Advertisement
ಜಮ್ಮು-ಕಾಶ್ಮೀರ ಕಥುವಾದಲ್ಲಿ 8ರ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಕೃತ್ಯ ವನ್ನು ಪ್ರತಿಭಟಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಮವಾರ ಹರತಾಳ ನಡೆಸಲಾಗುವುದೆಂದು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಡಿಸಿದ್ದು, ಈ ಪ್ರಚಾರದ ಹೆಸರಿನಲ್ಲಿ ಕೇರಳದಲ್ಲಿ ಅಘೋಷಿತ ಹರತಾಳ ನಡೆಸಲಾಯಿತು. ಹರತಾಳದಿಂದಾಗಿ ಸೋಮವಾರ ಬೆಳಗ್ಗೆ ಕಾಸರಗೋಡು ಜಿಲ್ಲೆಯಲ್ಲಿ ಕೆಲವೆಡೆ ವಾಹನಗಳನ್ನು ತಡೆಯಲಾರಂಭಿಸಿದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಸರಕಾರಿ, ಖಾಸಗಿ ಬಸ್‌ಗಳು ಬೆಳಗ್ಗೆ ಸೇವೆ ಆರಂಭಿಸಿದಾಗ ಹಲವೆಡೆಗಳಲ್ಲಿ ತಡೆಯೊಡ್ಡಲಾಯಿತು.ಇದರಿಂದಾಗಿ ರಾಜ್ಯ ಸರಕಾರಿ ಬಸ್‌ಗಳ ಸೇವೆಯೂ ಅವ್ಯವಸ್ಥೆಗೊಂಡಿತು. ಕಾಸರಗೋಡಿನಿಂದ ಸೇವೆ ಆರಂಭಿಸಿದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವಿದ್ಯಾನಗರ, ಪಾಣಲಂ, ಚೆರ್ಕಳ ಮೊದಲಾದೆಡೆಗಳಲ್ಲಿ ಕೆಲವರು ತಡೆದರು. ಬಸ್ಸುಗಳನ್ನು ತಡೆದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
Related Articles
Advertisement
ಜಿಲ್ಲೆಯ ಹಲವೆಡೆ ರಸ್ತೆ ತಡೆ ನಡೆಸಲಾಯಿತು. ಬಳಿಕ ಅಂತಹ ಅಡಚಣೆಗಳನ್ನು ಪೊಲೀಸರು ತೆರವುಗೊಳಿಸಿದರು. ಎದುರ್ತೋಡು, ಮೂಕಂಪಾರೆ, ಪೊವ್ವಲ್ ಮೊದಲಾದೆಡೆಗಳಲ್ಲಿ ರಸ್ತೆ ತಡೆ ನಡೆಸಲಾಯಿತು. ಪೊವ್ವಲ್‌ನಲ್ಲಿ ಗೂಡಂಗಡಿಯೊಂದನ್ನು ರಸ್ತೆಗೆ ಅಡ್ಡವಾಗಿ ಇರಿಸಲಾಯಿತು. ಕುಂಬಳೆ-ಮುಳ್ಳೇರಿಯ ರೂಟ್‌ನಲ್ಲಿ ಯಾವುದೇ ಬಸ್‌ಗಳು ಸಂಚರಿಸಿಲ್ಲ.ಇದೇ ವೇಳೆ ಅಘೋಷಿತ ಹರತಾಳದ ಹೆಸರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಲ್ಲೆಡೆ ವ್ಯಾಪಕ ಗಸ್ತು ಏರ್ಪಡಿಸಿದ್ದರು. ಬಸ್ಸಿಗೆ ಕಲ್ಲೆಸೆತ, ಚಾಲಕರಿಬ್ಬರಿಗೆ ಗಾಯ : ಬೇವಿಂಜೆಯಲ್ಲಿ ಹರತಾಳ ಬೆಂಬಲಿಗರು ಕಲ್ಲೆಸೆದ ಪರಿಣಾಮವಾಗಿ ತಲಶೆÏàರಿಯಿಂದ ಕಾಸರಗೋಡಿಗೆ ಸೋಮವಾರ ಬೆಳಗ್ಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಗಾಜು ಪೂರ್ಣವಾಗಿ ಪುಡಿಯಾಗಿದೆ. ಚಾಲಕ ತಲಶೆÏàರಿಯ ಸುಭಾಷ್(40) ಗಾಯಗೊಂಡಿದ್ದಾರೆ. ಅವರನ್ನು ಚೆಂಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿವಾರ ರಾತ್ರಿ ಮಂಗಳೂರಿನಿಂದ ಕಾಸರಗೋಡಿಗೆ ಬಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಉಪ್ಪಳ ನಯಾಬಜಾರ್ ಕುಕ್ಕಾರು ಜನಪ್ರಿಯ ಬಸ್ ತಂಗುದಾಣದ ಪರಿಸರದಲ್ಲಿ ಕಲ್ಲೆಸೆದ ಪರಿಣಾಮವಾಗಿ ಬಸ್ ಚಾಲಕ ಜೋಮೋನ್ ಮ್ಯಾಥ್ಯೂ(46) ಅವರ ಕಣ್ಣಿಗೆ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಬಸ್‌ಗೆ ಕಲ್ಲೆಸೆದವರ ಸ್ಪಷ್ಟ ಮಾಹಿತಿ ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಕೊಳ್ಳಲಾಗಿದೆ ಎಂದೂ, ಅವರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಿತ್ರಗಳು: ಶ್ರೀಕಾಂತ್ ಕಾಸರಗೋಡು/ಮಣಿರಾಜ್ ವಾಂತಿಚಾಲ್