Advertisement
ಕಾರವಾರ : ಶಿರವಾಡದ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಮಾರುತಿ ನಾಯಕ್ ಪ್ರಕರಣಕ್ಕೆ ಸಂಬಂಧಿಸಿದಂತೆ , ಆತ ಬರೆದಿದ್ದಾನೆ ಎನ್ನಲಾದ ಡೆತ್ ನೋಟ್ ನಲ್ಲಿದ್ದ ಆರು ಹೆಸರುಗಳ ಪೈಕಿ ಮೂವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ . ಹಾಗೂ ಡೆತ್ ನೋಟ್ ನಲ್ಲಿ ಹೆಸರಿಸಲಾಗಿದ್ದ ಮೂವರು ಪೊಲೀಸ್ ಸಿಬಂದಿಗಳನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿದ್ದಾರೆ.
Related Articles
ಡೆತ್ ನೋಟ್ ನಲ್ಲಿ ಮಾರುತಿ ಹೆಸರಿಸಿದ್ದ ಎಲಿಷಾ ಎಲಕಪಾಟಿ, ಬಸವರಾಜ, ಸುರೇಶ್ ಎಂಬುವವರನ್ನು ಕಾರವಾರ ಪೊಲೀಸರು ನಿನ್ನೆಯೇ ಬಂಧಿಸಿದ್ದಾರೆ. ದಲಿತ ಮುಖಂಡ ಎಲಿಷಾ ಎಲಕಪಾಟಿ ಹಿಂದೂ ಧರ್ಮದ ವಿರುದ್ಧ ನೀಡಿದ ಹೇಳಿಕೆಯನ್ನ ಮಾರುತಿ ನಾಯಕ್ ರೆಕಾರ್ಡ್ ಮಾಡಿದ್ದ. ಅಲ್ಲದೇ ಆ ವಿಡಿಯೋ ರಿಲೀಸ್ ಮಾಡಿದ್ದ. ಕಳೆದ ತಿಂಗಳು ನಡೆದಿದ್ದ ಈ ಘಟನೆಯ ನಂತರ ಎಲಿಷಾನನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಆತ ಬಿಡುಗಡೆಯಾಗಿದ್ದ.
Advertisement
ಬಳಿಕ ಎಲಿಷ ಎಲಕಪಾಟಿ ಕುಟುಂಬಸ್ಥರು ಮಾರುತಿ ನಾಯಕ್ ಮೇಲೆ ಹಲ್ಲೆ ನಡೆಸಿದ ಘಟನೆ ಸಹ ನಡೆದು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಲಿಷಾ ಕುಟುಂಬಕ್ಕೆ ಪೊಲೀಸರು ಬೆಂಬಲವಾಗಿ ನಿಲ್ಲುವ ಮೂಲಕ ತನಗೆ ಕಿರುಕುಳ ನೀಡುತ್ತಿರುವುದಾಗಿ ಮಾರುತಿ ನಾಯಕ್ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು , ಅದನ್ನು ಕುಟುಂಬದವರು ಆತ್ಮಹತ್ಯೆಯ ಮರುದಿನ ಪೊಲೀಸರಿಗೆ ನೀಡಿದ್ದರು.ಅಕ್ಟೋಬರ್ 20ರಂದು ಮಾರುತಿ ನಾಯಕ್ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆ
ಪ್ರಕರಣವು ಇದೀಗ ರಾಜಕೀಯ ತಿರುವು ಪಡೆಯುವ ಸಾಧ್ಯತೆ ಕಂಡು ಬಂದ ಕಾರಣ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮಾರುತಿ ನಾಯಕ್ ನ ಮನಸ್ಥಿತಿ ಹಾಗೂ ಹಿಂದೆ 2019ರಲ್ಲಿ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿಕೊಂಡು , ಎದುರಾಳಿಯ ಮೇಲೆ ಆರೋಪ ಹೊರಿಸಿದ ಪ್ರಕರಣದಲ್ಲಿ ‘ ಬಿ’ ರಿಪೋರ್ಟ್ ಆಗಿರುವುದನ್ನು ಪೋಲೀಸರು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಮುಂದಾಗಿದ್ದಾರೆ. ಇನ್ನೊಂದೆಡೆ ಬಿಜೆಪಿ ಮಾರುತಿ ನಾಯಕ್ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಸ್ಥಿತಿಯ ಲಾಭ ಪಡೆಯಬಹುದು ಎಂಬ ಸುಳಿವು ಸಿಗುತ್ತಿದ್ದಂತೆ ಈ ಪ್ರಕರಣವನ್ನು ಸಿಐಡಿಗೆ ವಹಿಸಲು ಸರಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.