Advertisement

Crime: ಕಾಸರಗೋಡು ಅಪರಾಧ ಪ್ರಕರಣಗಳು

08:46 PM Aug 19, 2024 | Team Udayavani |

ನೇಣು ಬಿಗಿದು ಗರ್ಭಿಣಿ ಆತ್ಮಹತ್ಯೆ
ಕುಂಬಳೆ: ಮೂರು ತಿಂಗಳ ಗರ್ಭಿಣಿ ಕಯ್ನಾರು ಕನ್ನಟಿಪಾರೆ ಶಾಂಯೋಡು ನಿವಾಸಿ ವೆಲ್ಡಿಂಗ್‌ ಕಾರ್ಮಿಕ ಜನಾರ್ದನ ಅವರ ಪತ್ನಿ ವಿಜೇತ(32)ಮನೆಯ ಬೆಡ್‌ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಪತಿ ಉಳ್ಳಾಲದಲ್ಲಿರುವ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಅವರು ಮನೆಗೆ ಮರಳಿ ನೋಡಿದಾಗ ವಿಜೇತ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ಮಂಗಳೂರು ವಾಮಂಜೂರು ಪಿಲಿಕುಳದ ಸರಸ್ವತಿ ಅವರ ಪುತ್ರಿಯಾದ ವಿಜೇತ ಹಾಗು ಜನಾರ್ದನ ಅವರ ವಿವಾಹ ಒಂದೂವರೆ ವರ್ಷಗಳ ಹಿಂದೆ ನಡೆದಿತ್ತು. ಇವರು ನೇಣು ಬಿಗಿಯಲು ಕಾರಣ ತಿಳಿದು ಬಂದಿಲ್ಲ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

5.953 ಕಿಲೋ ಗಾಂಜಾ ಸಹಿತ ಬಂಧನ
ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದ ಫ್ಲಾಟ್‌ ಫಾರ್ಮ್ನಿಂದ 5.953 ಕಿಲೋ ಗಾಂಜಾವನ್ನು ರೈಲ್ವೇ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಪೈವಳಿಕೆ ಬಾಯಿಕಟ್ಟೆ ಮಂಜತ್ತೋಡಿ ಹೌಸ್‌ನ ಅರುಣ್‌ ಕುಮಾರ್‌(27)ನನ್ನು ಬಂಧಿಸಿದ್ದಾರೆ. ರೈಲು ನಿಲ್ದಾಣದಲ್ಲಿ ಹೋಲ್ಡರ್‌ ಬ್ಯಾಗ್‌ನೊಂದಿಗೆ ತಿರುಗಾಡುತ್ತಿದ್ದುದನ್ನು ಗಮನಿಸಿ ಶಂಕೆಗೊಂಡು ಈತನನ್ನು ತಡೆದು ನಿಲ್ಲಿಸಿ ಬ್ಯಾಗ್‌ ತಪಾಸಣೆ ಮಾಡಿದಾಗ ಪ್ಯಾಕೆಟ್‌ಗಳಲ್ಲಿ ತುಂಬಿಸಿದ ಗಾಂಜಾ ಪತ್ತೆಯಾಯಿತು. ತತ್‌ಕ್ಷಣ ಆತನನ್ನು ಬಂಧಿಸಲಾಯಿತು.

Advertisement

ರೈಲು ಗಾಡಿಯಿಂದ ಬಿದ್ದು ಅಯ್ಯಪ್ಪ ವ್ರತಧಾರಿ ಮಹಿಳೆ ಸಾವು
ಉಪ್ಪಳ: ಶಬರಿಮಲೆ ದರ್ಶನಕ್ಕೆ ತೆರಳುತ್ತಿದ್ದ ಅಯ್ಯಪ್ಪ ವ್ರತಧಾರಿ ಮಹಿಳೆ ರೈಲುಗಾಡಿಯಿಂದ ಬಿದ್ದು ಸಾವಿಗೀಡಾದ ಘಟನೆ ನಡೆದಿದೆ.

