Advertisement

Kasaragod 25 ಲಕ್ಷ ರೂ. ಪಡೆದು ವಂಚನೆ: ಕಳ್ಳನೋಟು ಪ್ರಕರಣದ ಆರೋಪಿಗಳ ಬಂಧನ

12:36 AM Apr 06, 2024 | Team Udayavani |

ಕಾಸರಗೋಡು: ಮಾರ್ಚ್‌ 22 ರಂದು 6.96 ಕೋಟಿ ರೂ. ಕಳ್ಳನೋಟು ವಶಪಡಿಸಿಕೊಂಡ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡ ಮವ್ವಲ್‌ ಪರಯಂಗಾನಂ ವೀಟಿಲ್‌ನ ಸುಲೈಮಾನ್‌ (51) ಮತ್ತು ಪೆರಿಯ ಸಿ.ಎಚ್‌.ಹೌಸ್‌ನ ಅಬ್ದುಲ್‌ ರಝಾಕ್‌(51)ನನ್ನು ಅನಿವಾಸಿಯ 25 ಲಕ್ಷ ರೂ. ವಂಚನೆಗೈದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

Advertisement

ಮಂಗಳೂರು ಬಿಜೈ ಭಾರತಿ ನಗರದಲ್ಲಿರುವ ಮಾಜಿ ಕೊಲ್ಲಿ ಉದ್ಯೋಗಿ ರೋಮಟ್‌ ಡಿ’ಸೋಜಾ ಅವರು ನೀಡಿದ ದೂರಿನಂತೆ ಆರೋಪಿಗಳನ್ನು ಬಂಧಿಸಲಾಗಿದೆ. 2022 ನವಂಬರ್‌ ಕೊನೆಯ ವಾರದಲ್ಲಿ ಆರೋಪಿಗಳು ತನ್ನನ್ನು ಪರಿಚಯಿಸಿಕೊಂಡು, ಮುಂಬಯಿ ಕೇಂದ್ರೀಕರಿಸಿ ಬೃಹತ್‌ ಕಂಪೆನಿ ನಡೆಸುತ್ತಿರುವುದಾಗಿಯೂ ಆ ಕಂಪೆನಿಯಲ್ಲಿ 25 ಲಕ್ಷ ರೂ. ಠೇವಣಿ ಇರಿಸಿದರೆ 4 ತಿಂಗಳೊಳಗೆ 1 ಕೋಟಿ ರೂ. ಬಡ್ಡಿ ಸಹಿತ ಮರಳಿ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಅಲ್ಲದೆ ಈ ಬಗ್ಗೆ ನಂಬಿಕೆ ಮೂಡಿಸಲು ಕಂಪೆನಿಯ ಸ್ಟೋರ್‌ ರೂಂನ ಬೃಹತ್‌ ಕೊಠಡಿಯೊಳಗೆ ಎರಡು ಸಾವಿರ ರೂಪಾಯಿಗಳ ಹಲವು ನೋಟು ಕಟ್ಟುಗಳೊಂದಿಗೆ ಆರೋಪಿಗಳು ನಿಂತಿರುವ ವೀಡಿಯೋವನ್ನು ತೋರಿಸಿದ್ದರು. ಇಷ್ಟು ಮೊತ್ತ ಕಂಡು ಆರೋಪಿಗಳು ತಿಳಿಸುತಿರುವುದು ಸತ್ಯ ಎಂದು ನಂಬಿ ಅವರ ಬ್ಯಾಂಕ್‌ ಖಾತೆಗೆ 5 ಲಕ್ಷ ರೂ. ರವಾನಿಸಿದೆ. ಬಾಕಿ ಮೊತ್ತವನ್ನು 10 ದಿನಗಳೊಳಗಾಗಿ ನೀಡುವುದಾಗಿ ತಿಳಿಸಿ ತಿಂಗಳ ಬಳಿಕ ಹಲವರಿಂದ ಸಾಲವಾಗಿ 20 ಲಕ್ಷ ರೂ. ಪಡೆದು ಅಂಬಲತ್ತರದ ಅವರ ಕಂಪೆನಿಯ ಕಚೇರಿಯೆಂದು ತಿಳಿಸಿದ ಮನೆಗೆ ತಲುಪಿಸಿದ್ದಾಗಿ ರೋಮಟ್‌ ಡಿ’ಸೋಜಾ ತಿಳಿಸಿದ್ದಾರೆ.

4ತಿಂಗಳ ಬಳಿಕ ಫೋನ್‌ನಲ್ಲಿ ಸಂಪರ್ಕಿಸಿ ಹಣ ಕೇಳಿದಾಗ ಹಲವು ಕಾರಣಗಳನ್ನು ನೀಡಿ ದಿನ ದೂಡುತ್ತಿದ್ದರು. ಹೀಗಿರುವಂತೆ ಆರೋಪಿಗಳು ಕೋಟ್ಯಂತರ ರೂ. ಕಾಳಧನದೊಂದಿಗೆ ಬಂಧಿತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next