಾಮೀಣ ರಸ್ತೆ ಹೊಂಡ- ಗುಂಡಿಗಳಿಲ್ಲದೆ ಕಾರು ಪಯಣಕ್ಕೆ ಹೇಳಿ ಮಾಡಿಸಿದಂತಿದೆ. ಕಾಡನ್ನು ಸೀಳಿ ಹಚ್ಚ ಹಸುರಿನ ಬೆಟ್ಟಗಳ ನಡುವೆ ಹರಿಯುವ ತೊರೆಗಳನ್ನು ಕ್ರಮಿಸಿ ನೀವು ವೆಳ್ಳರಿಕುಂಡು ಪೇಟೆ ಸೇರಿದರೆ ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಕೊನ್ನಕ್ಕಾಡು ತಲುಪುತ್ತೀರಿ. ರಸ್ತೆ ಇಕ್ಕೆಲಗಳಲೆಲ್ಲೂ ಕಸ ಕೊಚ್ಚೆಗಳಿಲ್ಲದೆ ಸ್ವತ್ಛವಾಗಿರಿಸಿದ್ದು ವಿಶೇಷ. 

ಇಲ್ಲಿನ ಪ್ರಧಾನ ಜಲಪಾತವೆಂದರೆ ಅಚ್ಚಂಗಲ್ಲು ಜಲಪಾತ. ಇಲ್ಲಿಂದ ಹರಿದು ಮುಂದೆ ಸಾಗಿದ ಜಲರಾಶಿ ಮಂಞಚ್ಚಾಲು ಜಲಪಾತಕ್ಕೆ ಆಸ್ಪದ ಮಾಡಿಕೊಟ್ಟಿದೆ. ಇದಲ್ಲದೆ ವೊಟ್ಟಿಕೊಲ್ಲಿ ಎಂಬ ಕಿರು ಜಲಪಾತವೂ ಇದೆ.
 
ಮಳೆಗಾಲದ ಸುತ್ತಾಟಕ್ಕೆ (ಮನ್ಸೂನ್‌ ಟೂರಿಸಂ) ಹೇಳಿ ಮಾಡಿದಂತಿದೆ. ಇಲ್ಲಿನ ಪ್ರಕೃತಿ ವೈಭವ ಈ ಜಲಪಾತಗಳು ಸುಮಾರು 3-4 ತಿಂಗಳು ತನಕ ಇದ್ದು ಮಳೆಯ ರಭಸ ಕ್ಷೀಣಿಸುತ್ತಲೇ ಭೋರ್ಗರೆತ ಕಳೆದು ಸುಸ್ತಾಗುತ್ತವೆ. ಜಲಪಾತದಿಂದ ಹರಿದು ಹೋಗುವ ನೀರು ಚೈತ್ರವಾಹಿನಿ ನದಿಯನ್ನು ಸೇರುತ್ತದೆ. 

Advertisement

ಸ್ನಾನ ಮಾತ್ರ ಅಪಾಯಕರ
ಇಲ್ಲಿ ಜಲಪಾತದಲ್ಲಿ ಸ್ನಾನ ಮಾಡಲು ಯಾವುದೇ ಸುರಕ್ಷಿತ ಸೌಕರ್ಯವಿಲ್ಲದಿರು ವುದು ಒಂದು ಕೊರತೆ. ಧುಮ್ಮಿಕ್ಕುವ ಜಲಧಾರೆ ಕೆಳಗಿನ ಬಂಡೆಕಲ್ಲುಗಳ ಮೇಲೆ ಅಪ್ಪಳಿಸಿ ಮುಂದೆ ಸಾಗುತ್ತವೆ. ಅಲ್ಲಿ ನಿಂತು ಸ್ನಾನ ಮಾಡುವುದು ಅಪಾಯವನ್ನು ಆಹ್ವಾನಿಸಿದಂತೆಯೇ ಸರಿ. 

ಏನಿದ್ದರೂ ಕಾಸರಗೋಡು ನಗರದಿಂದ ಎರಡು ಗಂಟೆ ಕಾರು ಪಯಣ ಮಾಡಿದರೆ ಪ್ರಕೃತಿಯ ಮಡಿಲಲ್ಲಿ ವಯನಾಡಿನ ಅನುಭವ ನೀಡುವ ಪ್ರಕೃತಿಯಲ್ಲಿ ಹಾಯಾಗಿ ಸಮಯ ಕಳೆಯಬಹುದು. ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಪನತ್ತಡಿ ರಸ್ತೆಯಲ್ಲಿ ಹಿಂದಿರುಗಿ ಬರುವಾಗ ಮಾವುಂಗಾಲ್‌ನಲ್ಲಿ ಸ್ವಾಮಿ ರಾಮದಾಸರ ಆಶ್ರಮವನ್ನು ಸಂದರ್ಶಿಸಿ ಕೃತಾರ್ಥರಾಗಬಹುದು. ಮುಂದೆ ಕಾಂಞಂಗಾಡು ಪೇಟೆ ಬರುತ್ತದೆ. 

ಬಿ.ನರಸಿಂಗ ರಾವ್‌ 

Advertisement

Udayavani is now on Telegram. Click here to join our channel and stay updated with the latest news.

Next