ಆ.18 ರಂದು ರಾತ್ರಿ 9.30 ಕ್ಕೆ ಉಪ್ಪಳ ರೈಲು ನಿಲ್ದಾಣ ಸಮೀಪ ಈ ಘಟನೆ ನಡೆದಿದೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಕಲ್ಲೋಳಿಯ ದಿ|ಗೋವಿಂದಪ್ಪ ಅವರ ಪುತ್ರಿ ಕಸ್ತೂರಿ ಖಾನಗೌಡ(58) ಅವರು ಸಾವಿಗೀಡಾದರು.

ಗೋವಾದಿಂದ ಎರ್ನಾಕುಳಂಗೆ ತೆರಳುತ್ತಿದ್ದ ರೈಲುಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಕಸ್ತೂರಿ ರೈಲು ಗಾಡಿಯಿಂದ ಹೊರಕ್ಕೆಸೆಯಲ್ಪಟ್ಟು ಈ ಘಟನೆ ನಡೆದಿದೆ.

12 ಮಹಿಳೆಯರು ಸಹಿತ 40 ಮಂದಿ ವ್ರತಧಾರಿಗಳು ಶಬರಿಮಲೆ ಕ್ಷೇತ್ರ ದರ್ಶನಕ್ಕೆ ಹೊರಟಿದ್ದರು. ಇವರು ಘಟಪ್ರಭಾ ರೈಲು ನಿಲ್ದಾಣದಿಂದ ರೈಲಿಗೆ ಹತ್ತಿದ್ದರು.

ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರಿನಲ್ಲಿ ಸಾಗಿಸುತ್ತಿದ್ದ 319 ಲೀಟರ್‌ ಮದ್ಯ ಸಹಿತ ಬಂಧನ
ಕಾಸರಗೋಡು: ಓಣಂ ಹಬ್ಬ ಸಮೀಪಿಸುತ್ತಿದ್ದಂತೆ ಅನ್ಯ ರಾಜ್ಯಗಳಿಂದ ಮದ್ಯ ಹರಿದು ಬರುವುದನ್ನು ನಿಯಂತ್ರಿಸಲು ಅಬಕಾರಿ ಇಲಾಖೆ ಆರಂಭಿಸಿದ ಓಣಂ ಸ್ಪೆಷಲ್‌ ಡ್ರೈವ್‌ ಕಾರ್ಯಾಚರಣೆಯಲ್ಲಿ ಕಾರೊಂದರಲ್ಲಿ ಸಾಗಿಸುತ್ತಿದ್ದ 319 ಲೀಟರ್‌ ಮದ್ಯವನ್ನು ಕರಂದಕ್ಕಾಡಿನಿಂದ ವಶಪಡಿಸಿಕೊಂಡಿದ್ದು, ಈ ಸಂಬಂಧ ರವಿಕಿರಣ್‌ನನ್ನು ಬಂಧಿಸಿದೆ.

ಸಾರಾಯಿ ಸಹಿತ ಬಂಧನ
ಮುಳ್ಳೇರಿಯ: ಆದೂರು ಪೆರಿಯಡ್ಕದಿಂದ ಐದು ಲೀಟರ್‌ ಸಾರಾಯಿ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು ಈ ಸಂಬಂಧ ಸ್ಥಳೀಯ ನಿವಾಸಿ ಪವಿತ್ರನ್‌(60)ನನ್ನು ಬಂಧಿಸಿದ್ದಾರೆ.

