ಕಾರವಾರ: ನಗರಸಭೆ ಒಡೆತನದ ಈಜುಕೊಳ ಬಾಗಿಲು ಮುಚ್ಚಿ 6 ವರ್ಷ ಕಳೆದಿದ್ದು ಈಜು ಪ್ರಿಯರಿಗೆ ಈಜುಕೊಳ ಇದ್ದೂ ಇಲ್ಲದಂತಾಗಿದೆ. ಹಲವು ಗೊಂದಲಗಳಿಂದ ಮುಚ್ಚಿಹೋದ ಈಜುಕೊಳವನ್ನು ಗುತ್ತಿಗೆ ಪಡೆದವರ ಅವಧಿ ಮುಗಿದ ನಂತರ ಬೇರೊಬ್ಬರು ಗುತ್ತಿಗೆ ಪಡೆದು ಅದನ್ನು ನಡೆಸದೇ ವರ್ಷಗಟ್ಟಲೇ ನಗರಸಭೆ ಜೊತೆ ಸಂಘರ್ಷಕ್ಕೆ ಇಳಿದಿದ್ದರಿಂದ ಅದರ ನಿರ್ವಹಣೆ ಸಹ ಇಲ್ಲದೆ ಪಾಳು ಬಿದ್ದು ಪಾಚಿಗಟ್ಟಿತು.
Advertisement
ನಂತರ ಅದರ ನವೀಕರಣಕ್ಕೆ ನಗರಸಭೆ ಮುಂದಾಯಿತಾದರೂ, ಕಾಮಗಾರಿ ಗುತ್ತಿಗೆ ಪಡೆದವರು ಆಸಕ್ತಿ ವಹಿಸದ ಕಾರಣ ಈಜುಕೊಳ ಮತ್ತೆ ಪಾಳು ಬಿತ್ತು. ನವೀಕರಣ ಕೆಲಸ ಕುಂಟುತ್ತಾ ಸಾಗಿದ್ದು, ಸದ್ಯಕ್ಕೆ ಕೆಲಸ ಮುಗಿಯುವ ಸಾಧ್ಯತೆ ಇಲ್ಲ.
ಗಬ್ಬುನಾರುತ್ತಿದೆ.
Related Articles
Advertisement
ಕಾರವಾರಕ್ಕೆ ಆಗಮಿಸುವ ಪ್ರವಾಸಿಗರು ಸಮುದ್ರದಲ್ಲಿ ಸ್ನಾನ ಮಾಡಿ ನಂತರ ಈಜುಕೊಳದಲ್ಲಿ ಸ್ನಾನ ಮಾಡಲು ಆಸಕ್ತಿ ತೋರುತ್ತಾರೆ. ಅಲ್ಲದೆ ವಾರದ ರಜೆ ಅವಧಿಯಲ್ಲಿ ಮಕ್ಕಳು, ವಿದ್ಯಾರ್ಥಿಗಳು ಈಜು ಚಟುವಟಿಕೆಯಲ್ಲಿ ತೊಡಗಲು ಮುಂದಾಗುತ್ತಾರೆ.
ಆದರೆ ನಗರದಲ್ಲಿ ಸಿಹಿನೀರಿನ ಈಜುಕೊಳ ಇದ್ದೂ ಪ್ರಯೋಜನಕ್ಕೆ ಬರದಂತಾಗಿದೆ. ಕೆಲವು ವರ್ಷಗಳಿಂದಲೂ ಈ ಸಮಸ್ಯೆ ಮುಂದುವರೆದಿದೆ ಎಂದು ಸ್ಥಳೀಯರಾದ ಗಿರೀಶ್ ಬಿ. ಬೇಸರ ವ್ಯಕ್ತಪಡಿಸಿದರು. ಈಜುಕೊಳ ನವೀಕರಣ ಕಾಮಗಾರಿಯನ್ನು ಕಳೆದ ಬೇಸಿಗೆಯಲ್ಲೇ ಮುಗಿಸಲು ಸೂಚಿಸಲಾಗಿತ್ತು. ನಿಧಾನಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಕೆಲವು ದಿನದಿಂದ ಕೆಲಸವೂ ನಡೆಯುತ್ತಿಲ್ಲ .ಈ ಬಗ್ಗೆ ಕ್ರಮಕ್ಕೆ ಮುಂದಾಗಲಾಗುವುದು ಎಂದು ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಜುಕೊಳದಲ್ಲಿ ಪಾಚಿಗಟ್ಟಿರುವ ನೀರನ್ನು ತೆರವು ಮಾಡಿ ಕೊಳವನ್ನು ಶುಚಿಯಾಗಿಡುವಂತೆ ಗುತ್ತಿಗೆ ಪಡೆದ ಸಂಸ್ಥೆಗೆ ಸೂಚಿಸಲಾಗುವುದು ಎಂದು ನಗರಸಭೆ ಎಇಇ ಸದಾನಂದ ಸಾಳೆಹಿತ್ತಲ ತಿಳಿಸಿದ್ದಾರೆ. ಈಜುಕೊಳದ ನವೀಕರಣ ಕಾಮಗಾರಿ ಇಷ್ಟರೊಳಗೆ ಪೂರ್ಣಗೊಳ್ಳಬೇಕಿತ್ತು. ಸ್ವ ಆಸಕ್ತಿಯಿಂದ ಈಜುಕೊಳದ ನಿರ್ವಹಣೆಗೆ ಮುಂದೆ ಬಂದಿರುವಸಂಸ್ಥೆಯವರು ಅಂದಾಜು ರೂ. 23 ಲಕ್ಷ ವೆಚ್ಚದಲ್ಲಿ ನವೀಕರಣ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈಜು ಕೊಳದ ನವೀಕರಣ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಹಲವು ಬಾರಿ ನೊಟೀಸ್ ನೀಡಲಾಗಿದೆ. ತ್ವರಿತವಾಗಿ ಕೆಲಸ ಮಾಡುವಂತೆ ಇನ್ನೊಮ್ಮೆ ಸೂಚಿಸಲಾಗುವುದು.
*ಸದಾನಂದ ಸಾಳೆಹಿತ್ತಲ ಎಇಇ .
ನಗರಸಭೆ.ಕಾರವಾರ.