ದೊಡ್ಡಬಳ್ಳಾಪುರ: ನೆಲ, ಜಲ, ಭಾಷೆ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು. ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ 2017ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ವಿಧ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಸಮಯವಾಗಿದೆ. ಕಾಲಹರಣ ಮಾಡದೆ ಹೆಚ್ಚು ಶ್ರಮಪಟ್ಟು ಅಭ್ಯಾಸ ಮಾಡಬೇಕಾಗಿದೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಉತ್ತೇಜಿಸುವುದಕ್ಕೆ ಸಹಕಾರಿಯಾಗುತ್ತವೆ ಎಂದರು.
ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ತ.ನ.ಪ್ರಭುದೇವ್ ಮಾತನಾಡಿ, ರಾಜ್ಯಕ್ಕೆ ಅನ್ಯಾಯವಾದಾಗ ಅದರ ವಿರುದ್ಧ ಹೋರಾಟ ಮಾಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೂಂಚೂಣಿಯಲ್ಲಿ ಇದೆ. ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಸಂಸ್ಥೆ ಇದಾಗಿದೆ. ಸಾಹಿತ್ಯ ಪ್ರೇಮವನ್ನು ಬೆಳಸುವಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಉಪಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ವಿಧ್ಯಾರ್ಥಿಗಳಿಗೆ ಬುದ್ಧಿವಂತಿಕೆ, ವಿದ್ಯಾವಂತಿಕೆಗಿಂತ ಪ್ರಜಾnವಂತಿಕೆಬೇಕು. ಮುಂದೆ ಜೀವನದಲ್ಲಿ ಯಶಸ್ಸನ್ನು ಪಡೆದಾಗ ಕನ್ನಡಕ್ಕೆ ಸೇವೆ ಅವಶ್ಯಕವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾ ಮಹದೇವ್ ವಹಿಸಿದ್ದರು.
ದೇವರಾಜ್ ಅರಸ್ ವ್ಯವಹಾರ ನಿರ್ವಾಹಣಾ ವಿಭಾಗದ ಪ್ರಾಂಶುಪಾಲ ಕೆ.ಆರ್.ರವಿಕಿರಣ್, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಬಿ.ಗುರುದೇವ್, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ, ಕಾಂಗ್ರೆಸ್ ಮುಖಂಡ ತಿ.ರಂಗರಾಜು, ಆರ್.ಸಿ.ರಾಮಲಿಂಗಯ್ಯ, ಮಹಿಳಾ ಸಮಾಜದ ಅಧ್ಯಕ್ಷೆ ದೇವಕಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಚೌಡೇಗೌಡ, ಹೊಸಕೋಟೆ ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಬೈರಪ್ಪ, ತಾಲೂಕು ಕಾರ್ಯದರ್ಶಿಗಳಾದ ವಿ.ಸಿ.ಜ್ಯೋತಿಕುಮಾರ್, ಶಿವಕುಮಾರ್, ಖಜಾಂಚಿ ನಿರ್ಮಲ ಮುಂತಾದವರಿದ್ದರು.