ಉದ್ಯೋಗ ಭರವಸೆ ನೀಡಿ ವಂಚನೆ : ಕೇಸು ದಾಖಲು
ಕುಂಬಳೆ: ಏರ್‌ಫೋರ್ಸ್‌ನಲ್ಲಿ ಉದ್ಯೋಗದ ಭರವಸೆ ನೀಡಿ 140150 ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಡುಕ್ಕಿ ತೋಪುಂಪುಳ ಮದಲಕುಲಂ ವಿಸ್ಮಯ ಹೌಸ್‌ನ ಸನೀಶ್‌ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಸೀತಾಂಗೋಳಿ ಉಳಿಯ ಎಡನಾಡ್‌ ಕಾವೇರಿಕಾನ ನಿವಾಸಿ ಕೆ.ಚೇತನ್‌ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ : ಕೇಸು ದಾಖಲು
ಕುಂಬಳೆ: ಕುಬಣೂರು ನಿವಾಸಿ ಮಮ್ಮುಂಞಿ ಗುರ್ಮ ಕಾದರ್‌(52) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಹೊಸಬೆಟ್ಟು ನಿವಾಸಿ ಅಬ್ದುಲ್‌ ನಿಸಾಮುದ್ದೀನ್‌(25) ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳಕ್ಕೆ ಯತ್ನ : ಆರೋಪಿ ಬಂಧನ
ಬದಿಯಡ್ಕ: ಸಂಚರಿಸುತ್ತಿದ್ದ ಬಸ್‌ನೊಳಗೆ ವಿದ್ಯಾರ್ಥಿನಿಗೆ ಕಿರುಕುಳ ನೀಡಲೆತ್ನಿಸಿದ ಉಪ್ಪಿನಂಗಡಿ ನಿವಾಸಿ ಅಬ್ದುಲ್‌ ಕರೀಂ(40)ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಕುಂಬಳೆಯಿಂದ ಬದಿಯಡ್ಕಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಲೆತ್ನಿಸಿದ್ದಾಗ ವಿದ್ಯಾರ್ಥಿನಿ ಬೊಬ್ಬೆ ಹಾಕಿದಳು. ಇದೇ ವೇಳೆ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಕರೀಂನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು.

ಕುಣಿಕೆಗೆ ಸಿಲುಕಿ ಚಿರತೆ ಸಾವಿಗೀಡಾದ ಪ್ರಕರಣ; ಕಾಡು ಹಂದಿ ಬೇಟೆಗಾರನ ಬಂಧನ
ಮುಳ್ಳೇರಿಯ: ಅಡೂರು ಪಾಂಡಿ ಮಲ್ಲಂಪಾರೆಯಲ್ಲಿ ಕಾಡು ಹಂದಿಗೆ ಇರಿಸಿದ ಕುಣಿಕೆಯಲ್ಲಿ ಸಿಲುಕಿ ಚಿರತೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಮಲ್ಲಂಪಾರೆಯ ಚಂದ್ರಶೇಖರ ನಾಯ್ಕ(30)ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಈತನ ಜತೆಗಿದ್ದ ಸುಂದರನಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಕಾಡು ಹಂದಿಯನ್ನು ಹಿಡಿಯಲೆಂದು ಕೇಬಲ್‌ ತಂತಿ ಬಳಸಿ ಕುಣಿಕೆಯನ್ನಿರಿಸಲಾಗಿತ್ತು. ಈ ಕುಣಿಕೆಗೆ ಸಿಲುಕಿ ಚಿರತೆ ಸಾವಿಗೀಡಾಗಿತ್ತು.

ಮನೆಯಿಂದ ಕಳವು : ತನಿಖೆ
ಕುಂಬಳೆ: ಅನಂತಪುರದ ಸುದರ್ಶನ ಅವರ ಮನೆಯಿಂದ ಮೂರು ಮುಕ್ಕಾಲು ಪವನ್‌ ಚಿನ್ನಾಭರಣವನ್ನು ಕಳವು ಮಾಡಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳವು ಮಾಡಲಾಗಿದೆ. ಈ ಬಗ್ಗೆ ನೀಡಿದ ದೂರಿರಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇರಿತ ಪ್ರಕರಣ : ಬಂಧನ
ಉಪ್ಪಳ: ಉಪ್ಪಳ ಪಚ್ಲಂಪಾರೆಯ ನಿವಾಸಿಗಳಾದ ಸುಹೈಲ್‌(32) ಮತ್ತು ಮಶೂಕ್‌(28) ಅವರಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇವರ ತಂದೆ ಮೊಹಮ್ಮದ್‌ ಹನೀಫ್‌(55) ನನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯಾಯಾಲಯ ಆರೋಪಿಗೆ ರಿಮಾಂಡ್‌ ವಿಧಿಸಿದೆ.

