Advertisement

ರಂಗೋಲಿ ಕಾರುಬಾರು

12:45 PM Apr 01, 2017 | |

ಬೆಂಗಳೂರಿನ ಚಿತ್ರಕಲಾ ಪರಿಷತ್‌ನ ಚಿತ್ರಸಂತೆಯನ್ನು ನೀವು ನೋಡಿರ ಬಹುದು. ವಿವಿಧ ಹೆಸರಾಂತ ಕಲಾವಿದರು ತಮ್ಮ ಕಲಾಕೃತಿಗಳನ್ನು ರಸ್ತೆಯಲ್ಲೇ ಇಟ್ಟು ಪ್ರದರ್ಶಿಸಿ, ಮಾರುವುದನ್ನು ಗಮನಿಸಿರುತ್ತೀರಿ. ಇಂತಹುದೇ ಕಲಾ ಪ್ರದರ್ಶನವೊಂದು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲೂ ನಡೆಯುತ್ತದೆ. ಆದರೆ ಕಾರಣ ಮತ್ತು ಹಿನ್ನೆಲೆ ಮಾತ್ರ ಬೇರೆ ಬೇರೆ.

Advertisement

ಹೆಚ್ಚಾಗಿ ತುಳಸಿ ಕಾರ್ತೀಕ ಪೂಜೆಯ ನಂತರದ ದಿನಗಳಲ್ಲಿ ಪ್ರತಿವರ್ಷ ಜಿಲ್ಲೆಯ ಕಾರವಾರದ ವಿಠೊಬ ಮತ್ತು ಮಾರುತಿ ದೇವಸ್ಥಾನಗಳ ವಾರ್ಷಿಕೋತ್ಸವಗಳು ಜರುಗುತ್ತವೆ. ದೇವಸ್ಥಾನದ ಅಕ್ಕಪಕ್ಕದಲ್ಲಿ ನೆಲೆಸಿರುವ ಅನೇಕ ಕುಟುಂಬಗಳು ಈ ದೇವರನ್ನು ಆಸ್ಥೆಯಿಂದ ಪೂಜಿಸುತ್ತಾರೆ.

ವಾರ್ಷಿಕೋತ್ಸವದ ಸಮಯದಲ್ಲಂತೂ ಈ ಮನೆಗಳಲ್ಲಿ ಹಬ್ಬದ ವಾತಾವರಣ. ಕಾರವಾರದ ಹೊರಗೆ ಕಾರ್ಯನಿಮಿತ್ತ ನೆಲೆಸಿರುವ ಈ ಕುಟುಂಬದ ಕುಡಿಗಳೆಲ್ಲ ತಪ್ಪದೇ ಈ ಉತ್ಸವಕ್ಕೆ ತಮ್ಮ ಮೂಲ ಮನೆಗಳಿಗೆ ಭೇಟಿ ನೀಡುತ್ತಾರೆ. ಅತಿಥಿಗಳನ್ನು ಸ್ವಾಗತಿಸಲು ಮನೆಯವರು ದೊಡ್ಡ ರಂಗೋಲಿಗಳನ್ನು ಹಾಕುತ್ತಾರೆ.

 ಇಂತಿಪ್ಪ ರಂಗೋಲಿಗೆ ಕಾರವಾರದ ಲೇಬಲ್‌ ಬಿದ್ದಿದೆ. ವಿಶಿಷ್ಟವಾದ ರಂಗೋಲಿಗಳು ಇವು. ಇದನ್ನು ನೋಡಿದವರಿಗೆ ರಂಗೋಲಿಯಲ್ಲಿ ಹೀಗೂ ಚಿತ್ತಾರ ಮೂಡಿಸಬಹುದಾ? ಅನ್ನೋ ಅನುಮಾನ ಶುರುವಾಗದೇ ಇದ್ದರೆ ಕೇಳಿ. ರಂಗೋಲಿ ಅಂದರೆ ಮನೆ ಮುಂದೆ ನಾಲ್ಕು ಹೂ ಹಸೆ ಬಿಡಿಸುವುದು ಅಲ್ಲ. ಇದನ್ನು ಮೀರಿ ವ್ಯಕ್ತಿ ಚಿತ್ರಗಳನ್ನು ಕೆತ್ತುವುದು. ರಸ್ತೆಗಳ ಈ ರೀತಿಯ ಬೆರಗು ಮೂಡಿಸುವಂತ ಚಿತ್ರ ಬಿಡಿಸುವುದು ಇಲ್ಲೇ ಇರಬೇಕು.

