ಕಾಸರಗೋಡು: ಆಲಪ್ಪುಳ ಕಳರ್‌ಕೋಡು ಚೆಂಗನಾಶ್ಶೇರಿ ತಿರುವಿನಲ್ಲಿ ಡಿ. 2ರಂದು ರಾತ್ರಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ಢಿಕ್ಕಿ ಹೊಡೆದು ಐವರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರೂ ಗಾಯಗೊಂಡಿದ್ದಾರೆ.
ಕೋಟಯಂ ಪೂಂಞಾಲ್ ಚೆನ್ನಾಡಿನ ಆಯುಷ್ ಶಾಜಿ (19), ಪಾಲಕ್ಕಾಟ್ ಕಾವು ಸ್ಟ್ರೀಟ್‌ನ ಕೆ.ಡಿ. ಶ್ರೀದೀಪ್ ವಸಂತನ್ (19), ಮಲಪ್ಪುರಂ ಕೋಟಕ್ಕಲ್ ಚಿನಂಪುತ್ತೂರಿನ ಬಿ. ದೇವಾನಂದನ್ (19), ಕಣ್ಣೂರು ವೆಂಙರ ಮಾಡಾಯಿ ಮುಟ್ಟಂನ ಮುಹಮ್ಮದ್ ಅಬ್ದುಲ್ ಜಬ್ಟಾರ್ (19) ಮತ್ತು ಲಕ್ಷದ್ವೀಪ ಅಂದ್ರಾಯತ್‌ನ ಮುಹಮ್ಮದ್ ಇಬ್ರಾಹಿಂ (19) ಮೃತಪಟ್ಟವರು.
ಪುದುಕುರಶ್ಶಿಯ ಶೈನ್ ಡೈಸನ್ (19), ಎಡಪ್ಪರ ಅಲ್ವಿನ್ ಜಾರ್ಜ್ (19), ಮಲಪ್ಪುರಂ ಮಣಪ್ಪುರದ ಕೃಷ್ಣದೇವ್ (19), ಎರ್ನಾಕುಳಂ ಕಣ್ಣನ್‌ಕುಳದ ಗೌರೀ ಶಂಕರ್ (19), ಕೊಲ್ಲಂ ಚವರದ ಮುಹಸ್ಸಿನ್ ಮುಹಮ್ಮದ್ (19), ಕೊಲ್ಲಂ ಚೆರುವಳಿಯ ಆನಂದ್ ಮನು (19) ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿದ್ದ ವಿದ್ಯಾರ್ಥಿಗಳೆಲ್ಲರೂ ಆಲಪ್ಪುಳ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದಾರೆ. ಅವರು ಆಲಪ್ಪುಳದಲ್ಲಿ ಸಿನೆಮಾ ಥಿಯೇಟರ್‌ನಲ್ಲಿ ಸಿನೆಮಾ ವೀಕ್ಷಿಸಲೆಂದು ಪ್ರಯಾಣಿಸುತ್ತಿದ್ದರು. ಕಾರಿನಲ್ಲಿ 11 ಮಂದಿ ಇದ್ದರು.
ಮುಳ್ಳುಹಂದಿ ಶವ ಪತ್ತೆ: ಚಿರತೆ ದಾಳಿ ಬಗ್ಗೆ ಶಂಕೆ
ಮುಳ್ಳೇರಿಯ: ಕಾರಡ್ಕ ಬಳಿಯ ಅಡ್ಕತೊಟ್ಟಿಯಲ್ಲಿ ಮುಳ್ಳುಹಂದಿಯ ಶವ ಕಂಡುಬಂದಿದ್ದು, ಚಿರತೆಯ ದಾಳಿಯಿಂದ ಸಾವಿಗೀಡಾಗಿರಬೇಕೆಂದು ಶಂಕಿಸಲಾಗಿದೆ.
ಇತ್ತೀಚೆಗೆ ಈ ಪ್ರದೇಶದಲ್ಲಿ ಸಾಕು ನಾಯಿ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ನಡೆದಿತ್ತು. ಕಾರಡ್ಕ 13ನೇ ಮೈಲಿನಲ್ಲಿದ್ದ 12ರಷ್ಟು ಬೀದಿ ನಾಯಿಗಳಲ್ಲಿ ಇದೀಗ ಒಂದು ಮಾತ್ರವೇ ಇದೆ. ಇದರಿಂದ ಸ್ಥಳೀಯ ಜನರು ಚಿರತೆಯ ಭೀತಿಯಲ್ಲಿ ದಿನ ಕಳೆಯುವಂತಾಗಿದೆ