Advertisement

14 ರವರೆಗೆ ರೆಡ್‌ ಅಲರ್ಟ್‌ ಘೋಷಣೆ

04:49 PM Jul 11, 2022 | Team Udayavani |

ಕಾರವಾರ: ರವಿವಾರ ಮಧ್ಯಾಹ್ನ 12 ರತನಕ ಭಾರೀ ಮಳೆ ಸುರಿಯಿತು. ನಂತರ ಸ್ವಲ್ಪ ಇಳಿಮುಖವಾಯಿತು. ಕೊಂಚ ಬಿಡುವು ನೀಡಿದ ಕಾರಣ ಜನರು ಪೇಟೆಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿದರು.

Advertisement

ಘಟ್ಟದ ಮೇಲೆ ಬನವಾಸಿಯಲ್ಲಿ ಭಾರೀ ಮಳೆ ಸುರಿದ ಕಾರಣ ಪ್ರಸಿದ್ಧ ಮಧುಕೇಶ್ವರ ದೇವಸ್ಥಾನ ಜಲಾವೃತವಾಯಿತು. ದೇವಸ್ಥಾನದ ಮೇಲ್ಚಾವಣಿ ದುರಸ್ತಿಯಾಗದ ಕಾರಣ ಮಳೆ ನೀರು ದೇವಸ್ಥಾನ ಒಳ ಆವರಣ ಸೇರಿತು. ಪುರಾತತ್ವ ಇಲಾಖೆ ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಕ್ರಮಕ್ಕೆ ಮುಂದಾಗಬೇಕು ಎಂಬ ಮಾತು ಅಧಿಕಾರಿ ವಲಯದಲ್ಲಿ ಚರ್ಚೆಯಾಯಿತು.

ಮಳೆ ಸ್ವಲ್ಪ ವಿರಾಮ ನೀಡಿದ ಕಾರಣ ಗದ್ದೆ ಹಾಗೂ ಮನೆಗಳಿಗೆ ನುಗ್ಗಿದ್ದ ಮಳೆ ನೀರು ಇಳಿದಿದೆ. ಮನೆಯೊಳಗೆ ಬಂದ ಕೆಸರನ್ನು ಹೊರಗೆ ತೆಗೆಯಲು ಮುಂದಾದರು. ಹವಾಮಾನ ಇಲಾಖೆ ಗುರುವಾರದ ವರೆಗೆ ಕರಾವಳಿಯಲ್ಲಿ ಭಾರೀ ಮಳೆ ಬೀಳುವ ಸೂಚನೆ ನೀಡಿದೆ. ಹಾಗಾಗಿ ಮಳೆಯ ಭೀತಿ ತಪ್ಪಿಲ್ಲ. ಜಿಲ್ಲೆಯ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ಶರಾಬಿ, ಭೀಮಾ ನದಿ ಪಾತ್ರದ ಜನರ ಸಂಕಷ್ಟ ಆತಂಕ ಮುಂದುವರಿದಿದೆ.

ನದಿ ದಂಡೆಯ ಜನ ಜಾಗ್ರತೆಯಿಂದ ಇರುವಂತೆ ಜಿಲ್ಲಾಡಳಿತ ಸಂದೇಶಗಳನ್ನು ಗ್ರಾಮದ ಸೆಕ್ರೆಟರಿಗಳ ಮೂಲಕ ತಲುಪಿಸುತ್ತಿದೆ.

ಸನ್ನದ್ಧ ಸ್ಥಿತಿಯಲ್ಲಿ ಕಾಳಜಿ ಕೇಂದ್ರಗಳು: ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಶುಕ್ರವಾರ ತೆರೆದಿದ್ದ ಕಾಳಜಿ ಕೇಂದ್ರಗಳನ್ನು ಬರುವ ಗುರುವಾರದತನಕ ಸನ್ನದ್ಧ ಸ್ಥಿತಿಯಲ್ಲಿ ಇಡಲು ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ.