 ಇಲ್ಲಿನ ಸ್ವಯಂಸೇವಾ ಸಂಸ್ಥೆಗಳು ಈ ರಂಗೋಲಿಗಳ ಸ್ಪರ್ಧೆ ಏರ್ಪಡಿಸುವುದರಿಂದ ದೇವಸ್ಥಾನದ ಗಲ್ಲಿಯ ಮನೆಯವರು ಇಲ್ಲಿನ ಸ್ಥಳಿಯ ಕಲಾವಿದರನ್ನು ಕರೆಸಿ ರಂಗೋಲಿಗಳನ್ನು ಹಾಕಿಸುವುದು ಉಂಟು. ಮಾರುತಿ ದೇವಸ್ಥಾನದ ವಾರ್ಷಿಕೋತ್ಸವ ಅಂದರೆ ಅದರಲ್ಲಿ ಈ ರಂಗೋಲಿಗಳ ಪ್ರದರ್ಶನವೇ ಆಕರ್ಷಣೆ. ಇದನ್ನು ನೋಡಲೆಂದೇ ದೂರದ ಊರುಗಳಿಂದ ಜನ ಇಲ್ಲಿಗೆ ಬರುತ್ತಾರೆ. ಕ್ಯಾನ್ವಾಸಿನಲ್ಲಿನ ಚಿತ್ರಗಳಿಗಂತ ಹೆಚ್ಚು ಸೂಕ್ಷ್ಮವಾಗಿ ಮೂಡಿಬರುವ ಈ ರಂಗೋಲಿಗಳ ಸೃಷ್ಟಿಕರ್ತರು ಇಲ್ಲಿನ ಸ್ಥಳೀಯ ಪ್ರತಿಭೆಗಳು.

Advertisement

ರಸ್ತೆ ಚಿತ್ರಗಳಲ್ಲಿ ಚಿತ್ರಬಿಡಿಸಲು ಬಹಳ ಸಿದ್ಧತೆ ಬೇಕು. ರಸ್ತೆಗಳ ಮೇಲೆ ನೇರ ಚಿತ್ರಬಿಡಿಸುವುದಾದರೆ ಕುಸುರಿ ಬೇಡದ ಚಿತ್ರ ಆಯ್ಕೆ ಮಾಡುತ್ತಾರೆ. ಮನೆಗಳ ಮುಂದೆ ಚಿತ್ರ ಬಿಡಿಸುವುದಾದರೆ ಆ ಕುಟುಂಬದ ಸದಸ್ಯರು ಯಾವ ಚಿತ್ರ, ಹೇಗೆ ಏನು ಅನ್ನೋದನ್ನು ತೀರ್ಮಾನ ಮಾಡಬೇಕು. ಅವರು ಹೇಳಿದ ಚಿತ್ರ ಬಿಡಿಸುತ್ತಾರೆ. ಇದಕ್ಕೆಲ್ಲಾ ಎರಡು, ಮೂರು ದಿನಗಳು ಬೇಕು. ಮೊದಲು ಟ್ರೇಸ್‌ ಮಾಡಿ, ಅದಕ್ಕೆ ಹೊಂದುವ ಬಣ್ಣಗಳನ್ನು ತುಂಬುತ್ತಾ ಹೋಗುತ್ತಾರೆ. ಎಲ್ಲದಕ್ಕೂ ರಂಗೋಲಿಯೇ ಮೂಲ. ಬಿಳಿ ರಂಗೋಲಿ ಪುಡಿಗೆ ಬೇಕಾದ ಬಣ್ಣಗಳನ್ನು ಬೆರೆಸುತ್ತಾರೆ.

ಇದು, ನಮಗೆ ನಿಜವಾಗಿಯೂ ಆತ್ಮತೃಪ್ತಿ ನೀಡುವ ಸಂದರ್ಭ. ಇದನ್ನು ಭಗವಂತನ ಸೇವೆಯೆಂದೇ ನಾವು ಕೈಗೊಳ್ಳುತ್ತೇವೆ. ವರ್ಷಕ್ಕೊಮ್ಮೆ ಭಗವಂತನ ಹೆಸರಿನಲ್ಲಿ ಒಂದಿಷ್ಟು ಕಲಾರಾಧನೆ ನಡೆದು ಇಲ್ಲಿನ ಕಲಾವಿದರ ಪ್ರತಿಭೆಯ ಪ್ರದರ್ಶನವೂ ಆಗುವುದು ನಮಗೂ ಹೆಮ್ಮೆಯ ವಿಷಯ ಎನ್ನುತ್ತಾರೆ ಮಾರುತಿ ರಸ್ತೆಯ ನಿವಾಸಿ ರಾಮಾನಾಥ ಭಟ್‌. ಪೌರಾಣಿಕ , ಐತಿಹಾಸಿಕ ಕ್ಷಣಗಳು, ರಾಜಕೀಯ ನಾಯಕರು , ಸಿನಿಮಾ ತಾರೆಯರು , ವರ್ಷದ ವ್ಯಕ್ತಿಗಳು ಹೀಗೆ ವಿಷಯ ವೈಧ್ಯತೆಗೆ ಪ್ರಾಮುಖ್ಯತೆಯನ್ನು ನೀಡಿ, ಅತಿ ಸೂಕ್ಷ್ಮವಾಗಿ ಅವುಗಳಿಗೆ ಜೀವತುಂಬುತ್ತಾರೆ. ಒಟ್ಟಾರೆ, ಕಾರವಾರದ ರಂಗೋಲಿ ಕಣ್ಮನ ಸೆಳೆಯುತ್ತದೆ. 

ಸುನೀಲ ಬಾರಕೂರ 

Advertisement

Udayavani is now on Telegram. Click here to join our channel and stay updated with the latest news.

Next