ವಿದ್ಯಾರ್ಥಿಗೆ ಹಲ್ಲೆ : ಕೇಸು ದಾಖಲು
ಪೈವಳಿಕೆ: ಕಾಯರ್‌ಕಟ್ಟೆ ಶಾಲೆಯ ಪ್ಲಸ್‌ ವನ್‌ ವಿದ್ಯಾರ್ಥಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ಲಸ್‌ ಟು ವಿದ್ಯಾರ್ಥಿ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

ನಿಲ್ಲಿಸಿದ್ದ ಕಾರಿನೊಳಗೆ ಶವ ಪತ್ತೆ
ಕಾಸರಗೋಡು: ನಿಲ್ಲಿಸಿದ್ದ ಕಾರಿನೊಳಗೆ ಕರಿಂದಳ ಚೊಯ್ಯಂಗೋಡು ನಿವಾಸಿ ಕೆ.ಕೊಟ್ಟನ್‌ ಅವರ ಪುತ್ರ ಕೆ.ವಿ.ದಿನೇಶನ್‌(52) ಅವರ ಮೃತದೇಹ ಪತ್ತೆಯಾಗಿದೆ.

ನೀಲೇಶ್ವರ ರೈಲು ನಿಲ್ದಾಣ ಮುತ್ತಪ್ಪನ್‌ ಕ್ಷೇತ್ರದ ಸಮೀಪ ನಿಲ್ಲಿಸಿದ್ದ ಕಾರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆ.18 ರಂದು ಸಂಜೆಯಿಂದ ಇವರು ನಾಪತ್ತೆಯಾಗಿದ್ದರು. ಕಾರಿನ ಬಾಗಿಲು ಮುಚ್ಚಿ ಲಾಕ್‌ ಮಾಡಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು ಢಿಕ್ಕಿ : ಗಾಯಾಳು ಸಾವು

ಕಾಸರಗೋಡು: ಎರಡು ವಾರದ ಹಿಂದೆ ಪೂಚಕಾಡ್‌ನ‌ಲ್ಲಿ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್‌ಸವಾರ ಉದುಮ ಪಳ್ಳಂ ತೆಕ್ಕೇಕರ ಶ್ರೀಲಯ ನಿವಾಸಿ ಟಿ.ಕೆ.ಅಭಿಷೇಕ್‌(19) ಸಾವಿಗೀಡಾದರು.

ಕಳವು ಪ್ರಕರಣ : ಬಂಧನ
ಕಾಸರಗೋಡು: ಹಗಲು ಜವುಳಿ ಅಂಗಡಿಯಲ್ಲಿ ದುಡಿದು ರಾತ್ರಿ ಕಳವು ಮಾಡುವ ದಂಧೆಯಲ್ಲಿ ತೊಡಗಿದ ವಯನಾಡು ಅಂಬಲವಯಲ್‌ ವಿಕಾಸ್‌ ಕಾಲಿಚಲ್‌ ಅಬ್ದುಲ್ಲ ಅಬೀದ್‌(26)ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ಹೊಸದುರ್ಗ ಸೆಕ್ಯುರಿಟಿ ಸಿಬ್ಬಂದಿಯೋರ್ವನ ಹಾಗು ವಲಸೆ ಕಾರ್ಮಿಕನೋರ್ವನ ಮೊಬೈಲ್‌ ಕಳವು ಮಾಡಿದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಈತ ಹಗಲು ಹೊಸದುರ್ಗದ ಜವುಳಿ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದ.

Advertisement

Udayavani is now on Telegram. Click here to join our channel and stay updated with the latest news.

Next