Advertisement

ಕಾಳಜಿ ಕೇಂದ್ರಗಳು ಜು. 14ರ ತನಕ ಮುಂದುವರಿಯಲಿವೆ ಎಂದು ಜಿಲ್ಲಾಡಳಿತ ಹೇಳಿದೆ. ಮಳೆ ತೀವ್ರಗೊಳ್ಳುವ ಸೂಚನೆ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಸುರಕ್ಷಿತ ಸ್ಥಳವಾದ ಶಾಲೆ ಹಾಗೂ ಎತ್ತರದ ಪ್ರದೇಶಗಳಿಗೆ ತೆರಳಲು ಮಾಹಿತಿ ನೀಡಲಾಗುತ್ತಿದೆ. ಚಿಕ್ಕನಕೋಡು ವ್ಯಾಪ್ತಿಯ, ಹೆಬ್ಬೆ$çಲು, ಗುಂಡಬಾಳ, ಮಾಡಗೇರಿ, ಕುಮಟಾದ ಊರಕೇರಿ, ಕಡವು, ಕಾರವಾರದ ಅಸ್ನೋಟಿ, ಅರಗಾದಲ್ಲಿ ಕಾಳಜಿ ಕೇಂದ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ಮಳೆಯಿಂದ ಆದ ಹಾನಿ: ಈ ಮುಂಗಾರಿನಲ್ಲಿ ಕಳೆದ ಜೂನ್‌ನಿಂದ ಈತನಕ ಮಳೆ ಕಾರಣದಿಂದ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ದಾಖಲಾಗಿದೆ. ಭಟ್ಕಳ, ಕಾರವಾರ, ಜೋಯಿಡಾದಲ್ಲಿ ಒಂದು, ಶಿರಸಿಯಲ್ಲಿ 3 ಮನೆ ಸಂಪೂರ್ಣ ಕುಸಿದಿವೆ. ಹೊನ್ನಾವರದಲ್ಲಿ 8, ಇತರೆ ತಾಲೂಕಿನಲ್ಲಿ 8 ಮನೆಗಳು ಅರ್ಧ ಭಾಗ ಕುಸಿದಿವೆ. ಹಳಿಯಾಳ, ಕಾರವಾರ, ಕುಮಟಾದಲ್ಲಿ ತಲಾ 25 ಮನೆಗಳು ಭಾಗಶಃ ಹಾನಿಯಾಗಿದ್ದರೆ. ಜಿಲ್ಲೆಯಲ್ಲಿ ಒಟ್ಟು 196 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಡಳಿತ ಹೇಳಿದೆ. ಎರಡು ಜಾನುವಾರು ಸಾವನ್ನಪ್ಪಿವೆ.

ಕೃಷಿ ಇಲಾಖೆಗೆ, ಲೋಕೋಪಯೋಗಿ ಇಲಾಖೆಗೆ ಆದ ಹಾನಿಯ ಸಮೀಕ್ಷೆಯನ್ನು ಜು. 14ರ ನಂತರ ನಡೆಸಲಾಗುವುದು. ಮಳೆ ಕಡಿಮೆಯಾದ ಕೂಡಲೇ ಈ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾಡಳಿತ ಹೇಳಿದೆ. ಈಗ ಆದ ನಷ್ಟ ದಾಖಲಾಗುತ್ತಿದೆ. ನಿಖರ ಮಾಹಿತಿ ಮುಂದಿನ ಜುಲೈ ಎರಡನೇ ವಾರದ ಕೊನೆ ಅಥವಾ ಮೂರನೇ ವಾರದ ಆರಂಭದ ವೇಳೆಗೆ ಲಭ್ಯವಾಗಲಿದೆ ಎಂದು ಹೇಳಿದೆ.

ಮಳೆ ಪ್ರಮಾಣ: ಕಳೆದ 24 ಗಂಟೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಪೈಕಿ ಜೊಯಿಡಾದಲ್ಲಿ ಹೆಚ್ಚು ಮಳೆ ಸುರಿದಿದೆ. ಕರಾವಳಿಯಲ್ಲೇ ಮಳೆ ಬರುವ ಗುರುವಾರದತನಕ ಮುಂದುವರಿಯುವ ಸೂಚನೆಯನ್ನು ಜಿಲ್ಲಾಡಳಿತ ನೀಡಿದೆ. ಅಂಕೋಲಾದಲ್ಲಿ 31.7 ಮಿ.ಮೀ, ಭಟ್ಕಳ 17.8 ಮಿ.ಮೀ, ದಾಂಡೇಲಿ 26.2 ಮಿ.ಮೀ, ಹಳಿಯಾಳ 25.6 ಮಿ.ಮೀ, ಹೊನ್ನಾವರ 12.2 ಮಿ.ಮೀ, ಕಾರವಾರ 20 ಮಿ.ಮಿ, ಕುಮಟಾ 21.1 ಮಿ.ಮೀ, ಮುಂಡಗೋಡ 6.4 ಮಿ.ಮೀ, ಸಿದ್ದಾಪುರ 46.2 ಮಿ.ಮೀ, ಶಿರಸಿ 24.5 ಮಿ.ಮೀ, ಜೋಯಿಡಾ 60 ಮಿ.ಮೀ, ಯಲ್ಲಾಪುರ 19.6 ಮಿ.ಮೀ. ಮಳೆಯಾಗಿರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next