ಕಾರವಾರ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉತ್ತರ ಕನ್ನಡ ಘಟಕದಿಂದ ಕಾರವಾರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಬಂಧನಕ್ಕೆ ಆಗ್ರಹಿಸಿ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಾದು ಬಂತು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಸ್ . ಫಕೀರಪ್ಪ ನೇತೃತ್ವದಲ್ಲಿ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿದ ನಂತರ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ನೀಡಲಾಯಿತು. ಜಿಲ್ಲಾಧಿಕಾರಿಯ ಅನುಪಸ್ಥಿತಿಯಲ್ಲಿ ಜಿಲ್ಲಾ ಸರ್ವೆ ಇಲಾಖೆಯ ಉಪ ನಿರ್ದೇಶಕ ರಾಜು ಪೂಜಾರಿ ಮನವಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಫಕ್ಕೀರಪ್ಪ ಲಕ್ಷಾಂತರ ಮುಸ್ಲಿಂ ಮಹಿಳೆಯರನ್ನು ಅವಮಾನಿಸಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಬಂಧಿಸಲು ಸರ್ಕಾರವನ್ನು ಒತ್ತಾಯಿಸಿದರು. ಕೋಮು ಸೌಹಾರ್ದ ಹಾಳು ಮಾಡುವ ಕಲ್ಲಡಕನ್ನು ಮಾತಾಡಲು ಬಿಟ್ಟದ್ದೇ ಸರಿಯಲ್ಲ. ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ, ಶಾಂತತೆಗೆ ಭಂಗ ತರುವ ಆತನನ್ನು ಬಂಧಿಸಬೇಕೆಂದು ಒತ್ತಾಯಿಸಿದರು .
ಲಿಂಗಾಯತರು, ಒಕ್ಕಲಿಗರು ವರದಿ ನೋಡದೆ, ಕಾಂತರಾಜು ಆಯೋಗದ ವರದಿ ತಿರಸ್ಕರಿಸಿ ಎನ್ನುತ್ತಾರೆ. ಇದು ಸರಿಯಲ್ಲ. ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸುವಾಗ, ಎಂಎಲ್‌ಎ, ಎಂಪಿ ಟಿಕೆಟ್ ಕೇಳುವಾಗ, ಮಂತ್ರಿಗಳಾಗುವಾಗ ಜಾತಿ ಹೆಸರಲ್ಲಿ ಬೇಡಿಕೆ ಇಡುತ್ತಾರೆ. ಆದರೆ ಬಡವರು ಜಾತಿ ಹೆಸರಲ್ಲಿ ಸೌಲಭ್ಯ ಪಡೆಯವ ಕಾಂತಾರಾಜು ವರದಿ ವಿರೋಧಿಸುತ್ತಾರೆ. ಇದೇ ವಿಪರ್ಯಾಸ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಸಾಮಾಜಿಕ ಸಮೀಕ್ಷೆ ವರದಿ ಸ್ವೀಕಾರಮಾಡಿ, ಬಡವರಿಗೆ ಹೆಚ್ಚಿನ ಸೌಕರ್ಯ ನೀಡಬೇಕು ಎಂದರು.
ಚಿಕ್ಕಮಗಳೂರು ಜಿಲ್ಲೆಯ ಗೊಲ್ಲರ ಹಟ್ಟಿಗೆ ದಲಿತರ ಯುವಕ ಹೋದ ಎಂದು ಹಲ್ಲೆಯಾಗಿದೆ. ಚಿತ್ರದುರ್ಗದ ಗೊಲ್ಲರ ಹಟ್ಟಿ ದೇವಸ್ಥಾನಕ್ಕೆ ದಲಿತರನ್ನು ಒಳಗೆ ಬಿಡದೆ ಅಸ್ಪೃಶ್ಯತೆ ಆಚರಿಸಿದವರನ್ನು ಬಂಧಿಸಲು ಆಗ್ರಹಿಸಿದರು. ಇದು ಸಂವಿಧಾನ ವಿರೋಧ ಕ್ರಮವಾಗಿದೆ. ಅಸ್ಪೃಶ್ಯತೆ ಆಚರಿಸುವವರನ್ನು ಬಂಧಿಸಬೇಕು ಎಂದು ಫಕ್ಕೀರಪ್ಪ ಹೇಳಿದರು.
ಪ್ರತಿಭಟನೆಯಲ್ಲಿ ಹುಲಿಗೆಪ್ಪ ಬೋವಿ ವಡ್ಡರ, ಮಂಜುನಾಥ ಹಳ್ಳೇರ, ಗೋಪಾಲ ನಡಕಿನ ಮನಿ, ಬಸವರಾಜ ಹಳ್ಳಮ್ಮನವರ, ಸಂತೋಷ ಕಟ್ಟಿಮನಿ,ಸಂಗೀತಾ ವಾಗ್ಮೋರೆ, ಪರಶುರಾಮ ಸಗರ ನಾಯಕ ಮುಂತಾದವರು ಭಾಗವಹಿಸಿದ್ದರು.